Advertisement

ಆದಿ ಪುರಾಣ!

08:00 AM Oct 18, 2017 | |

“ಜೋಗಿ’ ಸಿನಿಮಾ ನೋಡಿದವರಿಗೆ ಬಹುಶಃ “ಬಿಡ್ಡ’ ಪಾತ್ರದ ನೆನಪು ಇದ್ದೇ ಇರುತ್ತೆ. ಆ ಪಾತ್ರದ ಮೂಲಕ ಜೋರು ಸುದ್ದಿಯಾದ ಆದಿ ಲೋಕೇಶ್‌, ಆ ಬಳಿಕ ಒಂದರ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸಿದ್ದುಂಟು. ಬಹುತೇಕ ಚಿತ್ರಗಳಲ್ಲಿ ವಿಲನ್‌ ಆಗಿಯೇ ಗುರುತಿಸಿಕೊಂಡ ಆದಿಲೋಕೇಶ್‌, “ಪೂಜಾರಿ’ ಎಂಬ ಸಿನಿಮಾದಲ್ಲಿ ಹೀರೋ ಆಗಿದ್ದೂ ಉಂಟು. “ಜೋಗಿ’ ಚಿತ್ರದ “ಬಿಡ್ಡ’ ಪಾತ್ರ ಕ್ಲಿಕ್‌ ಆಗಿದ್ದೇ ತಡ, ಅದೇ ಹೆಸರಿನ ಚಿತ್ರದಲ್ಲೂ ಆದಿ ಲೋಕೇಶ್‌ ಕಾಣಿಸಿಕೊಂಡರು.

Advertisement

ಈವರೆಗೆ 165 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, “ಬಿಗ್‌ ಬಾಸ್‌’ ಮನೆಗೂ ಹೋಗಿ ಬಂದರು. ಅಲ್ಲಿಂದ ಬಂದ ನಂತರ ಎರಡು ಚಿತ್ರ ಬಿಟ್ಟರೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಕಾರಣ, ಶೂಟಿಂಗ್‌ ವೇಳೆ ಕಾಲಿಗೆ ಬಿದ್ದ ಬಲವಾದ ಪೆಟ್ಟು! ಅದರಿಂದ ಸಾಕಷ್ಟು ನೋವು ಅನುಭವಿಸಿದರು. ಅವರಿಗೆ ಸುಧಾರಿಸಿಕೊಳ್ಳಲು ಹಿಡಿದ ಸಮಯ ಬರೋಬ್ಬರಿ 15 ತಿಂಗಳು! ಹಾಗೆ ಆಗಿದ್ದು ಯಾಕೆ, ಅವರೀಗ ಏನು ಮಾಡುತ್ತಿದ್ದಾರೆ ಎಂಬ ಕುರಿತ ಹಲವು ಪ್ರಶ್ನೆಗಳಿಗೆ ಆದಿ ಉತ್ತರವಾಗಿದ್ದಾರೆ.
 
* ಬಿಗ್‌ಬಾಸ್‌ ಬಳಿಕ ಹೆಚ್ಚು ಕಾಣಿಸಿಕೊಳ್ಳಲೇ ಇಲ್ಲವಲ್ಲಾ?
“ಬಿಗ್‌ಬಾಸ್‌’ ಮನೆಯಿಂದ ಹೊರಬಂದ ನಂತರ ನಾನು “ಆರ್‌ ಎಕ್ಸ್‌ ಸೂರಿ’ ಹಾಗೂ “ದಂಡುಪಾಳ್ಯ-2′ ಚಿತ್ರ ಮಾಡಿದೆ. ಆದರೆ, “2” ಸಿನಿಮಾದ ಫೈಟ್‌ ಚಿತ್ರೀಕರಣದ ವೇಳೆ ನನ್ನ ಕಾಲಿಗೆ ಬಲವಾದ ಪೆಟ್ಟು ಬಿತ್ತು. ಆಗ ನನ್ನ ಎಡಗಾಲು ಎತ್ತಿ ಇಡೋಕೇ ಆಗದಂತಹ ಪೆಟ್ಟು ಬಿದ್ದಿತ್ತು. ಆಗ ಡಾಕ್ಟರ್‌ ಸುಮಾರು 15 ತಿಂಗಳು ಬೆಡ್‌ರೆಸ್ಟ್‌ನಲ್ಲಿರಬೆಕು ಅಂದರು. ಸರ್ಜರಿ ಮಾಡಬಹುದು. ಆದರೆ, ಅದು ಲ್ಯಾಪ್ಸ್‌ ಆಗುವ ಚಾನ್ಸ್‌ ಕೂಡ ಇರುತ್ತೆ. ಅಂತ ಹೇಳಿ, ಮೂರು ತಿಂಗಳ ಕಾಲ ಐಸಿಯುನಲ್ಲಿಟ್ಟುಕೊಂಡಿದ್ದರು. ಆ ಮೇಲೆ ಒಂದು ವರ್ಷ ಬೆಡ್‌ರೆಸ್ಟ್‌ ಮಾಡಿದೆ. ಆ ವೇಳೆ ಯಾವ ಸಿನಿಮಾದಲ್ಲೂ ನಟಿಸೋಕೆ ಸಾಧ್ಯವಾಗಲಿಲ್ಲ. ಇದು ಬಿಟ್ಟರೆ ಬೇರೇನೂ ಇಲ್ಲ. ಈಗ ಕೈ ತುಂಬ ಕೆಲಸಗಳಿವೆ.

* ಸಿನಿಮಾ ಜತೆ ಸೀರಿಯಲ್‌ನಲ್ಲೂ ಮಾಡುತ್ತಿದ್ದೀರಲ್ವಾ?
ಹೌದು, ನಾನು ಈ ಹಿಂದೆ ಸುದೀಪ್‌ ಅವರ “ವಾರಸಾªರ’ ಧಾರಾವಾಹಿಯಲ್ಲಿ ನಟಿಸಬೇಕಿತ್ತು. ಆದರೆ, ಆಗ ನಾನು ಮಾಡೋದಿಲ್ಲ ಅಂತ ಹೇಳಿದ್ದೆ. ಕಾರಣ, ಸಿನಿಮಾಗಳಿದ್ದವು. ಈಗಲೂ ಚಿತ್ರಗಳಿವೆಯಾದರೂ, ಪವನ್‌ “ಸತ್ಯಂ ಶಿವಂ ಸುಂದರಂ’ ಧಾರಾವಾಹಿಯಲ್ಲಿ ನಟಿಸಬೇಕು ಅಂತ ಕೇಳಿದಾಗ, ಇಲ್ಲ ಅನ್ನಲಾಗಲಿಲ್ಲ. ಪವನ್‌ ಅವರನ್ನು ನಾನು ನಾಗಾಭರಣ ಅವರ “ಗೆಳತಿ’ ಸೀರಿಯಲ್‌ನಿಂದಲೂ ನೋಡಿದ್ದೇನೆ. ಪವನ್‌ ಒಳ್ಳೇ ಪ್ರತಿಭಾವಂತ ಕಲಾವಿದ. ನನ್ನ ಅಕ್ಕನ ಬಳಿ ಕೇಳಿದೆ ಪವನ್‌ ಹೇಗೆ, ಅವನ ನಿರ್ದೇಶನದ ಸೀರಿಯಲ್‌ನಲ್ಲಿ ನಟಿಸಬಹುದಾ ಅಂತ. ಅಕ್ಕ, “ಮಾಡು’ ಅಂದ್ರು. ಪವನ್‌ ಮೇಲೆ ನಂಬಿಕೆ ಇಟ್ಟು ಮಾಡುತ್ತಿದ್ದೇನೆ.

* ಸ್ಮಾಲ್‌ಸ್ಕ್ರೀನ್‌ಗೆ ಬಂದರೆ ಇಮೇಜ್‌ ಹೋಗುತ್ತಾ?
ಯಾರು ಹಾಗೆ ಹೇಳಿದ್ದು? ಕಲಾವಿದರಿಗೆ ಬಿಗ್‌ ಸ್ಕ್ರೀನ್‌, ಸ್ಮಾಲ್‌ ಸ್ಕ್ರೀನ್‌ ಎಂಬುದಿಲ್ಲ. ಒಟ್ಟಾರೆ ಒಳ್ಳೆಯ ಪಾತ್ರ ಇರಬೇಕು. ಅಭಿನಯಕ್ಕೆ ಸ್ಕೋಪ್‌ ಇರಬೇಕಷ್ಟೇ. ಹಾಗೆ ಅಂದುಕೊಂಡಿದ್ದರೆ, ನಾನೀಗ ಸ್ಮಾಲ್‌ ಸ್ಕ್ರೀನ್‌ಗೆ ಬರುತ್ತಿರಲಿಲ್ಲ.

* ನಿಮಗೆ ಸಿನಿಮಾಗಳಲ್ಲಿ ನೆಗೆಟಿವ್‌ ಪಾತ್ರ ಇಲ್ಲಿ?
ಈಗಾಗಲೇ ಆದಿ ಲೋಕೇಶ್‌ ಅಂದರೆ, ನೆಗೆಟಿವ್‌ ಇಮೇಜ್‌ ಬಂದುಬಿಟ್ಟಿದೆ. ಏನ್ಮಾಡೋದು? ಸಿಗೋ ಪಾತ್ರ ಅಂಥದ್ದು. ಸೀರಿಯಲ್‌ನಲ್ಲಿ ಒಳ್ಳೇ ಪಾತ್ರವಿದೆ. ಮೊದಲ ಎಪಿಸೋಡ್‌ ನೋಡಿದವರೆಲ್ಲರೂ ಖುಷಿಯಾಗಿ ಮಾತನಾಡಿದ್ದಾರೆ. “ಸತ್ಯ ಶಿವಂ ಸುಂದರಂ’ ಧಾರಾವಾಹಿಯಲ್ಲಿ ಅರಸು ಮನೆತನ ಕಾಪಾಡಬೇಕು ಅಂದುಕೊಳ್ಳುವ ಮಗನ ಪಾತ್ರ. ಅಣ್ಣ ಕಿರಿಕ್‌ ಪಾರ್ಟಿ, ನಾನು ಮನೆಯ ಜವಾಬ್ದಾರಿ ವಹಿಸಿಕೊಂಡು, ಮಕ್ಕಳಿಗೆ ಬುದ್ಧಿವಾದ ಹೇಳುವ ಪಾತ್ರ. ನೋಡಿದವರಿಗೆ ಆದಿ ಹೀಗೂ ಕಾಣಾ¤ರಾ ಅನ್ನುವಷ್ಟರ ಮಟ್ಟಿಗೆ ಒಳ್ಳೆಯ ಪಾತ್ರವದು.

Advertisement

* ಸಿನಿಮಾ, ಧಾರಾವಾಹಿ ಎರಡನ್ನೂ ಹೇಗೆ ನಿಭಾಯಿಸುತ್ತೀರಿ?
ನನ್ನ ಕೈಯಲ್ಲೀಗ ಐದು ಚಿತ್ರಗಳಿವೆ. “ಗರುಡ’ ಎಂಬ ಚಿತ್ರದಲ್ಲಿ ವಿಶೇಷ ಪಾತ್ರವಿದೆ. ಬಹುಶಃ ಆ ಸಿನಿಮಾ ಬಂದಮೇಲೆ ಜನ ನನ್ನನ್ನು ಚೆನ್ನಾಗಿ ಬೈಯ್ತಾರೆ. ಅಷ್ಟೊಂದು ನೆಗೆಟಿವ್‌ ಎನರ್ಜಿ ಇರುವಂತಹ ಪಾತ್ರ. “ಕುರುಕ್ಷೇತ್ರ’ದಿಂದಲೂ ಕರೆ ಬಂದಿದೆ. ನಾನೇ ಇನ್ನು ಡಿಸೈಡ್‌ ಮಾಡಿಲ್ಲ. ಯಾಕೆಂದರೆ, ಪೇಮೆಂಟ್‌ ವಿಷಯದಲ್ಲಿ ಒಂಚೂರು ಜಗ್ಗಾಟವಿದೆ. ಅದರಲ್ಲೂ ಆ ಚಿತ್ರಕ್ಕೆ 40 ದಿನ ಡೇಟ್ಸ್‌ ಕೇಳುತ್ತಿದ್ದಾರೆ. ಅದರಿಂದ ಬೇರೆ ಸಿನಿಮಾಗೂ ತೊಂದರೆ ಆಗಬಹುದೇನೋ, ಹಾಗಾಗಿ ಸುಮ್ಮನಿದ್ದೇನೆ. ಇನ್ನು, ಸೀರಿಯಲ್‌ಗೆ ಹತ್ತು ದಿನ ಡೇಟ್‌ ಕೊಡ್ತೀನಿ. ಉಳಿದ ಡೇಟ್ಸ್‌ ಸಿನಿಮಾಗಳಿಗೆ. ಹಾಗಾಗಿ ತೊಂದರೆ ಇಲ್ಲದಂತೆ ಕೆಲಸ ಮಾಡಿಕೊಂಡು ಹೋಗ್ತಿàನಿ.

* ಸೀರಿಯಲ್‌ನಲ್ಲಿ ನಿಮ್ಮದು ಅಪ್ಪನ ಪಾತ್ರವಂತೆ?
ನೋಡಿ, ನಾನೊಬ್ಬ ಕಲಾವಿದ. ಪಾಲಿಗೆ ಬಂದ ಪಾತ್ರವನ್ನು ಕಣ್ಣಿಗೊತ್ತಿಕೊಂಡು ಮಾಡಬೇಕು. ಅದರಲ್ಲೂ ಪಾತ್ರ ಚೆನ್ನಾಗಿತ್ತು. ಸೋ, ಒಪ್ಪಿಕೊಂಡು ಮಾಡುತ್ತಿದ್ದೇನೆ. ಅದೊಂದು ಹೊಸ ಅನುಭವ ಆಗುತ್ತಿದೆ. ಮೊದಲ ಸಲ ನಾನು ಆ ರೀತಿಯ ಪಾತ್ರ ಮಾಡುತ್ತಿದ್ದೇನೆ.

* ಹಾಗಾದರೆ ಸಿನಿಮಾದಷ್ಟೇ, ಸೀರಿಯಲ್‌ನಲ್ಲೂ ಪೇಮೆಂಟ್‌ ಸಿಗುತ್ತೆ ಅನ್ನಿ?
ಅಂಥದ್ದೇನೂ ಇಲ್ಲ. ನನಗೆ ಪಾತ್ರ ಚೆನ್ನಾಗಿದೆ ಅಂತೆನಿಸಿದರೆ, ಪೇಮೆಂಟ್‌ ವಿಷಯದಲ್ಲಿ ಕಾಂಪ್ರಮೈಸ್‌ ಆಗ್ತಿàನಿ. ಒಂದಂತೂ ನಿಜ. ಸೀರಿಯಲ್‌ ಪೇಮೆಂಟ್‌ ತಿಂಗಳ ಇಎಂಐ ಖರ್ಚಿಗೆ ವಕೌಟ್‌ ಆಗುತ್ತೆ. ಅಷ್ಟು ಸಾಕಲ್ಲವೆ?

* ಕನ್ನಡದಲ್ಲಿ ಖಳನಟರಿದ್ದರೂ ಪರಭಾಷಿಗರ ಮೊರೆ ಹೋಗ್ತಾರಲ್ಲ?
ಇದನ್ನು ಕನ್ನಡ ನಿರ್ದೇಶಕ, ನಿರ್ಮಾಪಕರು ಅರ್ಥ ಮಾಡಿಕೊಳ್ಳಬೇಕು. ವಸಿಷ್ಠನಂತಹ ಖಳನಟ ಬೇಕೇನ್ರಿ? ಅವನನ್ನು ಮೀರಿಸುವಂತ ಅದ್ಭುತ ಕಲಾವಿದರು ನಮ್ಮಲ್ಲೇ ಬಹಳಷ್ಟು ಮಂದಿ ಇದ್ದಾರೆ. ಯಾಕೆ ಹೊರಗಿನವರನ್ನು ಕರೆತರುತ್ತಾರೋ ಗೊತ್ತಿಲ್ಲ. ಇದು ಬೇಸರದ ಸಂಗತಿ. ಅವರಿಗಿಂತ ಅದ್ಭುತವಾಗಿ ನಾವು ಕಿರುಚಬೇಕಾ, ಅರಚಬೇಕಾ? ಬೇರೆ ಭಾಷೆ ಸಿನಿಮಾ ನೋಡಿದರೆ, ಅಲ್ಲೂ ಸ್ಟೈಲಿಷ್‌ ವಿಲನ್‌ ಇದ್ದಾರೆ. ನಮ್ಮಲ್ಲೂ ಅದಕ್ಕಿಂತಲೂ ಅದ್ಭುತವಾಗಿ ನಟಿಸೋ ಖಳನಟರಿದ್ದಾರೆ. ಮೊದಲು ಅವರತ್ತ ಗಮನಹರಿಸಬೇಕು.

* ನಿಮಗೆ ಪರಭಾಷೆಯಲ್ಲಿ ಅವಕಾಶ ಸಿಕ್ಕರೂ ಹೋಗಲಿಲ್ಲವಂತಲ್ಲ?
ಹೌದು, “ಜೋಗಿ’ ಬಳಿಕ ತೆಲುಗು, ತಮಿಳಿನಿಂದ ಸಾಕಷ್ಟು ಅವಕಾಶ ಬಂದಿದ್ದುಂಟು. ಆದರೆ, ನನಗೆ ಯಾಕೋ ಹೋಗಲು ಮನಸ್ಸಾಗಲಿಲ್ಲ. ನಾನು ಕನ್ನಡದವನು. ಇಲ್ಲಿನ ಜನ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನಾನು, ನನ್ನ ಅಪ್ಪ, ಅಕ್ಕ ಎಲ್ಲರನ್ನೂ ಬೆಳೆಸಿದ್ದು ಕನ್ನಡಿಗರು. ಏನೇ ಮಾಡಿದರೂ ಇಲ್ಲೇ ಒಳ್ಳೇ ಚಿತ್ರ ಮಾಡೋ ಆಸೆ ನನಗಿದೆ. ಹಾಗಾಗಿ, ಆ ಕಡೆ ಮುಖ ಮಾಡಲಿಲ್ಲವಷ್ಟೇ.

* ಬರೀ ನೆಗೆಟಿವ್‌ ಪಾತ್ರದಲ್ಲೇ ಕಾಣಿಸಿಕೊಂಡಿದ್ದಕ್ಕೆ ಬೇಸರವಿದೆಯಾ?
ಎಂಥದ್ದೂ ಇಲ್ಲ. ಕಲಾವಿದನಿಗೆ ಪಾತ್ರ ಮುಖ್ಯವೇ ಹೊರತು, ಅದು ಪಾಸಿಟಿವ್‌, ನೆಗೆಟಿವ್‌ ಅನ್ನೋದಲ್ಲ. ಹೆಚ್ಚು ನೆಗೆಟಿವ್‌ ಆಗಿ ಕಾಣಿಸಿಕೊಂಡರೇನೆ, ಪಾಸಿಟಿವ್‌ ಆಗಿ ಬೆಳೆಯೋಕೆ ಸಾಧ್ಯ. ನೆಗೆಟಿವ್‌ ಪಾತ್ರ ಬಿಟ್ಟರೆ, ಪೊಲೀಸ್‌ ಆಫೀಸರ್‌ ಪಾತ್ರ ಬರುತ್ತವೆ. ಯಾಕೋ ಗೊತ್ತಿಲ್ಲ, ನನ್ನನ್ನು ನೋಡಿದರೆ ನೆಗೆಟಿವ್‌ನಂತೆ ಕಾಣಿ¤àನೋ ಏನೋ? ಒಟ್ಟಾರೆ, ಬಂದ ಪಾತ್ರಗಳಿಗಂತೂ ನಾನು ದ್ರೋಹ ಮಾಡಿಲ್ಲ.

* ಎಲ್ಲಾ ಸರಿ, ಯಾಕೆ ನೀವು ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿಲ್ಲ?
ಅದಕ್ಕೆ ನಿರ್ದೇಶಕ, ನಿರ್ಮಾಪಕರು ಉತ್ತರ ಕೊಡಬೇಕೇನೋ? ಎಷ್ಟೋ ನಿರ್ಮಾಪಕರಿಗೆ ಆದಿ ಲೋಕೇಶ್‌ ಅಂದರೆ, ಆನೆ ಸಾಕಿದಂತೆ ಎಂಬ ಭಾವನೆ ಇದೆ. ಇನ್ನೂ ಕೆಲವು ಪ್ರೊಡಕ್ಷನ್‌ ಮ್ಯಾನೇಜರ್‌ಗಳೇ, ಆದಿ ಲೋಕೇಶ್‌ ದುಬಾರಿ, ಅವರನ್ನು ಇಟ್ಟುಕೊಂಡು ಕೆಲಸ ಮಾಡೋದು ಕಷ್ಟ ಅಂತ ಹೇಳಿಕೊಳ್ಳುತ್ತಿದ್ದಾರೆ. ನನ್ನ ಬಳಿ ಬಂದರೆ ತಾನೇ, ನಾನು ದುಬಾರಿನಾ ಇಲ್ಲವಾ ಅಂತ ಗೊತ್ತಾಗೋದು? ಮಧ್ಯವರ್ತಿಗಳಿಂದಲೇ ಸಮಸ್ಯೆ ಸೃಷ್ಟಿಯಾಗಿದೆ. ಹಾಗಂತ, ನನಗೇನೂ ಕೆಲಸವಿಲ್ಲವೆಂದಲ್ಲ, ಕೈಯಲ್ಲಿ ಸಿನಿಮಾಗಳಿವೆ. ಈಗ ಹ್ಯಾಪಿಯಾಗಿದ್ದೇನೆ.
 
* ಹಾಗಾದರೆ, ನೀವು ತುಂಬಾ ದುಬಾರಿನಾ?
ಅಲ್ಲಾ ಸಾರ್‌, ಸೀರಿಯಲ್‌ನವರೇ ಸಾಕುತ್ತಿದ್ದಾರೆ, ಇನ್ನು ಸಿನಿಮಾದವರಿಗೆ ನಾನು ದುಬಾರಿ ಆಗ್ತಿàನಾ? ನರಿಗೆ ದ್ರಾಕ್ಷಿ ಸಿಗಲಿಲ್ಲ ಅಂದಾಗ, ಹುಳಿ ಇದೆ ಅಂತಂತೆ. ಹಾಗೆ ಆಯ್ತು, ಸಿನಿಮಾದವರ ಲೆಕ್ಕಾಚಾರ. ನನ್ನ ಬಳಿ ನೇರ ಮಾತಾಡಿದರೆ ತಾನೇ, ನಾನು ದುಬಾರಿನಾ, ಇಲ್ಲವೋ ಅಂತ ಗೊತ್ತಾಗೋದು?

* ಈಗಲೂ ಪರಭಾಷೆಯಿಂದ ಅವಕಾಶಗಳು ಬರ್ತಾ ಇವೆಯಾ?
ನಾನು ಈವರೆಗೆ ಇಷ್ಟೊಂದು ಸಿನಿಮಾ ಮಾಡಿದ್ದು, ಕನ್ನಡಾಭಿಮಾನದಿಂದ. ನನಗೆ ಪರಭಾಷೆಗೆ ಹೋಗಬಾರದು ಅಂತೇನಿಲ್ಲ. ನಾನು ಈ ಹಿಂದೆಯೇ ಹೋಗುವ ಅವಕಾಶ ಬಂದಿತ್ತು. “2′ ಚಿತ್ರದ ಘಟನೆ ಬಳಿಕ ಬೇಜಾನ್‌ ಆಫ‌ರ್ ಇದ್ದರೂ, ಹೋಗಲು ಸಾಧ್ಯವಾಗಲಿಲ್ಲ. ಕಾಲಿಗೆ ಪೆಟ್ಟು ಬಿದ್ದದ್ದೇ ನನಗೆ ದೊಡ್ಡ ಸಮಸ್ಯೆ ಆಯ್ತು. ಪೂರಿ ಜಗನ್ನಾಥ್‌ ನನ್ನನ್ನು ಕರೆಸಿಕೊಂಡು ಮಾತಾಡಿದ್ದರು. ಆದರೆ, ಕಾಲಿನ ಸಮಸ್ಯೆಯಿಂದ ಅವರ ಜತೆ ಕೆಲಸ ಮಾಡಲು ಆಗಲಿಲ್ಲ. ಈಗಲೂ ಅವಕಾಶವಿದೆ, ಇಲ್ಲಿ ಸಿನಿಮಾ ಕಮಿಟ್‌ಮೆಂಟ್‌ ಜಾಸ್ತಿ. ಹಾಗಾಗಿ ಕಾದು ನೋಡಬೇಕಿದೆ.

* ನೆಗೆಟಿವ್‌ ಬಿಟ್ಟು ಬೇರೆ ಪಾತ್ರ ಮಾಡೋ ಆಸೆ ಇಲ್ಲವೇ?
ಮೊದಲೇ ಹೇಳಿದಂತೆ ನಾನೊಬ್ಬ ಕಲಾವಿದ. ಪಾಲಿಗೆ ಬಂದದ್ದನ್ನು ಮಾಡುತ್ತಾ ಹೋಗಬೇಕು. ಸಾಕಷ್ಟು ಪಾತ್ರ ಮಾಡೋ ಆಸೆ ಇದೆ. ಆದರೆ, ಬರಬೇಕಲ್ಲವೇ? ಒಂದು ಮಾತಂತೂ ನಿಜ. ನನಗೆ ಇವತ್ತಿನವರೆಗೂ ಯಾವ ಪಾತ್ರವೂ ತೃಪ್ತಿ ನೀಡಿಲ್ಲ. ನಿರ್ದೇಶಕನ ಫೀಲ್‌ನಂತೆ ಕೆಲಸ ಮಾಡುತ್ತಿದ್ದೇನಷ್ಟೇ. ಜನ ಅದನ್ನು ಇಷ್ಟಪಟ್ಟಿದ್ದಾರಷ್ಟೇ. ಆದರೆ, ವೈಯಕ್ತಿಕವಾಗಿ ನನಗೆ ಯಾವ ಪಾತ್ರವೂ ತೃಪ್ತಿ ಕೊಟ್ಟಿಲ್ಲ. ನನಗೆ ತೃಪ್ತಿಯಾದ ಬಳಿಕ ಬಹುಶಃ ನಾನು ನಟನೆ ನಿಲ್ಲಿಸಿಬಿಡುತ್ತೇನೇನೋ?

* ನಿಮಗೆ  ಈವರೆಗೆ ಬೇಸರ ತಂದ ಸಂದರ್ಭ?
“ದಂಡುಪಾಳ್ಯ-2′ ಸಿನಿಮಾ ಬಳಿಕ ನನಗೆ ಒಂದು ಅರ್ಥ ಆಯ್ತು. ನಮ್ಮ ಲೈಫ್ ನಾವು ನೋಡಿಕೊಳ್ಳಬೇಕು. ಚೆನ್ನಾಗಿ ಕಾಪಾಡಿಕೊಳ್ಳಬೇಕು ಅಂದುಕೊಂಡೆ. ಆ ಚಿತ್ರದ ಚಿತ್ರೀಕರಣ ನಡೆಯುವಾಗಲೇ, ನನ್ನ ಎಡಗಾಲು ಲಟ್‌ ಅಂತ ಮುರಿಯಿತು. ನಡೆಯಲಾಗದೆ, ಬೆಡ್‌ರೆಸ್ಟ್‌ನಲ್ಲಿದ್ದರೂ, ಚಿತ್ರದ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಬರಲಿಲ್ಲ. ಆದರೆ, ರಿಲೀಸ್‌ಗೂ ಮುನ್ನ, ನಿರ್ಮಾಪಕರು ನನ್ನ ಮನೆಗೆ ಬಂದು ಡಬ್ಬಿಂಗ್‌ ಮಾಡಿಸೋಕೆ ಎನ್‌ಓಸಿ  ಕೇಳಿದರು. ನೀವು ಎನ್‌ಓಸಿ ಕೊಡದಿದ್ದರೆ ನಾನು ರೋಡಿಗೆ ಬರಿ¤àನಿ ಸರ್‌, ಅಂತ ಗೋಗರೆದರು. ಬೆಡ್‌ನ‌ಲ್ಲಿದ್ದಾಗ ಯಾರೊಬ್ಬರೂ ಬಂದು ಉಪಚರಿಸಲಿಲ್ಲ. ಕಷ್ಟ ಏನು ಅಂತ ಕೇಳಲಿಲ್ಲ. ಆದರೆ, ಎನ್‌ಓಸಿ ಕೊಡದಿದ್ದರೆ ರೋಡ್‌ಗೆ ಬರಿ¤àನಿ ಅಂದಾಗ, ನಾನೇನು ಮಾಡಲಿ ಹೇಳಿ? ಆ ವಿಷಯ ನೋವು ತಂದಿತು.

* ವಿನಾಕಾರಣ, ಆದಿ ಗಾಸಿಪ್‌ಗೆ ಸಿಗಾಕೊಳ್ತಾರಲ್ಲ?
ಏನೋ, ಗೊತ್ತಿಲ್ಲ. ನಾನಂತೂ ನನ್ನ ಕೆಲಸವಾಯ್ತು, ಮನೆಯಾಯ್ತು ಅಂತ ಇರ್ತೇನೆ. ಆದರೂ ಹೇಗೋ ಸುದ್ದಿಗಳು ಸುತ್ತಿಕೊಳ್ಳುತ್ತವೆ. ನನ್ನ ಪ್ರಕಾರ ನಾನಾಗಿಯೇ ಯಾವ ಗಾಸಿಪ್‌ಗೂ ತಗಲಾಕಿಕೊಂಡಿಲ್ಲ. ಆ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. 

* ಇಂಡಸ್ಟ್ರಿಯಲ್ಲಿ ನಿಮ್ಮ ಬೆಸ್ಟ್‌ ಫ್ರೆಂಡ್‌ ಅನ್ನೋದಾದರೆ?
ನನ್ನ ಬೆಸ್ಟ್‌ ಫ್ರೆಂಡ್‌ ದರ್ಶನ್‌. ಯಾಕೆಂದರೆ, ನಾವಿಬ್ಬರೂ ಮೈಸೂರಲ್ಲೇ ಹುಟ್ಟಿ, ಬೆಳೆದಿದ್ದು. ನಾನು ಇಂಡಸ್ಟ್ರಿಯಲ್ಲಿ ಯಾರೊಂದಿಗೂ ಅಷ್ಟೊಂದು ಕ್ಲೋಸ್‌ ಆಗಿ ಫ್ರೆಂಡ್‌ಶಿಪ್‌ ಮಾಡಿಕೊಳ್ಳೋದಿಲ್ಲ. ದರ್ಶನ್‌ ಒಳ್ಳೇ ಫ್ರೆಂಡ್‌. 

* ಕಲಾವಿನಾಗಿ ತೃಪ್ತಿ ಆಗಿಲ್ಲ ಅಂದಿದ್ದೇಕೆ?
ನನಗೆ ಬೇಕಾದ ಪಾತ್ರ ಸಿಕ್ಕಿಲ್ಲ ಅದಕ್ಕೆ, ನನಗೂ ಅಮಿತಾಬ್‌ ಬಚ್ಚನ್‌ ಜತೆ ನಟಿಸಬೇಕೆಂಬ ಆಸೆ ಇದೆ, ರಾಮ್‌ಗೊàಪಾಲ್‌ ವರ್ಮ, ಪೂರಿ ಜಗನ್ನಾಥ್‌ ಹೀಗೆ ಒಂದಷ್ಟು ಸಕ್ಸಸ್‌ಫ‌ುಲ್‌ ನಿರ್ದೇಶಕರ ಜತೆ ಕೆಲಸ ಮಾಡುವಾಸೆ ಇದೆ. ನಾನು ಮನಸ್ಸು ಮಾಡಿ ಈ ಹಿಂದೆ ಪರಭಾಷೆಗೆ ಹೋಗಿದ್ದರೆ ಸಾಧ್ಯವಾಗುತ್ತಿತ್ತೇನೋ? ಇರಲಿ, ಈಗ ಬಿಜಿಯಾಗಿದ್ದೇನೆ. ಒಂದೇ ಮಾತಲ್ಲಿ ಹೇಳ್ಳೋದಾದರೆ, ಆದಿ ಈಸ್‌ ಬ್ಯಾಕ್‌…

ಬರಹ: ವಿಜಯ್‌ ಭರಮಸಾಗರ
ಚಿತ್ರಗಳು: ಮನು ಮತ್ತು ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next