Advertisement

ಹಡಪದರ ಪ್ರವರ್ಗ1ಕ್ಕೆ ಸೇರಿಸಿ: ಯಡಿಯೂರಪ್ಪ

04:28 PM May 03, 2017 | Team Udayavani |

ಕಲಬುರಗಿ: ಅಣ್ಣ ಬಸವಣ್ಣನಿಗೆ ನಿಷ್ಠೆಯಿಂದಿದ್ದು, ಶರಣಕ್ರಾಂತಿ ಭಾಗವಾಗಿದ್ದುಕೊಂಡು ಸಾಮಾಜಿಕ ಕಳಕಳಿ ಮೆರೆದ ಹಡಪದ ಅಪ್ಪಣ್ಣ ಸಮಾಜದ ಬಾಂಧವರನ್ನು ಕೂಡಲೇ ರಾಜ್ಯ ಸರಕಾರ ಪ್ರವರ್ಗ 1ರ ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ಮುಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಖಂಡಿತ ಸೇರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. 

Advertisement

ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖೀಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶರಣ ಹಡಪದ ಅಪ್ಪಣ್ಣ ಅವರ 882ನೇ ಜಯಂತ್ಯುತ್ಸವ ಹಾಗೂ ಜಿಲ್ಲಾ ಮಟ್ಟದ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

ಸಾಮಾಜಿಕವಾಗಿ ಬಲಗೊಳ್ಳಿ: 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಮಾಡಿರುವ ಕ್ರಾಂತಿಯಲ್ಲಿ ಅವರ ಜೊತೆಗಿದ್ದು, ಜಾತಿರಹಿತ ವ್ಯವಸ್ಥೆಗೆ ಹೋರಾಡಿದ್ದ ಅಪ್ಪಣ್ಣ ದಂಪತಿ ನಿಜಕ್ಕೂ ಹಡಪದ ಸಮಾಜದ ಆಸ್ತಿ. ಅವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ಸಮಾಜ ನಡೆಯಬೇಕು. ಅದಕ್ಕಾಗಿ ಸಾಮಾಜಿಕವಾಗಿ ಬಲಗೊಳ್ಳಬೇಕು.

ಒಗ್ಗಟ್ಟಿನಿಂದ ನಡೆಯಬೇಕು. ಶಿಕ್ಷಣ ಪಡೆದು ಆರ್ಥಿಕವಾಗಿ ಬಲಗೊಂಡು ಹಿಂದುಳಿವಿಕೆಯನ್ನು ಕಿತ್ತೂಗೆದು ಮುನ್ನಡೆಯಬೇಕು ಎಂದರು. 2018ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದಿದ್ದೇ ಆದರೆ, ಖಂಡಿತವಾಗಿ ನೀವು ಇವತ್ತು ನೀಡಿರುವ ಮನವಿಯಲ್ಲಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದರಲ್ಲದೆ, ಸಮುದಾಯ ಭವನಕ್ಕೆ 50 ಲಕ್ಷ ರೂ., ಹಡಪದ ಅಪ್ಪಣ್ಣ ಐಕ್ಯ ಸ್ಥಳದ ಸಾಂಸ್ಕೃತಿಕ ಭವನಕ್ಕೆ 5 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದರು. 

ಮಾಜಿ ಸಚಿವ ಹಾಗೂ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಹಡಪದ ಅಪ್ಪಣ್ಣ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಆರಂಭಿಸಿ ಆ ಜನಾಂಗದ ಸರ್ವಾಂಗೀಣ ವಿಕಾಸಕ್ಕಾಗಿ ರಾಜ್ಯ ಸರಕಾರ ಪ್ರಯತ್ನಿಸಬೇಕು. ಒಂದು ವೇಳೆ ಕಾಂಗ್ರೆಸ್‌ ಸರಕಾರ ಮಾಡದೇ ಇದ್ದಲ್ಲಿ ನೀವು ಅವರಿವರ ಮನೆಗಳಿಗೆ ಓಡಾಡಬೇಡಿ. ಮುಂದಿನ ಚುನಾವಣೆಯಲ್ಲಿ ಖಂಡಿತ ಬಿಜೆಪಿ ಅಧಿಕಾರಕ್ಕೆ ಬರುತ್ತದೆ.

Advertisement

ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ಆಗ ನಿಗಮ, ಅಪ್ಪಣ್ಣ ಐಕ್ಯಸ್ಥಳದಲ್ಲಿ ಬೃಹತ್‌ ಸಾಂಸ್ಕೃತಿಕ ಭವನ ಮಾಡಿ ಕೊಡಲಾಗುವುದು ಎಂದು ಹೇಳಿದರು. ಯುಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ನಾವು ಹಡಪದ ಅಪ್ಪಣ್ಣ ಜಯಂತಿಯನ್ನು ಸರಕಾರದಿಂದ ಆಚರಿಸುವಂತೆ ಘೋಷಣೆ ಮಾಡಿದ್ದೆವು. ಲಂಡನ್‌ನಲ್ಲಿ ಬಸವಣ್ಣ ಮೂರ್ತಿ ಸ್ಥಾಪಿಸಲು 3 ಕೋಟಿ ರೂ.ಗಳನ್ನು ಯಡಿಯೂರಪ್ಪ ಕಾಲದಲ್ಲೇ ನೀಡಲಾಗಿತ್ತು. 2500 ವಚನಗಳ ಬಿಡುಗಡೆಗೂ ಅವರೇ ಕಾರಣಿಕರ್ತರು ಎಂದರು. 

ಅಪ್ಪಣ್ಣ ಶ್ರೀ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಹಾಪುರದ ಡಾ| ದೇವಿಂದ್ರಪ್ಪ ಸಗರ, ಭಂಕೂರಿನ ಸಂಗೀತಗಾರ ರಾಮಚಂದ್ರ ಹಡಪದ ಹಾಗೂ ಇನ್ನಿಬ್ಬರನ್ನು ಸನ್ಮಾನಿಸಿ ಅಪ್ಪಣ್ಣಶ್ರೀ ಪ್ರಶಸ್ತಿ ನೀಡಲಾಯಿತು. ಬೆಲ್ದಾಳ ಸಿದ್ದರಾಮ ಶರಣರು, ಹಡಪದ ಅಪ್ಪಣ್ಣ ದೇವರ ಸಂಸ್ಥಾನಮಠದ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಜಿಲ್ಲಾಧ್ಯಕ್ಷ ಈರಣ್ಣ ಹಡಪದ ಸಣ್ಣೂರ ಸ್ವಾಗತಿಸಿದರು. ಸಮಾಜದ ರಾಜ್ಯಾಧ್ಯಕ್ಷ ಅಣ್ಣಾರಾವ್‌ ನರಿಬೋಳ ಪ್ರಾಸ್ತಾವಿಕ ಮಾತನಾಡಿದರು. ಬೀದರ ಸಂಸದ ಭಗವಂತ ಖೂಬಾ, ಶಾಸಕರಾದ ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ್‌, ಬಿ.ಆರ್‌. ಪಾಟೀಲ, ಮಾಜಿ ಸಚಿವರಾದ ರೇವೂ ನಾಯಕ ಬೆಳಮಗಿ, ಸುನೀಲ ವಲ್ಯಾಪುರೆ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ,

ಹಡಪದ ಸಮಾಜ ಜಿಲ್ಲಾ ಘಟಕದ ಗೌರವಾಧ್ಯಕ್ಷ ಮಲ್ಲಿನಾಥ ಹಡಪದ ಸಂಗೊಳಗಿ, ಕಾರ್ಯಾಧ್ಯಕ್ಷ ಭಗವಂತ ಹಡಪದ ಹೊನ್ನಕಿರಣಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ, ಶರಣಬಸಪ್ಪ ಹಡಪದ ರಾಜಾಪುರ, ತಾಲೂಕು ಅಧ್ಯಕ್ಷರಾದ ಬಸವರಾಜ ಸೂಗೂರು, ಮಲ್ಲಣ್ಣ ಪರಹತಾಬಾದ, ಅಪ್ಪಣ್ಣ ಹಡಪದ ಹಂದ್ರಾಳ, ವಿಶ್ವನಾಥ  ಹಡಪದ ಉಡಗಿ ಹಾಗೂ ಸಮಾಜ ಬಾಂಧವರು ಹಾಜರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next