Advertisement

Koppala: 450 ಹಾಸಿಗೆ ಆಸ್ಪತ್ರೆಗೆ ಹೆಚ್ಚುವರಿ ನೆರವು

06:05 PM Sep 05, 2023 | Team Udayavani |

ಕೊಪ್ಪಳ: ನಗರದಲ್ಲಿ ಆರಂಭಿಸಿದ 450 ಹಾಸಿಗೆಯುಳ್ಳ ಆಸ್ಪತ್ರೆಯ ಕಟ್ಟಡ ಕಾಮಗಾರಿ ಬಹುದಿನಗಳಿಂದ ನನೆಗುದಿಗೆ
ಬಿದ್ದಿದೆ. ಹಿಂದೆ ನಮ್ಮದೇ ಸರ್ಕಾರ ಇದ್ದಾಗ 2017ರಲ್ಲಿ ಮಂಜೂರು ಮಾಡಿ ನಾವೇ ಅಡಿಗಲ್ಲು ಹಾಕಿದ್ದೆವು. ಹಿಂದಿನ ಬಿಜೆಪಿ
ಸರ್ಕಾರ ಇದಕ್ಕೆ ಏನೂ ಮಾಡಲಿಲ್ಲ. ಇದರ ಸ್ಥಿತಿಗತಿ ನೋಡಿ ಶೀಘ್ರದಲ್ಲಿಯೇ ಆರಂಭಿಸಲು ಹೆಚ್ಚುವರಿ ಅನುದಾನ ಸಂಪುಟದಲ್ಲಿ ಒಪ್ಪಿಗೆ ಪಡೆದು ಬಿಡುಗಡೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ್‌ ಅವರು ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 450 ಹಾಸಿಗೆಯ ಆಸ್ಪತ್ರೆಯಲ್ಲಿ ಶೇ. 90ರಷ್ಟು ಕಾಮಗಾರಿ ಮುಗಿದಿದೆ. ಇದಕ್ಕೆ ಹೆಚ್ಚುವರಿ 47 ಕೋಟಿ ರೂ. ಬೇಕಾಗಬಹುದು. ಅದಕ್ಕೆ ಅನುದಾನ ಕೊಡುವ ಪ್ರಯತ್ನ ಮಾಡಲಾಗುವುದು. ಈ ಆಸ್ಪತ್ರೆ ಆರಂಭವಾದರೆ ಎಲ್ಲ ಸಮಸ್ಯೆಗಳು ನಿವಾರಣೆಯಾಗಲಿವೆ. ಇಲ್ಲಿ ಸುಸಜ್ಜಿತ ವ್ಯವಸ್ಥೆ ಬರಲಿದೆ. ಒಬಿಜಿ, ರೇಡಿಯೋಲಾಜಿ, ಮೆಡಿಷನ್‌, ಸರ್ಜರಿ ಸೇರಿ ಇತರೆ ವಿಭಾಗ ಆರಂಭವಾಗಲಿವೆ.   ಇದಕ್ಕೆ ಹೆಚ್ಚುವರಿ ಅನುದಾನಬೇಕಿದ್ದು, ಸಚಿವ ಸಂಪುಟಕ್ಕೆ ಶೀಘ್ರದಲ್ಲಿಯೇ ತಂದು ಸಂಪುಟ ಅನುಮತಿ ಸಿಕ್ಕ ತಕ್ಷಣ ನಾಲ್ಕೈದು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು ಎಂದರು.

ನ್ಯೂರಾಲಾಜಿ, ಕಾರ್ಡಿಯಾಲಾಜಿ ಸೇರಿ ಇತರೆ ಚಿಕಿತ್ಸೆಗಳು ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯ ಹಂತಕ್ಕೆ ಬರುತ್ತವೆ. ಪ್ರಸ್ತುತ
ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳಿಸಿ ರೋಗಿಗಳಿಗೆ ಚಿಕಿತ್ಸೆ ಕೊಡಬೇಕಿದೆ. ಇಲ್ಲಿ ಬೇಡಿಕೆ ಅನುಸಾರ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯ ಸ್ಥಾಪನೆಯ ವಿಚಾರ ಮುಂದಿನ ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಹಿಂದಿನ ಸರ್ಕಾರದ ಅವ ಧಿಯಲ್ಲಿ ಸ್ಪೇಷಾಲಿಟಿ ಆಸ್ಪತ್ರೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲಿಲ್ಲ. ಸುಮ್ಮನೆ ಎಲ್ಲವನ್ನು ಹೇಳಿಕೊಂಡು ಹೋದರು. ಗದಗ, ಕಾರವಾರ, ಬೆಳಗಾವಿ, ಕೊಪ್ಪಳದಲ್ಲಿ ನನ್ನ ಅವ ಧಿಯಲ್ಲಿಯೇ ಆಸ್ಪತ್ರೆ ಆರಂಭಿಸಿದ್ದೆವು. ಅವುಗಳೇ ಇನ್ನೂ ಪೂರ್ಣಗೊಂಡಿಲ್ಲ. ಕಟ್ಟಡಕ್ಕೆ ಅನುದಾನ ಬೇಕಿದೆ. ನಂತರದಲ್ಲಿ ಇಲ್ಲಿನ ಸಾಮಗ್ರಿಗಳಿಗೆ ಅನುದಾನ ಅನುವು ಮಾಡಿಕೊಡಲಾಗುವುದು ಎಂದರು.

ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಲು ಉದ್ದೇಶವಿದ್ದು, ಅದೂ ನನ್ನ ಅಧೀನದಲ್ಲಿ ಬರುವುದರಿಂದ ಈ ಬಗ್ಗೆಯೂ ನಿಗಾ ವಹಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಚಿವ ಡಾ| ಎಂ.ಸಿ. ಸುಧಾಕರ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next