Advertisement

“ನಮ್ಮನ್ನೂ ಕಡಬ ತಾಲೂಕಿಗೆ ಸೇರಿಸಿಕೊಳ್ಳಿ’

03:21 PM Apr 08, 2019 | Team Udayavani |
ಕಡಬ : ಕೊನೆಗೂ ಕಡಬ ತಾಲೂಕು ಉದ್ಘಾಟನೆಯಾಗಿದೆ. ಆದರೆ ನೂತನ ಕಡಬ ತಾಲೂಕಿಗೆ ತುಂಬಾ ಹತ್ತಿರ ಇರುವ ಬೆಳ್ತಂಗಡಿ ತಾಲೂಕಿನ 5 ಗ್ರಾಮಗಳು ಹಾಗೂ ಸುಳ್ಯ ತಾಲೂಕಿನ 4 ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರ್ಪಡೆಗೊಳಿಸಬೇಕೆಂಬ ಬೇಡಿಕೆಗೆ ಮಾತ್ರ ಮನ್ನಣೆ ಸಿಕ್ಕಿಲ್ಲ. ನೂತನ ತಾಲೂಕಿಗಾಗಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯಲ್ಲಿ ನಮ್ಮ ಗ್ರಾಮಗಳ ಹೆಸರಿದ್ದರೂ ತಾಲೂಕು ರಚನೆಯ ವೇಳೆ ಹೆಸರು ಗಳನ್ನು ಕೈಬಿಡಲಾಗಿದೆ ಎನ್ನುವ ಮುನಿಸು ಆ ಗ್ರಾಮಗಳ ಜನರದ್ದು.
ಕೈಬಿಟ್ಟ ಗ್ರಾಮಗಳು ಕಡಬ ತಾಲೂಕಿಗಾಗಿ ಹಲವು ದಶಕಗಳಿಂದಲೇ ಹೋರಾಟಗಳು ನಡೆದಿದ್ದವು. ಕಡಬದ ತಾಲೂಕಿನ ಪ್ರಸ್ತಾವನೆಯಲ್ಲಿ ಬೆಳ್ತಂಗಡಿ ತಾಲೂಕಿನ ಶಿಶಿಲ, ಕೊಕ್ಕಡ, ಶಿಬಾಜೆ, ರೆಖ್ಯಾ, ಹತ್ಯಡ್ಕ ಗ್ರಾಮಗಳು ಹಾಗೂ ಸುಳ್ಯ ತಾಲೂಕಿನ ಏನೆಕಲ್‌, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು, ಎಡಮಂಗಲ, ಐವತ್ತೂಕ್ಲು (ಪಂಜ), ಕೂತ್ಕುಂಜ, ಪಂಬೆ ತ್ತಾಡಿ ಮತ್ತು ಮುರುಳ್ಯ ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿತ್ತು.
ತಾಲೂಕು ರಚನ ಸಮಿತಿಗಳೂ ಈ ಗ್ರಾಮಗಳನ್ನು ಸೇರ್ಪಡೆಗೊಳಿಸಿಯೇ ಸರಕಾರಕ್ಕೆ ವರದಿ ನೀಡಿದ್ದವು. ಆದರೆ
ಹೊಸ ತಾಲೂಕುಗಳ ಘೋಷಣೆ ಯಾದಾಗ ಬೆಳ್ತಂಗಡಿ ತಾಲೂಕಿನ ಗ್ರಾಮ ಗಳನ್ನು ಕೈಬಿಟ್ಟು, ಸುಳ್ಯ ತಾಲೂಕಿನ 7
ಗ್ರಾಮಗಳನ್ನು ಮಾತ್ರ ಸೇರಿಸಿಕೊಳ್ಳಲಾಗಿತ್ತು. ಸುಳ್ಯ ತಾಲೂಕಿನ ಐವತ್ತೂಕ್ಲು (ಪಂಜ), ಕೂತ್ಕುಂಜ, ಪಂಬೆತ್ತಾಡಿ ಮತ್ತು ಮುರುಳ್ಯ ಗ್ರಾಮಗಳನ್ನು ಕಡಬ ತಾಲೂಕಿನ ವ್ಯಾಪ್ತಿಯಿಂದ ಕೈಬಿಡಲಾಗಿತ್ತು.
ನೂತನ ತಾಲೂಕಿನ ವ್ಯಾಪ್ತಿಯಿಂದ ಕೈಬಿಡಲಾಗಿರುವ ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನ ಈ ಗ್ರಾಮಗಳು ಕಡಬ
ತಾಲೂಕು ಕೇಂದ್ರಕ್ಕೆ ಭೌಗೋಳಿಕವಾಗಿ ಬಹಳ ಹತ್ತಿರವಾಗಿದ್ದು, ಅಲ್ಲಿಯ ಜನರ ಅನುಕೂಲಕ್ಕಾಗಿ ಆ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರ್ಪಡೆಗೊಳಿಸಬೇಕು ಎನ್ನುವ ಬೇಡಿಕೆ ಸರಕಾರದ ಮಟ್ಟಕ್ಕೆ ತಲುಪಿದೆ. ಬೆಳ್ತಂಗಡಿ ತಾಲೂಕಿನ ಶಿಶಿಲ, ಕೊಕ್ಕಡ, ಶಿಬಾಜೆ, ರೆಖ್ಯಾ, ಹತ್ಯಡ್ಕ ಗ್ರಾಮಗಳು ಕಡಬ ತಾಲೂಕಿಗೆ ಸೇರ್ಪಡೆಯಾಗಬೇಕು ಎಂದು ಆಯಾ ಗ್ರಾ.ಪಂ.ಗಳು ನಿರ್ಣಯ ಕೈಗೊಂಡಿವೆ. ಸುಳ್ಯ ತಾಲೂಕಿನ ಐವತ್ತೂಕ್ಲು (ಪಂಜ), ಕೂತ್ಕುಂಜ, ಪಂಬೆತ್ತಾಡಿ ಮತ್ತು ಮುರುಳ್ಯ ಗ್ರಾಮಗಳಿಗೂ ಕಡಬ ತಾ| ಕೇಂದ್ರವಾದರೆ ಅನುಕೂಲವಾಗಲಿದೆ ಎಂದು ಅಲ್ಲಿನ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗೆ ಸೂಚನೆ ಮುಖ್ಯಮಂತ್ರಿ, ಕಂದಾಯ ಸಚಿವರು, ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಫಲವಾಗಿ
ರಾಜ್ಯದ ಅಧೀನ ಕಾರ್ಯದರ್ಶಿಯವರು ಸೂಕ್ತ ಕ್ರಮ ಕೈಗೊಳ್ಳುವಂತೆ, ಅಗತ್ಯವಿದ್ದಲ್ಲಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ಕಡಬ ತಾ| ಹೋರಾಟ ಸಮಿತಿಯ ಕಾರ್ಯದರ್ಶಿ ಸಯ್ಯದ್‌ ಮೀರಾ ಸಾಹೇಬ್‌ ತಿಳಿಸಿದ್ದಾರೆ.
ಸೇರಿಸಿದರೆ ಉತ್ತಮ ಪ್ರಸ್ತುತ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿರುವ ಶಿಶಿಲ, ಕೊಕ್ಕಡ, ಶಿಬಾಜೆ, ರೆಖ್ಯಾ ಹಾಗೂ ಹತ್ಯಡ್ಕ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರಿಸಿದರೆ ಅಲ್ಲಿನ ಜನರಿಗೆ ಅನುಕೂವಾಗಲಿದೆ. ನಾವು ಕಂದಾಯ ಕಚೇರಿಯ ಕೆಲಸಗಳಿಗೆ ಮಾತ್ರ ಬೆಳ್ತಂಗಡಿಗೆ ಹೋಗಬೇಕಿದೆ. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ರಸ್ತೆಗಳ ಪರಿಸ್ಥಿತಿಯಂತೂ ಹೇಳುವುದೇ ಬೇಡ. ಉತ್ತಮ ರಸ್ತೆ ಮತ್ತು ಸೇತುವೆಗಳಿರುವ ಕಾರಣ ನಮಗೆ ಕಡಬವನ್ನು ತಲುಪುವುದು ಸುಲಭ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರ್ಪಡೆಗೊಳಿಸಿ ಎನ್ನುವುದು ನಮ್ಮ ಆಗ್ರಹ.
 -ಎ.ಸಿ. ಮ್ಯಾಥ್ಯೂ, ಮಾಜಿ ಅಧ್ಯಕ್ಷರು, ಶಿಬಾಜೆ ಗ್ರಾ.ಪಂ.
ನಾಗರಾಜ್‌ ಎನ್‌.ಕೆ.
Advertisement

Udayavani is now on Telegram. Click here to join our channel and stay updated with the latest news.

Next