ದಾವಣಗೆರೆ: ಕೃಷಿ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್ ಪೂರೈಕೆ, ತತ್ಕಾಲ್ ಯೋಜನೆಯಡಿ ಪರಿವರ್ತಕ ವಿತರಿಸಲು ಆಗ್ರಹಿಸಿ ಕೃಷಿ ಪಂಪ್‌ಸೆಟ್ ಬಳಕೆದಾರರ ಸಂಘದ ಸದಸ್ಯರು ಶುಕ್ರವಾರ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್‌ಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ಸಂಘದ ಆರ್.ವಿ. ಚಂದ್ರಪ್ಪ, ತಾಲ್ಲೂಕಿನ ಕಬ್ಬೂರು, ಅಣಬೇರು, ಕಳವೂರು, ಮಲ್ಲೇನಹಳ್ಳಿ, ಶಂಕರನಹಳ್ಳಿ, ಮಾಯಕೊಂಡ, ವಿಠಲಾಪುರ ಗ್ರಾಮ ವ್ಯಾಪ್ತಿಯ ಕೃಷಿ ಪಂಪ್‌ಸೆಟ್‌ಗಳಿಗೆ ಕಳೆದ 9 ತಿಂಗಳಿನಿಂದ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಿಲ್ಲ.
8 ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳುವ ಬೆಸ್ಕಾಂ ಒಮ್ಮೆ ಸಹ 8 ತಾಸು ನಿರಂತರ ವಿದ್ಯುತ್ ಸರಬರಾಜು ಮಾಡಿಲ್ಲ ಎಂದರು. ತೊಗಲೇರಿ, ಮಾಯಕೊಂಡ 66/11 ಕೆವಿ ಎಂಯುಎಸ್‌ಎಸ್ ಉಪಕೇಂದ್ರಗಳಿಂದ ಪೂರೈಕೆ ಆಗುತ್ತಿರುವ ವಿದ್ಯುತ್ ವೋಲ್ಟೆàಜ್ ಇರುವುದರಿಂದ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ.
ಇದರಿಂದ ಬೇಸಿಗೆ ಬೆಳೆ ನಷ್ಟವಾಗುತ್ತಿದೆ. ಪಂಪ್‌ಸೆಟ್‌ಗಳಿಗೆ ಲಕ್ಷಾಂತರ ರೂಪಾಯಿ ಸಾಲಮಾಡಿಕೊಂಡ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಅವರು ಹೇಳಿದರು. ತತ್ಕಾಲ್ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗೆ 25 ಕೆವಿ ಪರಿವರ್ತಕ ನೀಡುವುದಾಗಿ ಸರ್ಕಾರ ಹೇಳಿದೆ.
ಇದಕ್ಕಾಗಿ ರೈತರಿಂದ 18,100 ರೂ. ಪಡೆದು 9 ತಿಂಗಳಾದರೂ ಇದುವರೆಗೆ ಪರಿವರ್ತಕ ನೀಡಿಲ್ಲ. ತಕ್ಷಣ ರೈತರ ಸಮಸ್ಯೆ ಪರಿಹಾರಕ್ಕೆ ಬೆಸ್ಕಾಂ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು. ಸಂಘದ ಶಿವಣ್ಣ, ಈರಣ್ಣ, ಷಡಾಕ್ಷರಪ್ಪ, ವಾಮಣ್ಣ, ಪೂಜಾರ ಮಹೇಶ್, ನಂದಯ್ಯ ಅಣಬೇರು, ಬಸವನಗೌಡ, ರಾಮಸ್ವಾಮಿ ಇತರರು ಈ ಸಂದರ್ಭದಲ್ಲಿದ್ದರು.