Advertisement

ಆಧಾರ್‌ ನೋಂದಣಿಗೆ ಅಂಚೆಯೇ ಆಧಾರ

11:33 PM Jan 21, 2020 | mahesh |

ಬ್ಯಾಂಕುಗಳಲ್ಲಿ ನಿರ್ಲಕ್ಷ್ಯ ; 2 ತಿಂಗಳು ಕಾದರೂ ಆಧಾರ್‌ ಅಸಾಧ್ಯ; ಹೊಸ ನೋಂದಣಿಗಿಂತ ತಿದ್ದುಪಡಿಯೇ ಹೆಚ್ಚು

ಕುಂದಾಪುರ: ಆಧಾರ್‌ ಎಲ್ಲದಕ್ಕೂ ಅನಿವಾರ್ಯವಾಗಿದ್ದು ಹೊಸ ಆಧಾರ್‌ ಕಾರ್ಡ್‌ ಪಡೆಯಲು, ಆಧಾರ್‌ ತಿದ್ದುಪಡಿಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಅಂಚೆ ಇಲಾಖೆ ಅಲ್ಲಲ್ಲಿ ನಡೆಸುವ ಆಧಾರ್‌ ಶಿಬಿರಗಳೇ ಜನರಿಗೆ ಆಧಾರವಾಗಿದೆ. ಅಂಚೆ ಇಲಾಖೆಯ ಪ್ರತಿ ಶಿಬಿರಗಳಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಆಧಾರ್‌ ಪಡೆಯುತ್ತಿದ್ದಾರೆ.

Advertisement

ಮಾರ್ಚ್‌ವರೆಗೆ ಟೋಕನ್‌
ತಾಲೂಕು ಕಚೇರಿಯ ಆಧಾರ್‌ ಕೇಂದ್ರದಲ್ಲಿ ಮಾರ್ಚ್‌ವರೆಗೆ ಟೋಕನ್‌ ನೀಡಲಾಗಿದೆ. ಪ್ರತಿದಿನ ನೂರರಷ್ಟು ಮಂದಿಗೆ ಅವಕಾಶ ನೀಡಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಆಧಾರ್‌ ಪ್ರಕ್ರಿಯೆಗೆ ಅವಕಾಶ ನೀಡಿದ್ದರೂ ಅವರು ದಿನಕ್ಕೆ 20ಕ್ಕಿಂತ ಹೆಚ್ಚು ಮಾಡುವುದಿಲ್ಲ. ಆಧಾರ್‌ಗಾಗಿ ಬರುವವರನ್ನು ಬ್ಯಾಂಕಿನ ಒಳಗೆ ಇರಲು ಬಿಡುವುದಿಲ್ಲ. ಹೊರ ಆವರಣದಲ್ಲಿ ಬಿಸಿಲಿನಲ್ಲಿ ಮಧ್ಯಾಹ್ನ ತನಕ ಕಾಯಬೇಕು. ಆಧಾರ್‌ಗಾಗಿ ಬರುವವರನ್ನು ಅತ್ಯಂತ ಕ್ರೂರವಾಗಿ, ನಿಕೃಷ್ಟವಾಗಿ ಕಾಣಲಾಗುತ್ತದೆ.

16 ಕೇಂದ್ರ
ಅಸಲಿಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ 21 ಕಡೆ ಆಧಾರ್‌ ಪ್ರಕ್ರಿಯೆ ನಡೆಯಬೇಕು. ಆದರೆ ಆರೇಳು ಕಡೆ ಮಾತ್ರ ಅಧಿಕೃತವಾಗಿ ನಡೆಯುತ್ತದೆ. ಬೈಂದೂರು ತಾಲೂಕಿನಲ್ಲಿ ಏಕೈಕ ಕೇಂದ್ರವಿದೆ. 16 ಅಂಚೆಕಚೇರಿಗಳಲ್ಲೂ ಆಧಾರ್‌ ಪ್ರಕ್ರಿಯೆ ನಡೆಸಲು ಅನುಮತಿ ಇದೆ. ಹಾಗಿದ್ದರೂ ತಾಲೂಕು ಕಚೇರಿಯ ಆಧಾರ್‌ ಸೆಂಟರ್‌ನಲ್ಲಿ ಪ್ರತಿನಿತ್ಯ ಸರದಿ ಸಾಲು ಮೈಲುದ್ದ ಇರುತ್ತದೆ.

ಅಂಚೆ ಶಿಬಿರಗಳು
ಉಡುಪಿ ವಿಭಾಗದಿಂದ ಅಂಚೆ ಇಲಾಖೆ ಉಡುಪಿ ಜಿಲ್ಲೆಯಲ್ಲಿ ಆಧಾರ್‌ ಕ್ಯಾಂಪ್‌ ಆರಂಭಿಸಲು ಚಿಂತನೆ ನಡೆಸಿತು. ಅದರನ್ವಯ ಶಿಬಿರ ಆರಂಭಿಸಿದಾಗ ನೂರೋ, ನೂರೈವತ್ತೋ ಮಂದಿ ಆಧಾರ್‌ ಮಾಡಿಸುತ್ತಿದ್ದರು. ಆದರೆ ಯಾವಾಗ ಕುಂದಾಪುರ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಿತೋ ಅದಾದ ಬಳಿಕ ಶಿಬಿರದ ದೆಸೆಯೇ ಬದಲಾಯಿತು. ಕುಂದಾಪುರದಲ್ಲಿ 1,500ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳಿದ್ದರು. ಕೇವಲ 429 ಜನರಿಗಷ್ಟೇ ನೀಡಲು ಸಾಧ್ಯವಾಯಿತು. ಎಲ್ಲೆಲ್ಲಿಂದ ಕಂಪ್ಯೂಟರ್‌, ಸಿಬಂದಿ ತರಿಸಿ ಅಷ್ಟನ್ನಾದರೂ ಮಾಡಲಾಗಿತ್ತು. ಇದನ್ನು ಮನಗಂಡ ಅಂಚೆ ಇಲಾಖೆ ಅನಂತರದ ಶಿಬಿರಗಳಲ್ಲಿ ಹೆಚ್ಚುವರಿ ಕಂಪ್ಯೂಟರ್‌ಗಳ ವ್ಯವಸ್ಥೆ ಮಾಡಿತು.

ನೋಂದಣಿ
ಜ.24ರಂದು ಕಿರಿಮಂಜೇಶ್ವರದಲ್ಲಿ ಶಿಬಿರ ನಡೆಯಲಿದ್ದು ಈಗಾಗಲೇ 1 ಸಾವಿರ ಮಂದಿ ಟೋಕನ್‌ ಪಡೆದಿದ್ದಾರೆ. ಜ.25 ಮಲ್ಪೆ, ಫೆ.1ರಂದು ಅಂಕದಕಟ್ಟೆಯಲ್ಲಿ ನಡೆಯಲಿದ್ದು ಜ.26ರಂದು ಟೋಕನ್‌ ವಿತರಣೆ ನಡೆಲಿದೆ. ಫೆ.1ರಂದು ಕೊಡವೂರಿನ ಲಕ್ಷ್ಮೀ ನಗರದಲ್ಲೂ ಶಿಬಿರ ನಡೆಯಲಿದೆ. ಪ್ರತಿ ದಿನ ಎಂಬಂತೆ ಅಂಚೆ ಇಲಾಖೆಗೆ ಬೇರೆ ಬೇರೆ ಪಂಚಾಯತ್‌ಗಳಿಂದ ಆಯಾ ಪಂ. ವ್ಯಾಪ್ತಿಯಲ್ಲಿ ಶಿಬಿರ ನಡೆಸುವಂತೆ ಬೇಡಿಕೆ ಬರುತ್ತಿದೆ. ಉಡುಪಿ ಭಾಗದಲ್ಲಿ ಶಿಬಿರಗಳಿಗೆ ಹಾಗೂ ಶಿಬಿರಗಳಲ್ಲಿ ಆಧಾರ್‌ಗೆ ಬೇಡಿಕೆ ಕಡಿಮೆಯಿದ್ದು ಕುಂದಾಪುರ ಭಾಗದಲ್ಲಿ ನಿರೀಕ್ಷೆ ಮೀರಿ ಸ್ಪಂದನೆಯಿದೆ.

Advertisement

ಮಿತಿ
ಒಂದು ಕಂಪ್ಯೂಟರ್‌ನಲ್ಲಿ 150 ಆಧಾರ್‌ ಪ್ರಕ್ರಿಯೆ ನಡೆಸ ಲಷ್ಟೇ ಅವಕಾಶ ಇರುವುದು. ಅದಕ್ಕಿಂತ ಹೆಚ್ಚು ಮಾಡುವಂತಿಲ್ಲ. ಸಾಮಾನ್ಯವಾಗಿ ಶಿಬಿರದಲ್ಲಿ ಒಂದು ಕಂಪ್ಯೂಟರ್‌ನಲ್ಲಿ 70ರಿಂದ 100ರ ವರೆಗೆ ಆಧಾರ್‌ ನಡೆಸಲಾಗುತ್ತದೆ. ಕೆಲವರು 120 ಕೂಡಾ ನಡೆಸುತ್ತಾರೆ. ಅದರಲ್ಲೂ ಬಯೋಮೆಟ್ರಿಕ್‌ ಅಪ್‌ಡೇಟ್‌ಗೆ ಹೆಚ್ಚು ಸಮಯ ಬೇಕಾಗುತ್ತದೆ. ಮಕ್ಕಳ ಬೆರಳಚ್ಚು ಪ್ರತಿ ಬೆರಳಿನದ್ದೂ 4 ಬಾರಿ ತೆಗೆದುಕೊಳ್ಳಬೇಕಾಗುತ್ತದೆ. ಸಣ್ಣ ಮಕ್ಕಳಿರುವಾಗ ಬೆರಳಚ್ಚು ನೀಡಿದರೆ 15 ವಯಸ್ಸು ದಾಟಿದ ಬಳಿಕ ಮತ್ತೆ ನವೀಕರಿಸಬೇಕಾಗುತ್ತದೆ. ಒಟ್ಟು ಶಿಬಿರಗಳಲ್ಲಿ 1,938 ಬೆರಳಚ್ಚಿನ ಪ್ರಕರಣಗಳೇ ಇದ್ದ ಕಾರಣ ಇತರ ಪ್ರಕರಣಗಳು ವಿಳಂಬವಾಗುತ್ತವೆ.

ಇಲಾಖಾ ಸೇವೆ
ರಾಷ್ಟೀಕೃತ ಬ್ಯಾಂಕುಗಳು ಈ ಸೇವೆ ನೀಡುವಲ್ಲಿ ದಿವ್ಯ ನಿರ್ಲಕ್ಷ್ಯ ಮಾಡಿದರೂ ಅಂಚೆ ಇಲಾಖೆ ಇದನ್ನು ಜನತಾ ಸೇವೆಯ ರೂಪದಲ್ಲಿ ನಡೆಸುತ್ತಿದೆ. ಸಿಬಂದಿ ತಮ್ಮ ಇಲಾಖಾ ಕೆಲಸಗಳಲ್ಲದೇ ಇದನ್ನು ಹೆಚ್ಚುವರಿಯಾಗಿ ನಡೆಸುತ್ತಿದ್ದು ಆಧಾರ್‌ ಶಿಬಿರದಲ್ಲಿ ಇಲಾಖೆಗೆ ಸಂಬಂಧಪಟ್ಟ ಅಂಚೆ ಖಾತೆ ತೆರೆಯುವುದು ಇತ್ಯಾದಿ ಸೇವೆಗಳನ್ನೂ ಜನರಿಗೆ ಪರಿಚಯಿಸುತ್ತಿದೆ. ಸಣ್ಣ ಮಕ್ಕಳ ಜತೆಗೆ ಬಂದವರಿಗೆ, ವೃದ್ಧರಿಗೆ, ವಿಕಲಚೇತನರಿಗೆ ಟೋಕನ್‌ ಸಾಲಿನ ಹೊರತಾಗಿಯೂ ಮಾನವೀಯ ನೆಲೆಯಲ್ಲಿ ಬೇಗ ಮಾಡಿಕೊಡಲಾಗುತ್ತದೆ.

ಬೇಡಿಕೆ ಹೆಚ್ಚು
ಹೆಚ್ಚೆಂದರೆ 500ರ ಮಿತಿಯಿಟ್ಟುಕೊಂಡು ನಾವು ಶಿಬಿರಗಳನ್ನು ಆರಂಭಿಸಿದೆವು. ನಂತರದ ದಿನಗಳಲ್ಲಿ ಅದು 1,239ಕ್ಕೆ ತಲುಪಿದೆ. ಈಗ ಎಲ್ಲೆಡೆಯಿಂದ ಶಿಬಿರ ನಡೆಸುವಂತೆ ಬೇಡಿಕೆ ಹೆಚ್ಚಾಗಿದೆ. ನಾವು ಸಿಬಂದಿಗಳನ್ನು, ಇಲಾಖಾ ಕೆಲಸಗಳನ್ನು ಹೊಂದಾಣಿಕೆ ಮಾಡಿಕೊಂಡು ಹೆಚ್ಚುಜನರಿಗೆ ಅಗತ್ಯವಿದ್ದಲ್ಲಿ ಶಿಬಿರಗಳನ್ನು ನಡೆಸುತ್ತಿದ್ದೇವೆ. ಇನ್ನಷ್ಟು ಶಿಬಿರಗಳು ನಡೆಯಲಿವೆ.
-ಸುಧಾಕರ ದೇವಾಡಿಗ,ಅಂಚೆ ಅಧೀಕ್ಷಕರು, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next