Advertisement

ಪರಿಪೂರ್ಣತೆಯ ವ್ಯಸನ

03:45 AM Jan 08, 2017 | |

ಮನುಷ್ಯರಿಗೆ ಅನೇಕ ತರದ ಹಂಬಲಗಳಿರುತ್ತವೆ: ಆಗರ್ಭ ಶ್ರೀಮಂತನಾಗಬೇಕು, ದೃಢಕಾಯನಾಗಬೇಕು, ಹಲವಾರು ವರ್ಷ ಜೀವಿಸಬೇಕು, ಯಾವುದೇ ರೋಗಕ್ಕೆ ಗುರಿಯಾಗಬಾರದು, ಸರಿಸಮಾನರಿಲ್ಲದ ವಿದ್ವಾಂಸನಾಗಬೇಕು, ಕೀರ್ತಿವಂತನಾಗಬೇಕು, ಪರಮಸುಂದರಿಯನ್ನು ಮದುವೆಯಾಗಬೇಕು ಇತ್ಯಾದಿ. ಇಂಥ ಯಾವ ಹಂಬಲವೂ ಮನುಷ್ಯನಿಗೆ ತಪ್ಪಲ್ಲ ; ಆದರೆ, ಇದನ್ನು ಆತ ಸಾಧಿಸದೆ ಹೋಗಬಹುದು. ಆಗ ದುಃಖಭಾಜನನಾಗುವುದು, ತನ್ನ ಜೀವನಕ್ಕೆ ಅರ್ಥವಿಲ್ಲ ಎಂದು ಹತಾಶೆಗೆ ಶರಣಾಗುವುದು, ಆತ್ಮಹತ್ಯೆಗೂ ಹೇಸದಿರುವುದು ಸರಿಯಲ್ಲ; ಇವೆಲ್ಲವೂ ಪರಿಪೂರ್ಣತೆಯ ಕುರಿತಾದ ಅತೀವ ಹಂಬಲದ ವಿವಿಧ ರೂಪಗಳು. 

Advertisement

17ನೆಯ ಶತಮಾನದ ಬ್ರಿಟಿಷ್‌ ಕವಿ ರಾಬರ್ಟ್‌ ಹೆರಿಕ್‌ನದೊಂದು ಕವಿತೆಯಿದೆ: Delight in Disorder ಎನ್ನುವುದು ಕವಿತೆಯ ಹೆಸರು. ಹೆರಿಕ್‌ ವಿಪುಲವಾಗಿ ಬರೆಯುತ್ತಿದ್ದ; ಅವನು ಒಟ್ಟಾರೆ 2,500ನ್ನೂ ಮಿಕ್ಕ ಕವಿತೆಗಳನ್ನು ಬರೆದಿದ್ದನಂತೆ; ಅವುಗಳಲ್ಲಿ ಅರ್ಧದಷ್ಟು ಮಾತ್ರ ಸಿಕ್ಕಿವೆ. ಅವನ Delight in Disorder ಎಂಬ ಸೊಗಸಾದ ಕವಿತೆಯೊಂದಿದೆ:  
A sweet disorder in the dress
Kindles in clothes a wantonness;
A lawn about the shoulders thrown
Into a fine distraction;
An erring lace, which here and there
Enthrals the crimson stomacher;
A cuff neglectful, and thereby
Ribands to flow confusedly;
A winning wave, deserving note,
In the tempestuous petticoat;
A careless shoe-string, in whose tie
I see a wild civility:
Do more bewitch me, than when art
Is too precise in every part.
-Robert Herrick, “Delight in Disorder”

ಇಲ್ಲಿ ಕವಿ ಅವ್ಯವಸ್ಥೆಯ ಆನಂದದ ಬಗ್ಗೆ ಹೇಳುತ್ತಿದ್ದಾನೆ. ಯಾಕೆಂದರೆ, ನಾವೆಲ್ಲ ಹೆಚ್ಚಾಗಿ “ವ್ಯವಸ್ಥಿತತೆ’ಯ ಆರಾಧಕರು, ಅವ್ಯವಸ್ಥೆಯನ್ನು ಸ್ವಲ್ಪವೂ ಸಹಿಸಲಾರದವರು. ಎಲ್ಲಿ ಏನಿರಬೇಕೋ ಅದು ಅಲ್ಲೇ ಇರಬೇಕು ಎನ್ನುವವರು. ಅಪ್ಪಿತಪ್ಪಿ$ಒಂದು ಹೆಚ್ಚು ಕಡಿಮೆ ಆದರೆ ಪ್ರಾಣವೇ ಹೋದಂತೆ ಅರಚುವವರು. ಇದು “ವ್ಯವಸ್ಥಿತತೆ’ ಒಂದು ವ್ಯಸನವಾದುದರ ಚಿಹ್ನೆ ಹಾಗೂ ಮಾನಸಿಕ ಅಸ್ವಾಸ್ಥ್ಯದ ಮುನ್ಸೂಚನೆ ಕೂಡ. ಹೆರಿಕ್‌ ಸ್ತ್ರೀಸೌಂದರ್ಯವನ್ನು ಒಂದು ಮಾದರಿಯಾಗಿ ಎತ್ತಿಕೊಂಡು ಹೇಗೆ ಕೆಲವು ಪ್ರಸಾಧನಗಳಲ್ಲಿನ “ಕೊರತೆಗಳು’ (ಅವ್ಯವಸ್ಥೆಗಳು) ಆ ಸೌಂದರ್ಯವನ್ನು ಹೆಚ್ಚಿಸಬಹುದು ಎಂದು ಕೆಲವು ಉದಾಹರಣೆಗಳನ್ನು ನೀಡುತ್ತಾನೆ: ಮನಸ್ವಿನಿ ಎಂಬುದನ್ನು ತೋರಿಸುವಂತಿರುವ ಉಡುಪಿನಲ್ಲಿನ ಒಂದು ಮಧುರ ಅವ್ಯವಸ್ಥೆ; ಅನ್ಯಮನಸ್ಕತೆಯಿಂದ ಎಂಬಂತೆ ಸುಮ್ಮನೆ ಹೆಗಲ ಮೇಲೊಗೆದ ಒಂದು ಮೇಲುದ; ಸಿಂಧೂರ ವರ್ಣದ ಎದೆವಸ್ತ್ರವನ್ನು ಅಲ್ಲಲ್ಲಿ ವಿವಶಗೊಳಿಸುವ ತಪ್ಪು$ತಪ್ಪಾದ ಕಲಾಬತ್ತು; ಇತ್ಯಾದಿ, ಇತ್ಯಾದಿ. “ಇವು ನನ್ನನ್ನು ಹೆಚ್ಚು ಸಮ್ಮೊàಹಗೊಳಿಸುತ್ತವೆ, ಕಲೆ ಪ್ರತಿಯೊಂದು ಭಾಗದಲ್ಲೂ ಅತ್ಯಂತ ನಿಖರವಾದಾಗ ಆಗುವುದಕ್ಕಿಂತಲೂ’ ಎನ್ನುತ್ತಾನೆ ಕವಿ. ಕವಿಯಲ್ಲದೆ ಇನ್ನು ಯಾರು ತಾನೇ ಹೇಳಬಲ್ಲರು ಹೀಗೆ? ಆದರೆ ಕವಿಯ ಈ ಸಂವೇದನೆಯಲ್ಲಿ ಲೋಕಸತ್ಯವೊಂದು ಅಡಗಿದೆ: ಚಂದ್ರನ “ಕಲೆ’ಯು ಕಲೆಯೂ ಹೌದು, ಕಳೆಯೂ ಹೌದು. ಈ ಕಲೆಯಿಲ್ಲದ ಚಂದ್ರನನ್ನು ನಮಗೆ ಊಹಿಸುವುದು ಕಷ್ಟ. ಈ ಮೂಲದಿಂದಲೇ ದೃಷ್ಟಿ ಬೊಟ್ಟು ಎಂಬ ಕಲ್ಪನೆಯೂ ಬಂದಿರಬಹುದೇನೋ: ಯಾವುದೂ ಪರಿಪೂರ್ಣವಾಗಿ ಇರಬಾರದು, ಹಾಗೆ ಕಾಣಿಸಲೂ ಬಾರದು, ಯಾಕೆಂದರೆ ಪರಿಪೂರ್ಣತೆ ಈ ಮರ್ತ್ಯಲೋಕಕ್ಕೆ ಸೇರಿದುದಲ್ಲ! 

ಪರಿಪೂರ್ಣತೆಯ ವ್ಯಸನವನ್ನೇ ವಸ್ತುವಾಗಿ ಇಟ್ಟುಕೊಂಡ ಕತೆಯೊಂದು ಇಂಗ್ಲಿಷ್‌ನಲ್ಲಿ ಇದೆ: ಹತ್ತೂಂಬತ್ತನೆಯ ಶತಮಾನದ ಅಮೇರಿಕನ್‌ ಕತೆ-ಕಾದಂಬರಿಗಾರ ನಥೇನಿಯಲ್‌ ಹಾಥೋರ್ನ್ ಬರೆದ The Birth-Mark ಅಥವಾ “ಮಚ್ಚೆ’. ಇದು ತನ್ನ ಸುಂದರಿ ಹೆಂಡತಿಯ ಕೊರತೆಯೊಂದನ್ನು ಪರಿಪೂರ್ಣಗೊಳಿಸಲು ಯತ್ನಿಸಿದ ವಿಜ್ಞಾನಿಯೊಬ್ಬನ ಕತೆ. ವಿಜ್ಞಾನಿಯ ಹೆಸರು ಐಲ್ಮರ್‌ ಎಂದು. ಹಲವು ವರ್ಷಗಳ ಕಾಲ ಅಧ್ಯಯನ ನಡೆಸಿ ಪ್ರಕೃತಿ ವಿಜ್ಞಾನದ ಎಲ್ಲ ಭಾಗಗಳಲ್ಲೂ ಪರಿಣತಿ ಪಡೆದ ವಿದ್ವಾಂಸ ಈತ. ಒಂದು ರೀತಿಯ ಡಾಕ್ಟರ್‌ ಫಾಸ್ಟಸ್‌ನ ಅವತಾರ. ಕೊನೆಗೆ ಆಧ್ಯಾತ್ಮಿಕ ವಿಷಯವನ್ನೂ ಕರಗತ ಮಾಡಿಕೊಂಡವ; ಯಾವುದೇ ರಸಾಯನ ವಿಜ್ಞಾನಕ್ಕಿಂತಲೂ ಆಧ್ಯಾತ್ಮವೇ ಹೆಚ್ಚಿನದು ಎನ್ನುವುದನ್ನು ಕಂಡುಕೊಂಡವ. ನಂತರ ಅವನು ತನ್ನ ಪ್ರಯೋಗಶಾಲೆಯನ್ನು ಸಹಾಯಕನ ಉಸ್ತುವಾರಿಗೆ ಬಿಟ್ಟು ಎಳೆ ಜಾರ್ಜಿಯಾನಾ ಎಂಬ ಚೆಲುವೆಯೊಬ್ಬಳ ಪ್ರೀತಿಯನ್ನು ವಿಜ್ಞಾನದಷ್ಟೇ ಆಸಕ್ತಿಯಿಂದ ತಳಮೂಲ ಬೆನ್ನುಹತ್ತುವನು-ಪ್ರೀತಿ ಮತ್ತು ವಿದ್ವತ್ತು ಎರಡೂ ಪರಸ್ಪರ ಮಿಲನದಲ್ಲಿರುವುದನ್ನು ಅರಿಯುವನು. ಹೀಗಿರುವಾಗ, ಒಂದು ದಿನ ಪತ್ನಿಯೊಂದಿಗೆ ಕೂತಿರುವಾಗ ಅವಳ ಎಡ ಕೆನ್ನೆ ಅವನ ಗಮನ ಸೆಳೆಯುತ್ತದೆ ; ಆ ಕೆನ್ನೆಯನ್ನೇ ನೋಡುತ್ತ ಇರುತ್ತಾನೆ. ಅಲ್ಲಿ ಅವನಿಗೊಂದು ಮಚ್ಚೆ ಕಾಣಿಸುತ್ತದೆ. ಕಂಡರೂ ಕಾಣಿಸದಂಥ ಹುಟ್ಟು ಗುರುತು ಅದು : ಕಡು ಕೆಂಪು ಬಣ್ಣದ ಅದು ಅತಿ ಚಿಕ್ಕ ಕೈಗುರುತಿನಂತೆ ಇತ್ತು, ಮೈಯ ಗುಲಾಬಿ ಬಣ್ಣದಿಂದ ಸುತ್ತುವರಿದುಕೊಂಡು. ಅದುವರೆಗೆ ಅದನ್ನೊಂದು ಮುದ್ದುಚುಕ್ಕಿಯೆಂದೇ ತಿಳಿದುಕೊಂಡಿದ್ದ ಜಾರ್ಜಿಯಾನಾ ಈಗ ಸ್ವಯಂಪ್ರಜ್ಞಳಾಗುತ್ತಾಳೆ. ಪತಿ ಅದನ್ನೊಂದು ಕೊರತೆಯೆಂದು ತೆಗೆದುಕೊಂಡಾಗ ಅವಳಿಗೂ ಹಾಗನಿಸುತ್ತದೆ. ನಂತರ ಇಬ್ಬರನ್ನೂ ಈ ಮಚ್ಚೆ ಕಾಡಲು ಸುರುಮಾಡುತ್ತದೆ. ಎಲ್ಲದರಲ್ಲೂ ಪರಿಪೂರ್ಣತೆಯನ್ನು ಅಪೇಕ್ಷಿಸುವ ಐಲ್ಮರ್‌ ತನ್ನ ಪತ್ನಿಯ ಸೌಂದರ್ಯದಲ್ಲೂ ಅದನ್ನು ಬಯಸುತ್ತಾನೆ. ಹೇಗಾದರೂ ಮಾಡಿ ಆ ಮಚ್ಚೆಯನ್ನು ಇಲ್ಲದೆ ಮಾಡಲು ಯೋಚಿಸುತ್ತಾನೆ. ಅವನು ಒಂದು ಕಾರ್ಯದಲ್ಲಿ ತೊಡಗಿದರೆ ಅದನ್ನು ಸಾಧಿಸದೆ ಬಿಡಲಾರ. ಹಲವು ಸಮಯದಿಂದ ಪ್ರವೇಶಿಸದೆ ಇದ್ದ ಪ್ರಯೋಗಶಾಲೆಗೆ ಮತ್ತೆ ಕಾಲಿರಿಸಿ, “ಎಲಿಕ್ಸರ್‌’ (ಅಮೃತ ರಸ) ಒಂದನ್ನು ಸಿದ್ಧಪಡಿಸುತ್ತಾನೆ. ಅದು ಎಷ್ಟು ಪ್ರಭಾವಶಾಲಿಯೆಂದರೆ ಒಣಗಲು ತೊಡಗಿದ ಗಿಡದ ಮೇಲೆ ಅದನ್ನು ಚಿಮುಕಿಸಿದಾಗ ಗಿಡ ಹೊಸ ಎಲೆ ಬಿಟ್ಟು ನಳನಳಿಸಲು ಸುರುಮಾಡುತ್ತದೆ! ಸರಿ, ಐಲ್ಮರ್‌ ಈ ರಸವನ್ನು ತನ್ನ ಪ್ರಿಯತಮೆಗೆ ಕುಡಿಸುತ್ತಾನೆ; ನಿರೀಕ್ಷೆಯಂತೆ ಕೂಡಲೇ ಅವಳ ಮಚ್ಚೆ ಮಾಯವಾಗುತ್ತದೆ, ಅದರೆ ಕೆಲವೇ ಕ್ಷಣಗಳಲ್ಲಿ ಅವಳ ಜೀವವೂ ಹಾರಿಹೋಗುತ್ತಾಳೆ. ಇದೊಂದು ಅನ್ಯೋಕ್ತಿ: ಮನುಷ್ಯರು ಪ್ರಕೃತಿಯನ್ನು ಕೆಣಕಬಾರದು, ಪರಿಪೂರ್ಣತೆ ಇಹಲೋಕದಲ್ಲಿ ಸಾಧ್ಯವಿಲ್ಲ, ಅಂತಹ ಅತಿಯಾದ ಹಂಬಲವೂ ಸರಿಯಲ್ಲ ಎನ್ನುವ ತತ್ವವನ್ನು ಸಾರುವಂತೆ ಇದೆ. 

ಶ್ರೇಷ್ಠತೆ ಎನ್ನುವುದೂ ಒಂದು “ವ್ಯಸನ’ವಾಗುವ ಸಾಧ್ಯತೆಯಿದೆ. ಈ ಕುರಿತು ಕೆ. ವಿ. ಸುಬ್ಬಣ್ಣ “ಶ್ರೇಷ್ಠತೆಯ ವ್ಯಸನ’ ಎಂಬ ಒಂದು ಲೇಖನವನ್ನೇ ಬರೆದಿದ್ದಾರೆ. ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಸಾಹಿತ್ಯ ಸಮ್ಮೇಳನಗಳ ವಿರುದ್ಧ ಹಲವು ಗೌರವಾನ್ವಿತ ಸಾಹಿತಿಗಳು ಬೆಂಗಳೂರಲ್ಲಿ 1990ರಲ್ಲಿ ಆಯೋಜಿಸಿದ ಜಾಗೃತ ಸಾಹಿತ್ಯ ಸಮಾವೇಶ. ಸುಬ್ಬಣ್ಣ ಈ ಸಮಾವೇಶದ ಪರವಾಗಿದ್ದು ಅದರಲ್ಲಿ ಭಾಗವಹಿಸಿದ್ದರೂ (ಪ್ರಸ್ತುತ ಲೇಖನ ಅವರು ಅದರಲ್ಲಿ ಮಾಡಿದ ಭಾಷಣ), ಟಿ. ಪಿ. ಅಶೋಕ ಎನ್ನುವಂತೆ, “”ಅವರು ಈ ಸಮಾವೇಶವು ಶ್ರೇಷ್ಠತೆಯ ಅಭೀಪ್ಸೆಗೆ ಕೊಟ್ಟ ಒತ್ತನ್ನು ಅನುಮಾನದಿಂದಲೇ ನೋಡಿದ್ದರು (ಪ್ರಸ್ತಾವನೆ: ಕೆ. ವಿ. ಸುಬ್ಬಣ್ಣ ಅವರ ಆಯ್ದ ಬರಹಗಳು, ಪು.x). ಸುಬ್ಬಣ್ಣ ಶ್ರೇಷ್ಠತೆಯ ಹಂಬಲವನ್ನು ನಿಂದಿಸುವುದಿಲ್ಲ, ಆದರೆ ಸಾಮಾನ್ಯತೆಯ ಮೌಲ್ಯವನ್ನು ಕಡೆಗಣಿಸಲೂ ಬಾರದು ಎನ್ನುತ್ತಾರೆ: ಶ್ರೇಷ್ಠತೆ ತೀರಾ ವ್ಯಕ್ತಿ-ಕೇಂದ್ರಿತವಾದಾಗ ಅದೊಂದು ವ್ಯಸನವಾಗುತ್ತದೆ, ಮತ್ತು ಸಮಷ್ಟಿಯ ಜೊತೆ ವ್ಯಕ್ತಿಗಿರುವ ಸಂಬಂಧವನ್ನು ತಿರಸ್ಕಾರದಿಂದ ನೋಡುತ್ತದೆ. ಶ್ರೇಷ್ಠತೆಯ ಕಲ್ಪನೆಯನ್ನೇ ಸಾರಾಸಗಟು ತಳ್ಳಿಹಾಕುವುದಾಗಲಿ, ಅದನ್ನು ವಿಪರ್ಯಾಸಗೊಳಿಸಿ ಲೇವಡಿ ಮಾಡುವುದಾಗಲಿ ಖಂಡಿತ ನನ್ನ ಉದ್ದೇಶವಲ್ಲ. ಕಣ್ಣುಪಟ್ಟಿ ಕಟ್ಟಿಕೊಂಡ ಶ್ರೇಷ್ಠತೆಯ ವ್ಯಸನ ಅದೆಂಥೆಂಥ ವಿಕಾರಗಳನ್ನು ಸೃಷ್ಟಿಸಿದೆ ಎನ್ನುವುದನ್ನು ಗಮನಿಸಿಕೊಳ್ಳುವುದು ಮತ್ತು ಆ ಬಗ್ಗೆ ಎಚ್ಚರವಾಗಿರಲು ಪ್ರಯತ್ನಿಸುವುದು ನನ್ನ ಅಪೇಕ್ಷೆ” ಎನ್ನುತ್ತಾರೆ ಸುಬ್ಬಣ್ಣ (ಪು. 6). ಇದು ಸಾಹಿತ್ಯ ಕ್ಷೇತ್ರಕ್ಕೇ ಸೀಮಿತವಾದ ಪ್ರಶ್ನೆಯೂ ಅಲ್ಲ, ಕಲೆ, ವಿಜ್ಞಾನ, ತತ್ವಜ್ಞಾನ, ತಂತ್ರಜ್ಞಾನ ಇತ್ಯಾದಿ ಎಲ್ಲಾ ಕ್ಷೇತ್ರಗಳಿಗೂ ಸಂಬಂಧಿಸಿದ್ದು: ಯಾರೂ ಒಂದು ದ್ವೀಪವಲ್ಲ, ಎಲ್ಲರೂ ಪರಸ್ಪರ ಅವಲಂಬಿತರು. ಒಬ್ಬ ಸನ್ಯಾಸಿಗೆ ನಾವು ವಂದಿಸುವಷ್ಟೇ ಆತ ಅನ್ನವಿಕ್ಕುವ ಜನಕ್ಕೂ ಕೃತಜ್ಞನಾಗಿರಬೇಕು. ತಮ್ಮ ತಪೋಬಲದಿಂದ ಬೀಗಿ ಅಹಂಕಾರಿಗಳಾದ ಋಷಿಮುನಿಗಳ ಕತೆಗಳು ನಮ್ಮ ಪುರಾಣಗಳಲ್ಲಿವೆ. ವ್ಯಸನವೆನ್ನುವುದು ಇಂಥ ಅಹಂಕಾರಕ್ಕೆ ಎಡೆಮಾಡಿ ತಮ್ಮನ್ನು ಸಲಹುವ ಜನರನ್ನೇ ತುಚ್ಛಿàಕರಿಸುತ್ತದೆ. ಅಂಥ ವ್ಯಸನಿಗಳಿಂದ ಯಾರಿಗೇನೂ ಆಗಬೇಕಾಗಿಲ್ಲ. ಸುಬ್ಬಣ್ಣನವರ ಲೇಖನ ಈ ದಿಕ್ಕಿನಲ್ಲಿ ಒಂದು ಎಚ್ಚರಿಕೆಯ ಗಂಟೆ. ಇದರರ್ಥ ಸುಧಾರಣೆಗೆ ಪ್ರಯತ್ನಿಸಬಾರದು ಎಂದಲ್ಲ; ಇಡೀ ನಾಗರಿಕತೆಯೇ ಸುಧಾರಣೆಯ ಕ್ರತುಶಕ್ತಿಯನ್ನು ಅವಲಂಬಿಸಿದೆ. ಆದರೆ ಅದಕ್ಕೆ ಒಬ್ಬ ವ್ಯಕ್ತಿ ಕಾರಣನಲ್ಲ, ವ್ಯಕ್ತಿ-ಸಮಷ್ಟಿ ಎಂಬ ಯುಗಳ ಕಾರಣ. 

Advertisement

ಕೆ. ವಿ. ತಿರುಮಲೇಶ್‌

Advertisement

Udayavani is now on Telegram. Click here to join our channel and stay updated with the latest news.

Next