Advertisement

ತೇರದಾಳ ತಾಲೂಕಿಗೆ 8 ಹಳ್ಳಿ ಸೇರ್ಪಡೆ-ಅಧಿಸೂಚನೆ ಪ್ರಕಟ

02:54 PM Jul 31, 2022 | Team Udayavani |

ತೇರದಾಳ: ನೂತನ ತಾಲೂಕು ಎಂದು ಘೋಷಣೆಗೊಂಡಿರುವ ತೇರದಾಳ ತಾಲೂಕಿಗೆ ತೇರದಾಳ ಪಟ್ಟಣ ಸೇರಿ ಸಸಾಲಟ್ಟಿ ಜಿಪಂ ವ್ಯಾಪ್ತಿಯ ಎಂಟು ಹಳ್ಳಿಗಳನ್ನು ಸೇರ್ಪಡೆಗೊಳಿಸಿ ಸರಕಾರ ಅಧಿಸೂಚನೆ ಆದೇಶ ಹೊರಡಿಸಿದೆ.

Advertisement

ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ನಗರ ಘಟಕ ಅಧ್ಯಕ್ಷ ಮಹಾವೀರ ಕೊಟಕನೂರ, ಈಗ ಸರಕಾರ ತೇರದಾಳ ತಾಲೂಕಿಗೆ ಕಲ್ಲಟ್ಟಿ, ಗೋಲಭಾವಿ, ಕಾಲತಿಪ್ಪಿ, ಸಸಾಲಟ್ಟಿ, ತಮದಡ್ಡಿ, ಹಳಿಂಗಳಿ, ಹನಗಂಡಿ ಹಾಗೂ ಯರಗಟ್ಟಿ ಹಳ್ಳಿಗಳನ್ನು ಸೇರ್ಪಡೆಗೊಳಿಸಿ ಭೌಗೋಳಿಕ ಕ್ಷೇತ್ರವನ್ನು ಕೂಡ ವಿಂಗಡನೆ ಮಾಡಿ ಆದೇಶ ಹೊರಡಿಸಿದೆ. ತೇರದಾಳ ತಾಲೂಕಿಗೆ ಕಡಿಮೆ ಹಳ್ಳಿಗಳನ್ನು ವಿಂಗಡಿಸಿದ್ದರೂ ಸಹ ಅಭಿವೃದ್ಧಿಗೆ ಹಾಗೂ ಸರಕಾರಿ ಕಚೇರಿಗಳಿಗೆ ತೊಂದರೆ ಆಗುವುದಿಲ್ಲ. ತಾಲೂಕಿಗೆ ಇರಬೇಕಾದ ಎಲ್ಲ ಸೌಲಭ್ಯಗಳನ್ನು ಸರಕಾರ ಒದಗಿಸಲಿದೆ. ಆ ನಿಟ್ಟಿನಲ್ಲಿ ಶಾಸಕರು ಕೂಡ ತೇರದಾಳ ತಾಲೂಕಿನ ಅಭಿವೃದ್ಧಿಗೆ ಬದ್ಧ ಇದ್ದಾರೆ ಎಂದು ಕೊಕಟನೂರ ತಿಳಿಸಿದ್ದಾರೆ.

ಪಟ್ಟಣದಲ್ಲಿರುವ ಸರಕಾರಿ ಕಚೇರಿಗಳ ಜತೆಗೆ ಇತರೇ ಕಚೇರಿಗಳು ಶೀಘ್ರ ಆರಂಭಗೊಳ್ಳಲಿವೆ. ಆ ನಿಟ್ಟಿನಲ್ಲಿ ಶಾಸಕರ ಮೇಲೆ ಒತ್ತಡ ಕೂಡ ಹೇರಲಾಗಿದೆ. ತೇರದಾಳ ತಾಲೂಕಿಗೆ ಪಕ್ಷಾತೀತ, ಜಾತ್ಯತೀತವಾಗಿ ನಡೆದ ಹೋರಾಟ ಹೆಮ್ಮೆ ಪಡುವಂತಾಗಿದ್ದು, ತೇರದಾಳ ಜನತೆಯ ತಾಲೂಕಿನ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ತೇರದಾಳ ತಾಲೂಕು ರಚನೆ ಹಾಗೂ ಹಳ್ಳಿಗಳ ವಿಂಗಡನೆಗೆ ಕೈ ಜೋಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಕಂದಾಯ ಸಚಿವ ಆರ್‌. ಅಶೋಕ ಹಾಗೂ ಶಾಸಕ ಸಿದ್ದು ಸವದಿ ಅವರಿಗೆ ಧನ್ಯವಾದ ತಿಳಿಸಿದರು. ರಾಮಣ್ಣ ಹಿಡಕಲ್‌, ಪ್ರಭಾಕರ ಬಾಗಿ, ಅಪ್ಪು ಮಂಗಸೂಳಿ, ಅಲ್ಲಪ್ಪ ಬಾಬಗೊಂಡ, ಸಿದ್ದು ಅಮ್ಮಣಗಿ, ಪ್ರಕಾಶ ಹೊಸಮನಿ, ಸಂತೋಷ ಜಮಖಂಡಿ, ಸದಾಶಿವ ಹೊಸಮನಿ ಇನ್ನಿತರಿದ್ದರು.

ತೇರದಾಳ ತಾಲೂಕಿಗೆ ಹಳ್ಳಿಗಳ ವಿಂಗಡನೆ ಮಾಡಿ ಆದೇಶ ಹೊರಡಿಸುವ ಮೂಲಕ ಸರಕಾರ ತೇರದಾಳ ಜನತೆಯ ಹೋರಾಟಕ್ಕೆ ಬೆಲೆ ನೀಡಿದೆ. ತೇರದಾಳ ತಾಲೂಕಿಗೆ ಮಠಾಧಿಧೀಶರು ಸೇರಿ ಹೋರಾಟ ಸಮಿತಿ ನಡೆಸಿದ ಹೋರಾಟ ಶ್ಲಾಘನೀಯ. ಬರುವ ದಿನಗಳಲ್ಲಿ ಎಲ್ಲ ಸರಕಾರಿ ಕಚೇರಿ ಆರಂಭಗೊಂಡು ಹೊಸ ತಾಲೂಕು ಅಭಿವೃದ್ಧಿ ಹೊಂದುವಂತಾಗಲಿ. –ಕುಸುಮಾಂಡಿನಿ ಅಲ್ಲಪ್ಪ ಬಾಬಗೊಂಡ, ಅಧ್ಯಕ್ಷರು ತೇರದಾಳ, ಪುರಸಭೆ

ತಾಲೂಕಿಗೆ ಸರಕಾರ ಹಳ್ಳಿಗಳನ್ನು ವಿಂಗಡಿಸಿ ಆದೇಶ ಹೊರಡಿಸಿರುವುದು ನಿಯಮಾನುಸಾರ ಇಲ್ಲ. ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಆಗುವಂತೆ ಹಳ್ಳಿಗಳನ್ನು ವಿಂಗಡನೆ ಮಾಡಿ ಎಂದು ಸಾಕಷ್ಟು ಬಾರಿ ಹೇಳಿದ್ದೇವೆ. ಆದರೆ, ಕೆಲ ಜನಪ್ರತಿನಿಧಿಗಳು ಸರಕಾರದ ಜತೆಗೆ ಅಧಿಕಾರಿಗಳ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ವಿಂಗಡನೆ ಮಾಡಿರುವ ಹಳ್ಳಿಗಳನ್ನು ನಾವು ಒಪ್ಪುವುದಿಲ್ಲ. ಆದ್ದರಿಂದ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಮಾಡಿ ಹಳ್ಳಿಗಳನ್ನು ವಿಂಗಡನೆ ಮಾಡಬೇಕು. ಇಲ್ಲದಿದ್ದರೆ ಸದ್ಯದರಲ್ಲೆ ಸಾರ್ವಜನಿಕ ಸಭೆ ಕರೆದು ಹೋರಾಟದ ಬಗ್ಗೆ ಚರ್ಚಿಸಲಾಗುವುದು. ಅಗತ್ಯ ಬಿದ್ದರೆ ಮುಖ್ಯಮಂತ್ರಿ, ಕಂದಾಯ ಸಚಿವರು, ಜಿಲ್ಲಾಡಳಿತ ಸರಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. –ಬಸವರಾಜ ಬಾಳಿಕಾಯಿ, ತಾಲೂಕು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next