ಬೆಂಗಳೂರು: ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರನ್ನು ಪುಣೆ ಪಂದ್ಯ ದಿಂದ ಹೊರಗಿರಿಸಿದ್ದನ್ನು ಆರ್‌ಸಿಬಿ ಕೋಚ್ ಡೇನಿಯಲ್ ವೆಟರಿ ಸಮರ್ಥಿಸಿದ್ದಾರೆ. ಹೆಚ್ಚುವರಿ ಬೌಲರ್‌ಗಾಗಿ ಈ ನಿರ್ಧಾರಕ್ಕೆ ಬರಲಾಯಿತು ಎಂದಿದ್ದಾರೆ.
“ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯ ದಲ್ಲಿ ನಮಗೆ ಓರ್ವ ಬೌಲರ್‌ನ ಕೊರತೆ ಕಾಡಿತು. ಶೇನ್ ವಾಟ್ಸನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಸೈ ಎನಿಸಿದ್ದರಿಂದ ಇಲ್ಲಿ ಅವರಿಗೆ ಮರಳಿ ಅವಕಾಶ ಕಲ್ಪಿಸಲಾಯಿತು. ಅವರು ಟಿ-20 ಕ್ರಿಕೆಟಿನ ಅದ್ಭುತ ಆಲ್‌ರೌಂಡರ್…’ ಎಂಬುದಾಗಿ ತಂಡದ ಸೋಲಿನ ಬಳಿಕ ವೆಟರಿ ಹೇಳಿದರು.
ಆದರೆ ಪುಣೆ ವಿರುದ್ಧ ವಾಟ್ಸನ್ ಎರಡೂ ವಿಭಾಗಗಳಲ್ಲಿ ಶೋಚನೀಯ ವೈಫಲ್ಯ ಕಂಡದ್ದು ಮಾತ್ರ ಆರ್‌ಸಿಬಿಯ ದುರದೃಷ್ಟಕ್ಕೆ ಸಾಕ್ಷಿ. 4 ಓವರ್‌ಗಳಿಂದ 44 ರನ್ ಬಿಟ್ಟುಕೊಟ್ಟ ಅವರು ಒಂದೇ ವಿಕೆಟ್ ಉರುಳಿಸಿದರು. ಬ್ಯಾಟಿಂಗ್ ವೇಳೆ 18 ಎಸೆತಗಳಿಂದ ಕೇವಲ 14 ರನ್ ಮಾಡಿ ನಿರ್ಗಮಿಸಿದರು. ಹೊಡೆದದ್ದು ಒಂದೇ ಬೌಂಡರಿ.
“18 ಓವರ್ ತನಕವೂ ನಮ್ಮ ಬೌಲಿಂಗ್ ಯೋಜನೆಯಂತೆಯೇ ಸಾಗಿತ್ತು. ಆದರೆ ಕೊನೆಯ 2 ಓವರ್‌ಗಳಲ್ಲಿ 30 ರನ್ ಸೋರಿ ಹೋಯಿತು. ಕನಿಷ್ಠ 15 ರನ್ನನ್ನು ನಾವು ಹೆಚ್ಚು ನೀಡಿದೆವು…’ ಎಂದು ವೆಟರಿ ಅಭಿಪ್ರಾಯಪಟ್ಟರು.
ಚಿನ್ನಸ್ವಾಮಿ ಟ್ರ್ಯಾಕ್‌ನಲ್ಲೇಕೆ ಈಗ ರನ್ ಹರಿದು ಬರುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೆಟರಿ, “ಇದು ಟಿ-20 ಕ್ರಿಕೆಟಿನ ಕಳಪೆ ಟ್ರ್ಯಾಕ್ ಏನೂ ಅಲ್ಲ. ಬೌಲರ್‌ಗಳಿಗೆ ಉತ್ತಮ ನೆರವು ನೀಡುತ್ತಿದೆ. ಈವರೆಗೆ ಇಲ್ಲಿ ಆಡಲಾದ ಪಂದ್ಯಗಳೆಲ್ಲವೂ ರೋಮಾಂಚಕಾರಿಯಾಗಿ ಸಾಗಿವೆ. ಪಿಚ್ ಹೇಗೆಯೇ ಇರಲಿ, ಇದಕ್ಕೆ ನಾವು ಹೊಂದಿಕೊಳ್ಳುವುದು ಮುಖ್ಯ…’ ಎಂದರು.