Advertisement
ಇಲ್ಲಿ “ಮೊದಲ ರಾತ್ರಿ’ಯ ಸ್ವಾರಸ್ಯವೇ ಹೈಲೆಟ್. ಹಾಗಂತ, ಬೇರೇನೂ ಇಲ್ಲವೆಂದವಲ್ಲ. ಯುವಕನ ತಳಮಳ, ತಾಳ್ಮೆ, ಬಯಕೆ, ಆತುರ, ಕಾತುರ ಇವೆಲ್ಲವನ್ನೂ ಒಂದೆಡೆ ಕಲೆಹಾಕಿ, ಈಗಿನ ಕಾಲದ ಹುಡುಗರ ಪೀಕಲಾಟವನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಹೊಡಿ, ಬಡಿ, ಕಡಿ ಎಂಬ ಶಬ್ಧದಿಂದ ಆಚೆ ಬಂದು, ಸಂಪ್ರದಾಯಸ್ಥ ಕುಟುಂಬದ ಹುಡುಗ, ಹುಡುಗಿಯ ಶಾಸ್ತ್ರಬದ್ಧ ಮದುವೆ, ನೂತನ ದಂಪತಿಯ ಸಾಂಗತ್ಯ, ಲಾಲಿತ್ಯವನ್ನು ತೋರಿಸುವುದರ ಜೊತೆಗೊಂದು ಸಣ್ಣ ಸಂದೇಶ ಕಟ್ಟಿಕೊಡಲಾಗಿದೆ.
Related Articles
Advertisement
ಕಥೆ ತುಂಬ ಸರಳ. ನಿರೂಪಣೆ ಬಗ್ಗೆ ಹೇಳುವುದಾದರೆ, ಚಿತ್ರಕಥೆಗೆ ಇನ್ನಷ್ಟು ಬಿಗಿಹಿಡಿತ ಇರಬೇಕಿತ್ತು. ಇಲ್ಲಿ ಹಿನ್ನೆಲೆ ಸಂಗೀತದ ಸದ್ದೇ ಮೈನಸ್ಸು. ಎಲ್ಲೋ ಒಂದು ಕಡೆ ಸೀಟಿಗೆ ಒರಗುವ ಮನಸ್ಸು ಮಾಡುತ್ತಿದ್ದಂತೆಯೇ, ಮದುವೆ ಸಂಭ್ರಮದ ಗೀತೆಯೊಂದು ಕಾಣಿಸಿಕೊಂಡು, ರಿಯಲ್ ಮದುವೆಯೇನೋ ಎಂಬಷ್ಟರ ಮಟ್ಟಿಗೆ ಶಾಸ್ತ್ರೋಕ್ತವಾಗಿ ಎಲ್ಲವನ್ನೂ ತೋರಿಸುವ ಮೂಲಕ ಇಡೀ ಚಿತ್ರಣ ಕಟ್ಟಿಕೊಟ್ಟಿರುವ ಪ್ರಯತ್ನ ಸಾರ್ಥಕವೆನಿಸಿದೆ. ಉಳಿದಂತೆ ಒಂದು ಮನೆ, ಕಚೇರಿ, ಬಾರು ಇಷ್ಟರಲ್ಲೇ ಕಥೆ ಹೇಳಿರುವುದು ನಿರ್ದೇಶಕರ ಜಾಣತನ ಎನ್ನಬಹುದು.
ಆದಿಯ ಪುರಾಣ ಬಗ್ಗೆ ಹೇಳುವುದಾದರೆ, ಆಗಷ್ಟೇ ಎಂಜಿನಿಯರಿಂಗ್ ಮುಗಿಸಿ, ಕೆಲಸ ಗಿಟ್ಟಿಸಿಕೊಂಡವನು. ಅಪ್ಪ, ಅಮ್ಮನಿಗೆ ಒಬ್ಬನೇ ಮಗ. ದೂರಲ್ಲಿರುವ ಅವರಿಗೆ ಮಗನ ಮೇಲೆ ಸಂಪೂರ್ಣ ನಂಬಿಕೆ. ಆ ನಂಬಿಕೆಗೆ ಧಕ್ಕೆಯಾಗದಂತೆ ಇರುವ ಆದಿಗೆ ಒಂದೇ ಒಂದು ಬೇಸರ. ಅದು ಯಾವ ಹುಡುಗಿಯೂ ಪ್ರೀತಿಗೆ ಸಿಕ್ಕಿಲ್ಲವೆಂಬುದು. ಸಿಗರೇಟ್, ಕುಡಿತ ಇದರಿಂದ ದೂರವೇ ಇರುವ ಆದಿ, ಆ ವಯಸ್ಸಲ್ಲಿ ಟಿವಿಯಲ್ಲಿ ಏನೆಲ್ಲಾ ನೋಡಬಾರಧ್ದೋ ಅದೆಲ್ಲವನ್ನೂ ನೋಡುತ್ತಿರುತ್ತಾನೆ. ಅಪ್ಪನಿಗೆ ಆ ವಿಷಯ ಗೊತ್ತಾಗಿ, ಮದ್ವೆ ಮಾಡಲು ನಿರ್ಧರಿಸುತ್ತಾನೆ.
ಸಂಪ್ರದಾಯಸ್ಥ ಕುಟುಂಬದ ಹುಡುಗಿ ಫಿಕ್ಸ್ ಆಗುತ್ತಾಳೆ. ಆದರೆ, ಹತ್ತು ದಿನಗಳ ಕಾಲ ಮೊದಲ ರಾತ್ರಿಗೆ ಅವಕಾಶ ಇರುವುದಿಲ್ಲ. ಆಗ ಶುರುವಾಗುವುದೇ ಆದಿಯ ತರಹೇವಾರಿ “ಪುರಾಣ’. ಶಶಾಂಕ್‌ಗೆ ಮೊದಲ ಚಿತ್ರವಾದರೂ ಸಿಕ್ಕ ಪಾತ್ರಕ್ಕೆ ಸಾಧ್ಯವಾದಷ್ಟು ನ್ಯಾಯ ಸಲ್ಲಿಸಿದ್ದಾರೆ. ಬಾಡಿಲಾಂಗ್ವೇಜ್ ಬಗ್ಗೆ ಇನ್ನಷ್ಟು ಗಮನಹರಿಸಿದರೆ ಭವಿಷ್ಯವಿದೆ. ಅಹಲ್ಯಾ ಮತ್ತು ಮೋಕ್ಷಾ ಇಬ್ಬರೂ ಜಿದ್ದಿಗೆ ಬಿದ್ದವರಂತೆ ನಟಿಸಬಹುದಿತ್ತು. ಅದಿಲ್ಲಿ ಕಾಣಸಿಗಲ್ಲ.
ಅಹಲ್ಯಾ ನಟನೆಗಿಂತ ನಗುವಲ್ಲೇ ಆಕರ್ಷಿಸಿದರೆ, ಮೋಕ್ಷಾ ಗ್ಲಾಮರಸ್ ಆಗಿ ಗಮನಸೆಳೆಯುತ್ತಾರೆ. ರಂಗಾಯಣ ರಘು ಅವರನ್ನು ಬಾರ್‌ಗಷ್ಟೇ ಸೀಮಿತಗೊಳಿಸಲಾಗಿದೆ. ಅವರನ್ನು ಸರಿಯಾಗಿ ಬಳಸಿಕೊಳ್ಳಬಹುದಿತ್ತು. ನಾಗೇಂದ್ರ ಶಾ, ವತ್ಸಲಾ ಅಪ್ಪ, ಅಮ್ಮನಾಗಿ ಸಂಭ್ರಮಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳ್ಯಾವೂ ಹೆಚ್ಚು ಗಮನಸೆಳೆಯಲ್ಲ. ವಿಕ್ರಮ್ ವಸಿಷ್ಠ, ಚಂದನ ವಸಿಷ್ಠ ಅವರ ಹಾಡಲ್ಲಿ ಇನ್ನಷ್ಟು “ಪುರಾಣ’ ಇರಬೇಕಿತ್ತು. ಸಿದ್ಧಾರ್ಥ್ ಕಾಮತ್ ಹಿನ್ನೆಲೆ ಸಂಗೀತಕ್ಕಿನ್ನೂ ಒತ್ತು ಕೊಡಬಹುದಿತ್ತು. ಗುರುಪ್ರಸಾದ್ ಅವರ ಛಾಯಾಗ್ರಹಣ ಹೆಚ್ಚು ಹೇಳುವ ಅಗತ್ಯವಿಲ್ಲ.
ಚಿತ್ರ: ಆದಿ ಪುರಾಣನಿರ್ಮಾಣ: ಶಮಂತ್
ನಿರ್ದೇಶನ: ಮೋಹನ್ ಕಾಮಾಕ್ಷಿ
ತಾರಾಗಣ: ಶಶಾಂಕ್, ಅಹಲ್ಯಾ, ಮೋಕ್ಷಾ, ರಂಗಾಯಣ ರಘು, ನಾಗೇಂದ್ರ ಶಾ, ವತ್ಸಲಾ ಮೋಹನ್, ಕರಿಸುಬ್ಬು, ಶಕ್ತಿವೇಲ್ ಇತರರು. * ವಿಜಯ್ ಭರಮಸಾಗರ