Advertisement

ಶಿಕ್ಷಕರ ವರ್ಗಾವಣೆಗೂ ಎಲೆಕ್ಷನ್‌ ಬಿಸಿ

06:00 AM Mar 29, 2018 | |

ಬೆಂಗಳೂರು : ಆಮೆ ವೇಗದಲ್ಲಿ  ಸಾಗುತ್ತಿದ್ದ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಹೆಚ್ಚು ಕಡಿಮೆ ಈಗ ಶಾಶ್ವತವಾಗಿ ಸ್ಥಗಿತಗೊಂಡಿದೆ.

Advertisement

ಮಂಗಳವಾರವಷ್ಟೇ  ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ವರ್ಗಾವಣೆ ಪ್ರಕ್ರಿ ಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆ ಕಷ್ಟಸಾಧ್ಯ ಎಂದೇ ಹೇಳಲಾಗುತ್ತಿದೆ.

ವರ್ಗಾವಣೆಗಾಗಿ ಚಾತಕ ಪಕ್ಷಿಯಂತೆ ಕಾದುಕುಳಿತಿರುವ ಶಿಕ್ಷಕರಿಗೆ ಮತ್ತೆ ನಿರಾಸೆಯಾಗಿದೆ. ಕಡ್ಡಾಯ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಿ, ಅರ್ಹರಿಂದ ಆಕ್ಷೇಪಣೆ ಆಹ್ವಾನಿಸಿರುವುದು ಹೊರತುಪಡಿಸಿ ಬೇರೆ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ.ಒಂದೇ ಶಾಲೆಯಲ್ಲಿ ಹತ್ತು ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಮಾಡಲು ಸರ್ಕಾರ ಇತ್ತೀಚೆಗೆ ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿ ತಿದ್ದುಪಡಿ ತಂದಿತ್ತು. ಕಡ್ಡಾಯ ವರ್ಗಾವಣೆ ಪಟ್ಟಿ ಸಿದ್ಧಪಡಿಸಿ, ಪ್ರಕಟಿಸಿಯೂ ಆಗಿದೆ. ಆಕ್ಷೇಪಣೆಯನ್ನು ಕರೆಯಲಾಗಿದೆ. ಉಳಿದಂತೆ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉನ್ನತ ಮೂಲ ಸ್ಪಷ್ಟಪಡಿಸಿದೆ.

ದಂಪತಿ ಶಿಕ್ಷಕರ ವರ್ಗಾವಣೆ, ಪರಸ್ಪರ ಮತ್ತು ಕೋರಿಕೆ ವರ್ಗಾವಣೆ ಫೆ.22ರಿಂದ ಆರಂಭವಾಗಿ ಏ.30ರೊಳಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಅರ್ಜಿ ಸ್ವೀಕರಿಸಿದ ನಂತರದ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಜತೆಗೆ  ಇದೀಗ ಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡ ವರ್ಗಾವಣಾ ಪ್ರಕ್ರಿಯೆ ನಡೆಸುವುದು ಅನುಮಾನ ಎಂದು ಹೇಳಲಾಗಿದೆ.

ಶಿಕ್ಷಣ ಇಲಾಖೆ ಈ ಹಿಂದೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ ಏ.30ರೊಳಗೆ ವರ್ಗಾವಣೆಯ ಪ್ರಕ್ರಿಯೆ ಸಂಪೂರ್ಣ ಮುಗಿಯಲಿದೆ. ಮುಂದಿನ ಶೈಕ್ಷಣಿಕ ವರ್ಷ (2018-19) ಆರಂಭದಲ್ಲಿ ವರ್ಗಾವಣೆ ಪಡೆದ ಶಿಕ್ಷಕರಿಗೆ ಸ್ಥಳ ನಿಯೋಜನೆಯ ಆದೇಶ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ವರ್ಗಾವಣೆ ಪ್ರಕ್ರಿಯೆ ಆಮೆ ವೇಗದಲ್ಲಿ ಸಾಗುತ್ತಿರುವುದರಿಂದ ನಿಗದಿತ ವೇಳಾಪಟ್ಟಿಯಂತೆ ಕೌನ್ಸೆಲಿಂಗ್‌ ನಡೆಯದು.

Advertisement

ವರ್ಗಾವಣೆ ಪ್ರಕ್ರಿಯೆ ಸಕಾಲದಲ್ಲಿ ಪ್ರಾರಂಭವಾಗದೆ ವಿಳಂಬವಾಗಲು  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ  ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿ ನಡುವೆ ಸಮನ್ವಯದ ಕೊರತೆಯೂ ಕಾರಣ ಎಂದು ಹೇಳಲಾಗಿದೆ.

ವರ್ಗಾವಣೆ ಸಾಫ್ಟ್ವೇರ್‌ ಸಮಸ್ಯೆಯೂ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗಲು ಕಾರಣವಾಗಿದೆ. ಶಿಕ್ಷಕರ ವರ್ಗಾವಣೆ ಸಾಫ್ಟ್ವೇರ್‌ ಸರ್ವರ್‌ ಸಮಸ್ಯೆಯಿಂದಾಗಿ ಒಪನ್‌ ಆಗುತ್ತಿಲ್ಲ. ಸಾಫ್ಟ್ವೇರ್‌ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸುವಂತೆ ತಾಂತ್ರಿಕ ವಿಭಾಗದ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

ಶಿಕ್ಷಕರ ಒತ್ತಡವೂ ಇದೆ:
ಈ ನಡುವೆ, ನಗರ ಪ್ರದೇಶದ (ಎ ವಲಯ) ಒಂದೇ ಶಾಲೆಯಲ್ಲಿ 10 ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಮಾಡುವುದಾಗಿ ತಿದ್ದುಪಡಿ ತಂದಿರುವುದು ಹತ್ತಾರೂ ವರ್ಷದಿಂದ ಬೀಡುಬಿಟ್ಟಿದ್ದ ಶಿಕ್ಷಕರಿಗೆ ನುಂಗಲಾರದ ತುತ್ತಾಗಿದ್ದು ಅವರು ಗ್ರಾಮೀಣ ಭಾಗಕ್ಕೆ (ಸಿ ವಲಯ) ಹೋಗಲು ಇಷ್ಟಪಡುತ್ತಿಲ್ಲ. ಹೀಗಾಗಿ, ಕೆಲವರು ವರ್ಗಾವಣೆ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡುವ ಪ್ರಯತ್ನವೂ ನಡೆಸುತ್ತಿದ್ದಾರೆ.

ವರ್ಗಾವಣೆ ಪ್ರಕ್ರಿಯೆ ಪೂರ್ಣವಾಗಿ ಸ್ಥಗಿತಗೊಂಡಿಲ್ಲ. ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿವೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸುವಂತೆ ನಮಗೆ ಯಾವುದೇ ಸೂಚನೆ ಬಂದಿಲ್ಲ.
– ಬಸವರಾಜ್‌ , ನಿರ್ದೇಶಕರು, ಪ್ರಾಥಮಿಕ ಶಿಕ್ಷಣ ಇಲಾಖೆ

ಏಪ್ರಿಲ್‌ ಮೊದಲ ವಾರದಿಂದ ಕೌನ್ಸೆಲಿಂಗ್‌ ನಡೆಯಬೇಕು. ಚುನಾವಣೆ ಹಿನ್ನೆಲೆಯಲ್ಲಿ ಕೌನ್ಸೆಲಿಂಗ್‌ ನಿಲ್ಲಿಸಬಾರದು. ಚುನಾವಣಾ ಆಯೋಗದ ಅನುಮತಿ ಪಡೆದು ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಬೇಕು. ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಆದೇಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ.
– ಬಸವರಾಜ ಗುರಿಕಾರ್‌, ಅಧ್ಯಕ್ಷ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next