Advertisement

ಹಸಿ ಅಡಕೆ ಕೊಯ್ಲಿಗೆ ಯೋಜನೆ

03:37 PM Dec 22, 2019 | Team Udayavani |

ಶಿರಸಿ: ರೈತಸ್ನೇಹಿ ಯೋಜನೆಗಳಿಂದ ಸಹಕಾರಿ ವಲಯದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಶಿರಸಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘವು ತನ್ನ ಸದಸ್ಯರಿಗಾಗಿ ರೈತರ ಅಡಕೆ ಬೆಳೆ ಕೊಯ್ದು, ಹಸಿ ಅಡಕೆ ವಿಕ್ರಯಿಸುವ ಹೊಸ ಯೋಜನೆ ಜಾರಿಗೆ ತರುವ ಮೂಲಕ ಗಮನಸೆಳೆದಿದೆ.

Advertisement

ಕೃಷಿ ಕೂಲಿ ಸಮಸ್ಯೆ, ರೈತ ಕುಟುಂಬದಲ್ಲಿ ದುಡಿಯುವ ಕೈಗಳ ಕೊರತೆಯಿಂದಾಗಿ ಇಂದು ಹಲವು ಕುಟುಂಬಗಳಿಗೆ ತಾವು ಬೆಳೆದ ಬೆಳೆ ಕಟಾವು ಮಾಡುವುದು ಸಮಸ್ಯೆಯಾಗಿದೆ. ಡಿಸೆಂಬರ ತಿಂಗಳೆಂದರೆ ಎಲ್ಲ ಕಡೆ ಒಂದೇ ಸಮಯಕ್ಕೆ ಕೊನೆ ಕೊಯ್ಲು ಆರಂಭವಾಗುವುದರಿಂದ ಕೊನೆ ಗೌಡರಿಂದ ಹಿಡಿದು, ಕೃಷಿ ಕಾರ್ಮಿಕರ ಕೊರತೆ ಉಂಟಾಗುತ್ತದೆ. ಸರಿಯಾದ ಸಮಯಕ್ಕೆ ಕೊಯ್ಲು ಸಹ ಆಗದಂತಾಗುತ್ತದೆ. ಇದು ಅಡಕೆ ಬೆಳೆಗಾರರ ಸರ್ವೇ ಸಾಮಾನ್ಯ ಸಮಸ್ಯೆಯಾಗಿದ್ದು ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘವು ತನ್ನ ಸದಸ್ಯರಿಗಾಗಿ ಈ ಯೋಜನೆ ರೂಪಿಸಿದೆ.

ಚಿಕ್ಕ ಹಿಡುವಳಿದಾರರಿಂದ ಹಿಡಿದು ಮಧ್ಯಮ, ದೊಡ್ಡ ಬೆಳೆಗಾರರಾದ ಸಂಘದ ಎಲ್ಲ ಸದಸ್ಯ ರೈತರಿಗಾಗಿ ಸಂಘವು ಈ ಪ್ರಮುಖವಾದ ಯೋಜನೆ ಪ್ರಸಕ್ತ ವರ್ಷದಿಂದ ಜಾರಿಯಲ್ಲಿ ತಂದಿದೆ. ಕಳೆದ ವರ್ಷವಷ್ಟೇ ಗ್ರಾಮೀಣ ಭಾಗದಲ್ಲಿ ಹಸಿ ಅಡಕೆ ಟೆಂಡರ್‌ ಪ್ರಕ್ರಿಯೆ ಆರಂಭಿಸಿದ ಸಂಘವು ಈ ವರ್ಷದಿಂದ ಈ ಯೋಜನೆ ರೈತರಿಗೆ ಅನುಕೂಲವಾಗಲಿದೆ ಎಂದು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪಿ ಹೆಗಡೆ ಕೊಟ್ಟೆಗದ್ದೆ ಅಭಿಪ್ರಾಯಪಟ್ಟಿದ್ದಾರೆ.

ಇದರಿಂದ ಕೃಷಿ ಕಾರ್ಮಿಕರಿಗೆ ಖಾಯಂ ಉದ್ಯೋಗ, ರೈತರ ದೃಷ್ಟಿಯಿಂದ ಅಡಕೆ ಕೊಯ್ಲು ಮತ್ತಷ್ಟು ಸುಲಭವಾಗಲಿದೆ ಎಂದು ಸಂಘದ ಕೃಷಿ ಸಲಹೆಗಾರ ಗುರುಮೂರ್ತಿ ಹೆಗಡೆ ತುಂಬೆಮನೆ ಹೇಳಿದ್ದಾರೆ. ಸಂಘವೇ ನಿರ್ಧರಿಸಿದ ದಿನದಂದು ಕೊನೆ ಗೌಡರು, ಕೃಷಿ ಕಾರ್ಮಿಕರನ್ನು ರೈತನ ತೋಟಕ್ಕೆ ಕಳುಹಿಸಿ ಕೊನೆಕೊಯ್ಲು ನಡೆಸಿಕೊಡುತ್ತದೆ. ಸಂಘದ ವಾಹನದ ಮೂಲಕ ಸಾಗಾಣಿಕೆ ಮಾಡಿ ಹಸಿ ಅಡಕೆ ಟೆಂಡರ ಪ್ರಕ್ರಿಯೆಯ ಮೂಲಕ ಪಾರದರ್ಶಕ ರೀತಿಯಲ್ಲಿ ಹಸಿ ಅಡಕೆ ಮಾರಾಟ ಕೂಡ ಮಾಡಿಸಿಕೊಡುತ್ತದೆ. ಇದರಿಂದ ರೈತನಿಗೆ ನಿರಾತಂಕವಾಗಿ ವರ್ಷದ ಕೆಲಸ ನಡೆಯುವುದಲ್ಲದೆ, ಅನಗತ್ಯ ಒತ್ತಡ ಕಡಿಮೆ ಮಾಡುತ್ತದೆ. ಪ್ರಸಕ್ತ ವರ್ಷ ಹೆಗಡೆಕಟ್ಟಾ ಹಸಿ ಅಡಕೆ ಟೆಂಡರಿನಲ್ಲಿ ಪ್ರತಿ ಕ್ವಿಂಟಲಿಗೆ 4350ರ ಗಡಿ ದಾಟಿ ಹಾಗೂ ಗೋಟು ಅಡಕೆ 4580 ರೂಪಾಯಿಗೂ ಹೆಚ್ಚಿನ ದರಕ್ಕೆ ಮಾರಾಟವಾಗಿ ಹೆಗಡೆಕಟ್ಟಾ ಭಾಗದ ರೈತರಲ್ಲಿ ಹರ್ಷ ಮೂಡಿಸಿದ್ದಷ್ಟೇ ಅಲ್ಲದೆ ನೂತನ ಕೊನೆಕೊಯ್ಯುವ ಯೋಜನೆ ಮತ್ತಷ್ಟು ಆಶಾಭಾವನೆ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next