ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
Advertisement
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಸಮುದಾಯಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಇತಿಹಾಸವಿದೆ. ಸುಮಾರು 15 ಜನರನ್ನು ಬ್ರಿಟಿಷರ ಸೇನೆ ನೇಣಿಗೇರಿಸುವ ಮೂಲಕ ಸಮುದಾಯದವರ ಬಲಿದಾನ ಪಡೆದಿದೆ. ಆದರೆ ಈ ಇತಿಹಾಸ ಮುಚ್ಚಿಹಾಕಲಾಗಿದೆ.
ಅದೇ ಸ್ವಾತಂತ್ರ್ಯ ಚಳವಳಿ ಉಗ್ರ ಸ್ವರೂಪ ಪಡೆದಾಗ ಸಮಾಜವರು ಗೋಲಿಬಾರ್ ನಲ್ಲಿ ವೀರಸ್ವರ್ಗ ಕಂಡರು. ಸ್ವಾತಂತ್ರ್ಯಾ ನಂತರ ಆಡಳಿತಕ್ಕೆ ಬಂದ ಸರ್ಕಾರಗಳು ಉಪ್ಪಾರ ಸಮಾಜವನ್ನು ಅಲಕ್ಷಿಸಿವೆ ಎಂದು ಆರೋಪಿಸಿದರು. ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಉದ್ಯೋಗದಲ್ಲಿ ವಡ್ಡರ್ ಸಮುದಾಯ, ಉಪ್ಪಾರ ಸಮುದಾಯದವರ ಕೆಲಸ ಒಂದೇ ಆದರೂ ವಡ್ಡರ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಉಪ್ಪಾರ ಸಮುದಾಯವನ್ನು ಮೀಸಲಾತಿ ಯಿಂದ ವಂಚಿಸಲಾಗಿದೆ ಎಂದರು.
Related Articles
Advertisement
2006ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಸಮಾಜವನ್ನು ಎಸ್.ಟಿ.ಗೆ ಸೇರಿಸುವ ಭರವಸೆ ನೀಡಿದ್ದರು. ಬೆಂಗಳೂರಲ್ಲಿ ನಡೆದ ಸಮಾವೇಶದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾನ ಮಾಡಿದ್ದರು. ಎಲ್ಲರ ಭರವಸೆಗಳು ಹುಸಿಯಾಗಿವೆ ಎಂದರು.
ಕೂಡಲೇ ಸಮಾಜವನ್ನು ಎಸ್ .ಟಿ.ಗೆ ಸೇರಿಸಬೇಕು. ಸಮಾಜಕ್ಕೆ ಈಗಿರುವ ಆದಾಯ ಮಿತಿ ತೆಗೆದುಹಾಕಬೇಕು. ಉಪ್ಪಾರ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷೆ ಡಾ| ಸರಸ್ವತಿ ಚಿಮ್ಮಲಗಿ, ರಾಜ್ಯಾಧ್ಯಕ್ಷ ಲಕ್ಷ್ಮಣ ಉಪ್ಪಾರ, ಸತೀಶ ಮುರಗೋಡ, ಗೋವಿಂದ ರಾವೂರ, ಅಮರೇಶ ಸಾಹುಕಾರ ಕಟ್ಟಿಮನಿ, ಶ್ರೀನಿವಾಸ ಸಗರ ರಾವೂರ, ವೆಂಕಟೇಶ ನಿರಡಗಿ, ಮಹಾದೇವ ಉಪ್ಪಾರ, ಹನುಮಾಕ್ಷಿ ಗೋಗಿ, ಶ್ರೀನಿವಾಸ ಮಸರಕಲ್, ಗೋಪಣ್ಣ ನೀರಡಗಿ, ನಿಂಗಣ್ಣ ಹೊರಪೇಟ್, ವಿಠೊಬಾ ಗೌಂಡಿ ಹಾಗೂ ಇತರರಿದ್ದರು.