Advertisement

ಫೈಬರ್‌ ದೋಟಿಗೆ ಸಹಾಯಧನ: ಪ್ರಸ್ತಾವ

12:22 AM Feb 18, 2022 | Team Udayavani |

ಪುತ್ತೂರು: ಅಡಿಕೆ ಕೊಯ್ಲು, ಔಷಧ ಸಿಂಪಡಣೆ ಯನ್ನು ನೆಲದಿಂದಲೇ ನಿರ್ವಹಿಸ ಬಹುದಾಗಿರುವ, ಇತ್ತೀಚೆಗೆ ಬಳಕೆಗೆ ಬರುತ್ತಿರುವ ಕಾರ್ಬನ್‌ ಫೈಬರ್‌ ದೋಟಿಗೆ ತೋಟಗಾರಿಕೆ ಇಲಾಖೆ ಮೂಲಕ ಸಬ್ಸಿಡಿ ಒದಗಿಸಿ ಬೆಳೆಗಾರರಿಗೆ ನೆರವಾಗಬೇಕು ಎಂದು ಬುಧವಾರ ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾವವಾಗಿದ್ದು, ತೋಟಗಾರಿಕೆ ಸಚಿವರು ಇದಕ್ಕೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

Advertisement

ಗೃಹಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ ಟಿ.ಡಿ. ರಾಜು ಗೌಡ ಅವರು ಫೈಬರ್‌ ದೋಟಿ ಬಳಕೆಯ ಅನಿವಾರ್ಯತೆಯ ಬಗ್ಗೆ ಉಲ್ಲೇಖೀಸಿ ಇದರಿಂದ ರೈತರಿಗೆ ಸಹಾಯವಾಗಲಿದ್ದು ಇದರ ಧಾರಣೆ ಹೆಚ್ಚಾಗಿರುವ ಕಾರಣ ತೋಟಗಾರಿಕೆ ಇಲಾಖೆ ಮೂಲಕ ಸಬ್ಸಿಡಿ ನೀಡುವಂತೆ ಮನಲಿ ಮಾಡಿದರು.

ಸ್ಪೀಕರ್‌ ಕಾಗೇರಿ ಮನವರಿಕೆ :

ಇದಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಧ್ವನಿಗೂಡಿಸಿ, ಅಡಿಕೆ ಕೊಯ್ಯುವ, ಔಷಧ ಸಿಂಪಡಣೆಯ ಕಾರ್ಮಿಕರ ಅಭಾವ ಹೆಚ್ಚಾಗಿದ್ದು ನೆಲದಲ್ಲಿ ನಿಂತೇ ಈ ಕೆಲಸಗಳನ್ನು ಮಾಡಬಹುದಾದ ಹೊಸ ಮಾದರಿಯ ದೋಟಿ ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ. ಮರ ಏರುವ ಸಂದರ್ಭದಲ್ಲಿ ಸಂಭವಿಸಬಹುದಾದ ಅವಘಡಗಳನ್ನು ಇದರಿಂದ ತಪ್ಪಿಸಬಹುದಾಗಿದೆ. ಆದ್ದರಿಂದ ದೋಟಿಗೆ ಸಬ್ಸಿಡಿ ನೀಡಿದರೆ ಬೆಳೆಗಾರರು ಸುಲಭವಾಗಿ ಖರೀದಿಸಲು ಸಾಧ್ಯ ಎಂದು ಸಚಿವರಿಗೆ ಮನವರಿಕೆ ಮಾಡಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬಳಿ ವಿಷಯ ಪ್ರಸ್ತಾವಿಸಿದ ಸಭಾಧ್ಯಕ್ಷರು, ನೀವು ಅಡಿಕೆ ಮಂಡಳಿ ಅಧ್ಯಕ್ಷರಾಗಿದ್ದೀರಿ. ಕ್ಯಾಬಿನೆಟ್‌ನಲ್ಲೂ ಇದ್ದೀರಿ. ಹಾಗಾಗಿ ನೀವು ಇದನ್ನು ಮಾಡುವ ಸ್ಥಾನದಲ್ಲಿದ್ದು, ಎಲ್ಲರೂ ಒಟ್ಟುಗೂಡಿ ನಿರ್ಧಾರ ತೆಗೆದುಕೊಳ್ಳಿ ಎಂದರು.

Advertisement

ಉತ್ತರಿಸಿದ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ, ದೋಟಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸಬ್ಸಿಡಿಯಲ್ಲಿ ನೀಡಲು ಕ್ರಮ ಕೈಗೊಳ್ಳುವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next