Advertisement

ಮನ್ಸೂರ್‌ ವಿರುದ್ಧ ಹೆಚ್ಚುವರಿ ಪ್ರಕರಣ

07:23 AM Jun 17, 2019 | Team Udayavani |

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್‌ ಖಾನ್‌ ವಿರುದ್ಧ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ (ಕರ್ನಾಟಕ ಪ್ರೊಟೆಕ್ಷನ್‌ ಆಫ್ ಇಂಟರೆಸ್ಟ್‌ ಆಫ್ ಡೆಪಾಸಿಟರ್ ಇನ್‌ ಫೈನಾನ್ಶಿಯಲ್‌ ಎಸ್ಟಾಬ್ಲಿಷ್‌ಮೆಂಟರ್‌ ಆಕ್ಟ್-ಕೆಪಿಐಡಿ) ಅಡಿಯಲ್ಲಿ ಹೆಚ್ಚುವರಿ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದು, ಈ ಸಂಬಂಧ ಕೋರ್ಟ್‌ಗೂ ಮನವಿ ಮಾಡಿದೆ.

Advertisement

ವಂಚಕ ಕಂಪನಿ ವಿರುದ್ಧ ಇದುವರೆಗೂ ದಾಖಲಾಗಿರುವ ದೂರುಗಳ ಪ್ರಕಾರ ಆರೋಪಿ ಮನ್ಸೂರ್‌ ಖಾನ್‌ ಬರೋಬ್ಬರಿ 1,450 ಕೋಟಿ ರೂ.ಗಿಂತ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು, ವಂಚಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕೆಪಿಐಡಿ ಕಾಯ್ದೆ ಅಡಿಯಲ್ಲಿ ಹೆಚ್ಚುವರಿ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಲಾಗಿದೆ.

ಅಲ್ಲದೆ, ಆರೋಪಿ ವಂಚಿಸಿ ತಲೆಮರೆಸಿಕೊಂಡಿದ್ದು, ಹಣ ವಾಪಸ್‌ ಬರುವ ನಿರೀಕ್ಷೆಯಿಲ್ಲ. ಹೀಗಾಗಿ ಆತನಿಗೆ ಸೇರಿದ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಿದೆ. ಈ ಸಂಬಂಧ ಇದೊಂದು ಗಂಭೀರ ಸ್ವರೂಪದ ಪ್ರಕರಣ ಹಾಗೂ ಸಾವಿರಾರು ಕೋಟಿ ರೂ. ವಂಚನೆ ಮಾಡಿರುವುದರಿಂದ ಆರೋಪಿ ವಿರುದ್ಧ ಹೆಚ್ಚುವರಿಯಾಗಿ ಕೆಪಿಐಡಿ ಕಾಯ್ದೆ ಹಾಕಲು ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಒಂದು ವೇಳೆ ಕೋರ್ಟ್‌ ಅನುಮತಿ ನೀಡಿದರೆ, ಹೆಚ್ಚುವರಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯ ನೇಮಿಸುವ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಆತನಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಿ, ಮುಂದಿನ ತನಿಖೆ ನಡೆಸಲಾಗುವುದು.

ಈ ಹಿನ್ನೆಲೆಯಲ್ಲಿ ಆತನಿಗೆ ಸೇರಿದ ಆಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದು, ಇದುವರೆಗೂ ಆತನ ಸುಮಾರು 488 ಕೋಟಿ ರೂ. ಮೌಲ್ಯದ ಆಸ್ತಿ ಗುರುತಿಸಲಾಗಿದೆ. ಇತರೆ ಆಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

Advertisement

35 ಸಾವಿರ ದೂರು: ವಂಚನೆಗೊಳಗಾದವರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, 35 ಸಾವಿರ ಗಡಿ ದಾಟುತ್ತಿದೆ. ಭಾನುವಾರವೂ ಎರಡು ಸಾವಿರ ಮುಂದಿ ದೂರು ನೀಡಿದ್ದಾರೆ. ಸೋಮವಾರವೂ ದೂರು ಪಡೆಯುವ ಪ್ರಕ್ರಿಯೆ ಮುಂದುವರಿಯಲಿದೆ.

ಈ ಮಧ್ಯೆ ಐಎಂಎ ಸಂಸ್ಥೆಯಲ್ಲಿ ಕೆಲಸ ಮಾಡುವ ಸುಮಾರು 250 ಕ್ಕೂ ಹೆಚ್ಚು ಮಂದಿ ಪೂರ್ವ ವಿಭಾಗದ ಡಿಸಿಪಿ ರಾಹುಲ್‌ಕುಮಾರ್‌ ಶಹಾಪುರವಾದ್‌ ಅವರನ್ನು ನೇರವಾಗಿ ಭೇಟಿಯಾಗಿ ದೂರು ನೀಡಿದ್ದಾರೆ. ಸಾರ್ವಜನಿಕರ ಜತೆ ಸರದಿ ಸಾಲಿನಲ್ಲಿ ನಿಂತು ದೂರು ದಾಖಲಿಸಲು ಹೋದರೆ ಆಕ್ರೋಶಗೊಂಡ ಹೂಡಿಕೆದಾರರು ಹಲ್ಲೆ ನಡೆಸಬಹುದು ಎಂಬ ಭಯ ಕಾಡುತ್ತಿದೆ.

ಹೀಗಾಗಿ ನೇರವಾಗಿ ಡಿಸಿಪಿ ಅವರನ್ನೇ ಭೇಟಿಯಾಗಿ ದೂರು ನೀಡಿದ್ದಾರೆ. ಜತೆಗೆ ಕೆಲಸಕ್ಕೆ ಸೇರುವಾಗ ಕಂಪನಿ ಪಡೆದಿದ್ದ ಅಂಕಪಟ್ಟಿ ಹಾಗೂ ಇತರೆ ದಾಖಲೆಗಳನ್ನು ವಾಪಸ್‌ ಕೊಡಿಸುವಂತೆಯೂ ಮನವಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

ಮನ್ಸೂರ್‌ ಬಗ್ಗೆ ಮಾಹಿತಿ ಇಲ್ಲ: ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಂಪನಿಯ ನಿರ್ದೇಶಕರಿಗೆ ಮನ್ಸೂರ್‌ ಖಾನ್‌ ಎಲ್ಲಿದ್ದಾನೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಏಳು ಮಂದಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ, ಕೆಲವರು, ಈ ಹಿಂದೆ ಆತ ದುಬೈಗೆ ಹೋಗಿದ್ದ. ಈಗಲೂ ಅಲ್ಲಿಗೆ ಹೋಗಿರಬೇಕು ಎಂದು ಅನುಮಾನವ್ಯಕ್ತಪಡಿಸುತ್ತಾರೆ. ಇನ್ನು ಕೆಲವರು ಕುಟುಂಬ ಸಮೇತ ದುಬೈ ಬಿಟ್ಟು ಬೇರೆ ದೇಶಕ್ಕೆ ಹೋಗಿದ್ದಾನೆ ಎನ್ನುತ್ತಾರೆ ಎಂದು ಮೂಲಗಳು ತಿಳಿಸಿವೆ.

ನಿರ್ದೇಶಕರೇ ಎಕ್ಸಿಕ್ಯೂಟಿವ್‌ಗಳು!: ಶಿವಾಜಿನಗರ ಹಾಗೂ ಇತರೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಗಳನ್ನು ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದ ಮನ್ಸೂರ್‌ ಅವರನ್ನು, ಕಂಪನಿಯ ಎಕ್ಸಿಕ್ಯೂಟಿವ್‌ಗಳಂತೆ ಕೆಲಸ ಮಾಡಿಸಿಕೊಂಡಿದ್ದಾನೆ ಎಂಬ ವಿಚಾರ ಎಸ್‌ಐಟಿ ತನಿಖೆಯಲ್ಲಿ ತಿಳಿದು ಬಂದಿದೆ.

ಉದ್ಯಮಿಗಳು, ರಾಜಕೀಯ ಮುಖಂಡರು ಹಾಗೂ ಇತರರ ಬಳಿ ಹೋಗಿ ಕಂಪನಿಯ ಶೇರುಗಳ ಬಗ್ಗೆ ವಿವರಣೆ ನೀಡಿ, ವ್ಯವಹಾರ ನಡೆಸುವಂತೆ ಸೂಚಿಸುತ್ತಿದ್ದ. ಹೀಗಾಗಿ ಆತನ ವ್ಯವಹಾರದ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ, ಮಾಸಿಕ ನೂರಾರು ಕೋಟಿ ರೂ. ವಹಿವಾಟು ನಡೆಯುತ್ತಿತ್ತು ಎಂದಷ್ಟೇ ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next