ಕಲಬುರಗಿ: ಜಿಲ್ಲೆಯಲ್ಲಿ 18 ವರ್ಷ ತುಂಬಿರುವ ಯುವಕ-ಯುವತಿಯರು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸುವುದಲ್ಲದೇ ಮತದಾರರ ಗುರುತಿನ ಚೀಟಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ-2019ರ ಅಂಗವಾಗಿ ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಹಾಗೂ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
18 ರಿಂದ 40 ವಯಸ್ಸಿನ ಯುವಕ-ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ದೇಶ ನಮ್ಮದಾಗಿದೆ. ದೇಶವನ್ನು ಮುನ್ನಡೆಸುವ ಅಧಿಕಾರ ಜನಪ್ರತಿನಿಧಿಗಳಿಗೆ ನಾವು ನೀಡುತ್ತಿರುವುದರಿಂದ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಉತ್ತಮ ಜನನಾಯಕರನ್ನು ಚುನಾಯಿತಗೊಳಿಸಬೇಕು ಎಂದರು.
ಕಲಬುರಗಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರಗಳಲ್ಲಿ ಬಹುತೇಕ ವಯಸ್ಕರು ಮತದಾರರು ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರೂ ಚುನಾವಣೆ ಸಂದರ್ಭದಲ್ಲಿ ಈ ಕ್ಷೇತ್ರಗಳಲ್ಲಿ ಶೇ.50ರಷ್ಟು ಮಾತ್ರ ಮತದಾನವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಮತದಾನ ದಿನದಂದು ಎಲ್ಲ ಕೆಲಸವನ್ನು ಬದಿಗೊತ್ತಿ ಸದೃಢ ದೇಶದ ನಿರ್ಮಾಣಕ್ಕೆ ಎಲ್ಲರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ. ಮಾತನಾಡಿ, ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಮತದಾನದ ಮಹತ್ವ ಸಾರಲು ಸ್ವೀಪ್ ಸಮಿತಿಯಿಂದ ಶಾಲಾ-ಕಾಲೇಜಿನ ಮಕ್ಕಳಿಗೆ ರಸಪ್ರಶ್ನೆ, ಪ್ರಬಂಧ, ಕ್ರೀಡಾ ಸರ್ಧೆಗಳನ್ನು ಏರ್ಪಡಿಸಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸ್ವೀಪ್ ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಎಲ್ಲ ತಾಲೂಕು, ಜಿಲ್ಲಾ ಮಟ್ಟದ ಶಾಲೆಗಳಲ್ಲಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಏರ್ಪಡಿಸುವುದರ ಮೂಲಕ ಮತದಾನದ ಮಹತ್ವ ಕುರಿತು ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಸ್ಪರ್ಧೆಗಳಲ್ಲಿ ಜಯಶಾಲಿಯಾದ ಮಕ್ಕಳಿಗೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಆಯ್ಕೆ ಮಾಡಲಾಗುವುದು ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ
ಉಪನಿರ್ದೇಶಕ ಶಾಂತಗೌಡ ಪಾಟೀಲ, ಮಾಸ್ಟರ್ ಟ್ರೇನರ್ ಶಶಿಕಾಂತ ರೆಡ್ಡಿ ಹಾಗೂ ಇನ್ನಿತರರು ಇದ್ದರು.