ಶ್ರೀರಂಗಪಟ್ಟಣ: ತಾಲೂಕಿನ ಬೆಳಗೊಳ ಗ್ರಾಮದಲ್ಲಿ ವಾಸವಿರುವ ನಿವೇಶನ ವಂಚಿತ ಆದಿ ದ್ರಾವಿಡ ನಿರ್ಗತಿಕರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಹಾಗೂ ಆದಿ ದ್ರಾವಿಡ ಸಮಾಜದವರು ಪ್ರತಿಭಟನೆ ನಡೆಸಿದರು.
ಪಟ್ಟಣದ ಮಿನಿವಿಧಾನಸೌಧದ ಮುಂಭಾಗದಲ್ಲಿ ಗ್ರಾಪಂ ಸದಸ್ಯ ಆರ್ಮುಗಂ ನೇತೃತ್ವದಲ್ಲಿ ಸಮಾಜದ ಮುಖಂಡರು ಜಮಾಯಿಸಿ ತಾಲೂಕು ಆಡಳಿತ ಹಾಗೂ ಸರ್ಕಾರದ ವಿರುದ್ದ ಘೋಷಣೆಗಳ ಕೂಗಿ ಅಸಮಧಾನ ವ್ಯಕ್ತಪಡಿಸಿದರು.
ಕಳೆದ 25 ವರ್ಷಗಳಿಂದ ಈ ಗ್ರಾಮದಲ್ಲಿ ನಿವೇಶನವಿಲ್ಲದೆ ಜೀವನ ನಡೆಸುವ ನಮಗೆ , ಹಲವು ಬಾರಿ ನಿವೇಶನಕ್ಕಾಗಿ ಮನವಿ ಸಲ್ಲಿಸಿದರೂ ಜಿಲ್ಲಾ ಮತ್ತು ತಾಲೂಕು ಆಡಳಿತ ಗಮನ ಹರಿಸದೇ ಇದ್ದು ನಿವೇಶನವಿಲ್ಲದೆ ರಸ್ತೆ ಬದಿಗಳು, ದೇವಾಲಯದ ಆವರಣಗಳನ್ನು ಬಳಕೆ ಮಾಡಿ ಅಡುಗೆ ಊಟ ತಿಂಡಿ ಮಾಡಿಕೊಂಡು ವಾಸಿಸಬೇಕಿದೆ ಎಂದು ಉಪತಹಶೀಲ್ದಾರ್ ರೇಖಾ ಅವರಲ್ಲಿ ನಿವೇಶನ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಬೆಳಗೊಳ ಸರ್ವೆ ನಂಬರ್‌ಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮದ ಹಲವು ಭಾಗಗಳಲ್ಲಿ ಸರ್ಕಾರಿ ಗೋಮಾಳ ಸೇರಿದಂತೆ ಬೀಳು ಬಿದ್ದ ಜಮೀನುಗಳಿದ್ದು ಅವುಗಳ ಪರಿಶೀಲನೆ ಕೂಡ ಮಾಡಲಾಗಿದೆ ನಿವೇಶನ ವಂಚಿತರಿಗೆ ಜಾಗ ನೀಡುವುದಾಗಿ ಹಲವು ಬಾರಿ ಗ್ರಾಪಂ, ತಾಲೂಕು ಆಡಳಿತ ‘ಭರವಸೆ ನೀಡಿದೆಯಾದರೂ ನಿವೇಶನ ವಂಚಿತ ನಿರ್ಗತಿಕರನ್ನು ಕಡೆಗಾಣಿಸಿದೆ. ತಾಲೂ ತಹಶೀಲ್ದಾರ್ ಅವರು ಗ್ರಾಮಕ್ಕೆ ಆಗಮಿಸಿ ನಿರ್ಗತಿಕರನ್ನು ಪರಿಶೀಲಿಸಿ ನಮಗೆ ನಿವೇಶನ ನೀಡಿ ನ್ಯಾಯ ದೊರಕಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಡಿಎಸ್‌ಎಸ್‌ಮುಖಂಡರಾದ ಮಂಜು, ಶಿವು, ಅಪ್ಪು, ಮಹೇಶ್ ವಿನೋಧ ನಾಗರಾಜು,ಲೋಕೇಶ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.
ಶ್ರೀರಂಗಪಟ್ಟಣ ಬೆಳಗೊಳ ಗ್ರಾಮದಲ್ಲಿ ವಾಸವಿರುವ ನಿವೇಶನ ವಂಚಿತ ಆದಿ ದ್ರಾವಿಡ ನಿರ್ಗತಿಕರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಹಾಗೂ ಆದಿ ದ್ರಾವಿಡ ಸಮಾಜದವರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.