Advertisement

ಅಡ್ಡಹೊಳೆ ರಸ್ತೆ ಸ್ಥಿತಿ ಕಂಡು ಮರುಗಲೇಬೇಕು ! ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಖಚಿತ

10:45 PM Mar 18, 2021 | Team Udayavani |

ಉಪ್ಪಿನಂಗಡಿಯಿಂದ ಶಿರಾಡಿ ವರೆಗೆ ಹೋಗುವುದೆಂದರೆ ಮತ್ತೂ ಕಷ್ಟ. ಅಕ್ಕಪಕ್ಕದ ಗುಂಡಿಗಳ ಮೇಲೆ ಗಮನವಿಟ್ಟುಕೊಂಡೇ ವಾಹನ ಚಲಾಯಿಸಬೇಕು. ಚೂರು ಎಚ್ಚರ ತಪ್ಪಿದರೂ ಅಪಾಯವನ್ನು ಆಹ್ವಾನಿಸಿದಂತೆ. ನಿತ್ಯವೂ ಸಾವಿರಾರು ವಾಹನಗಳು ಸಂಕಷ್ಟದಲ್ಲಿ ಸಂಚರಿಸುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆಯ ದುರಸ್ತಿಗೆ ಮುಂದಾಗುತ್ತಿಲ್ಲ ಎಂಬುದೇ ಜನರ ಆಕ್ರೋಶಕ್ಕೆ ಕಾರಣ.

Advertisement

ಉಪ್ಪಿನಂಗಡಿ: ಶಿರಾಡಿ ಘಾಟಿ ರಸ್ತೆ ಕಂಡು ಮನಸ್ಸು ಹಿರಿ-ಹಿರಿ ಹಿಗ್ಗಿದರೆ, ಘಾಟಿ ಕೆಳಭಾಗದ ಅಡ್ಡಹೊಳೆ ರಸ್ತೆ ಕಂಡು ಮಮ್ಮಲ ಮರುಗಲೇಬೇಕು..!

ಅಡಿಗಡಿಗೆ ಅಪಾಯ ತಂದೊಡ್ಡುವ ಹಂತಕ್ಕೆ ತಲುಪಿರುವ ರಾಷ್ಟ್ರೀಯ ಹೆದ್ದಾರಿ-75 ರ ಉಪ್ಪಿನಂಗಡಿ ಯಿಂದ-ಅಡ್ಡಹೊಳೆ ತನಕ ಚತುಷ್ಪಥಕ್ಕಿಂತ ಮೊದಲಿನ ದ್ವಿಪಥ ರಸ್ತೆಯ ಸಹವಾಸವೇ ಪರವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಈ ಹದಗೆಟ್ಟಿರುವ ರಸ್ತೆಯ ಬಗ್ಗೆ ಮುಂದೇನು ಎನ್ನುವ ಬಗ್ಗೆ ಆಡಳಿತ, ಅಧಿಕಾರ ವಲಯದಲ್ಲಿ ಸ್ಪಷ್ಟತೆ ಇಲ್ಲ. ಹಾಗಾಗಿ ಈ ಗಂಡಾಗುಂಡಿ ರಸ್ತೆಯಲ್ಲೇ ಜನರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು, ಸ್ಥಳೀಯ ಸರಕಾರವನ್ನು ಬೈದುಕೊಂಡೇ ತಿರುಗಾಡುವಂತಾಗಿದೆ.

41 ಕಿ.ಮೀ ಅಷ್ಟೇ !
ಬಿಸಿರೋಡು-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯಿಂದ ಅಡ್ಡಹೊಳೆ ತನಕದ 41 ಕಿ.ಮೀ.ದೂರ ಸಾಗುವುದೆಂದರೆ ಸುಸ್ತಾಗುವುದು ಖಚಿತ. ರಸ್ತೆಯ ಇಕ್ಕೆಲೆಗಳು ಇನ್ನೂ ಸುಧಾರಣೆ ಕಾಣ ಬೇಕಾದರೆ ಹಲವು ವರ್ಷಗಳೇ ಬೇಕೆನ್ನುವಂತಿದೆ. ಒಂದೆಡೆ ಗುಡ್ಡ ಬಾಯ್ದೆರೆದಿದ್ದರೆ, ಇನ್ನೊಂದೆಡೆ ಮತ್ತಷ್ಟು ಆಳದ ಹೊಂಡ, ರಕ್ಷಣಾ ಬೇಲಿ ಇಲ್ಲದ ಕಿರು ಸೇತುವೆ, ಮಳೆ ನೀರು ಹರಿಯಲು ಸಿದ್ಧವಾಗದ ಮೋರಿ-ಹೀಗೆ ಎಲ್ಲಿ ನೋಡಿದರೂ ಅವ್ಯವಸ್ಥೆಯೇ ಕಣ್ಣಿಗೆ ರಾಚುತ್ತಿದೆ.

Advertisement

ಆಳೆತ್ತರದ ಹೊಂಡ
ಸಮತ್ತಟ್ಟಾಗಿದ್ದ ರಸ್ತೆ ಇಕ್ಕೆಲಗಳಲ್ಲಿ ಆಳೆತ್ತರದ ಹೊಂಡಗಳು ಉಂಟಾಗಿದ್ದು, ಅನಾಹುತಗಳಿಗೆ ಆಹ್ವಾನಿಸುತ್ತಿವೆ. ಇದು ಅಪೂರ್ಣ ಚತುಷ್ಪಥ ಕಾಮಗಾರಿ ಬೀರಿದ ಅಡ್ಡ ಪರಿಣಾಮ. ಚತುಷ್ಪಥ ಕಾಮಗಾರಿಗೆಂದು ಈಗಿರುವ ದ್ವಿಪಥದ ರಸ್ತೆಯಷ್ಠೆ ಇನ್ನೊಂದೆಡೆ ಜೆಸಿಬಿ ಯಂತ್ರಗಳ ಮೂಲಕ ಅಗೆದಿದ್ದು, ಹೊಂಡಗಳನ್ನು ಸರಿಪಡಿಸದಿದ್ದರೆ ಮುಂದಿನ ಮಳೆಗಾಲದಲ್ಲಿ ಅಪಾಯ ಖಚಿತ ಎನ್ನುತ್ತಾರೆ ಸ್ಥಳೀಯರು. ಆದರೆ, ಪ್ರಸ್ತುತ ಹೆದ್ದಾರಿ ಇಲಾಖೆ ಅಧಿಕಾರಿಗಳು ತಣ್ಣಗಿದ್ದು, ಯಾವ ಕಾಮಗಾರಿಯೂ ನಡೆಯದಂತಾಗಿದೆ.

ಏಳು ಗ್ರಾಮಗಳು..!
ಅಡ್ಡಹೊಳೆಯಿಂದ-ಉಪ್ಪಿನಂಗಡಿ ರಸ್ತೆ ಇಕ್ಕೆಲಗಳಲ್ಲಿ ಮೂರು ತಾಲೂಕಿನ ಏಳು ಗ್ರಾಮಗಳು ಒಳಪಟ್ಟಿವೆ. ಕೌಕ್ರಾಡಿ, ನೆಲ್ಯಾಡಿ, ಕೊಣಾಲು, ಗೋಳಿತೊಟ್ಟು, ಬಜತ್ತೂರು, ಉಪ್ಪಿನಂಗಡಿ, ನೆಕ್ಕಿಲಾಡಿ ಗ್ರಾಮಗಳ ವ್ಯಾಪ್ತಿಯೊಳಗೆ ಈ ರಸ್ತೆ ಹಾದುಹೋಗಿದೆ.

ಬೆದ್ರೋಡಿ, ವಳಾಲು, ಗೋಳಿತೊಟ್ಟು, ಕೋಲ್ಪೆ, ನೆಲ್ಯಾಡಿ, ಪೆರಿಯಶಾಂತಿ ಮೊದಲಾದೆಡೆ ಚತುಷ#ಥದ ಅರೆಬರೆ ಕಾಮಗಾರಿಗಳು ವಾಹನ ಸವಾರರ ಪಾಲಿಗೆ ದುಸ್ವಪ್ನವಾಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಹಕ್ಕೊತ್ತಾಯ.

- ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next