ಬಾಗಲಕೋಟೆ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ಯುವ ಮತದಾರರು ಬಿಟ್ಟು ಹೋಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಎಂದು ಮತದಾರರ ಪಟ್ಟಿ ಪರಿಷ್ಕರಣೆ ವೀಕ್ಷಕ ಮನೋಜ್ ಜೈನ್ ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಮತದಾರರ ಪಟ್ಟಿ ಪರಿಷ್ಕರಣ ಕಾರ್ಯದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಯುವ ಮತದಾರರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆಯಾ ಬೂತ್ ಮಟ್ಟದ ಬಿಎಲ್‌ಒಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿ ಭೇಟಿ ನೀಡಿ ಪರಿಶೀಲಿಸುವ ಕಾರ್ಯವಾಗಬೇಕು ಎಂದರು. ಮತದಾರರ ಪಟ್ಟಿಯಲ್ಲಿ ಅಲೇಮಾರಿ ಜನಾಂಗ ಹಾಗೂ ಸುಡಗಾಡ ಸಿದ್ದರು ಬಿಟ್ಟು ಹೋಗಬಾರದು. ಎಲ್ಲ ತಹಶೀಲ್ದಾರರು ಚುರುಕಾಗಿ ಕಾರ್ಯನಿರ್ವಹಿಸಿ ಮತದಾರರ ಪಟ್ಟಿ ಪರಿಷ್ಕರಣೆಗೆ ಎಲ್ಲ ರೀತಿಯ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಮಟ್ಟದಲ್ಲಿ ದಿನ 24 ಗಂಟೆಗಳ ಕಂಟ್ರೋಲ್ ರೂಂ ತೆರೆಯಲು ತಿಳಿಸಿದರು. ಸ್ವೀಪ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡಬೇಕು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ ಡಾ| ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಮಿಂಚಿನ ನೋಂದಣಿಯಲ್ಲಿ 18-19 ವಯಸ್ಸಿನ 5640 ಮತದಾರರು ಹೆಸರು ನೋಂದಾಯಿಸಿದ್ದಾರೆ. ಕಳೆದ ಡಿಸೆಂಬರ್ 16ರಿಂದ ಜ.23 ರವರೆಗೆ ಜಿಲ್ಲೆಯಲ್ಲಿ ಒಟ್ಟು 31,880 ಅರ್ಜಿಗಳನ್ನು ಡಿಜಿಟೈಜಡ್ ಮಾಡಲಾಗಿದೆ ಎಂದರು.
ವಿವಿಧ ಹಂತದಲ್ಲಿ ಎಲ್ಲ ಅಧಿಕಾರಿಗಳು ಮತದಾರರ ಪಟ್ಟಿ ಪರಿಶೀಲಿಸಿದ್ದು, ಈವರೆಗೆ 3,204 ಅರ್ಜಿಗಳನ್ನು ಪರಿಶೀಲಿಸಲಾಗಿದೆ. 42,246 ಹೊಸ ಮತದಾರರ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಜಿಲ್ಲೆಯ 7 ಮತಕ್ಷೇತ್ರಗಳಲ್ಲಿ ಜ.13ರ ಅಂತ್ಯಕ್ಕೆ ಹಕ್ಕು ಮತ್ತು ಆಕ್ಷೇಪಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಮೂನೆ-6ಕ್ಕೆ ಸಂಬಂಧಿಸಿದಂತೆ 26,671, ಹೆಸರು ತೆಗೆದು ಹಾಕಲು ನಮೂನೆ-7ಕ್ಕೆ 6,489, ಲೋಪದೋಷ ಸರಿಪಡಿಸಲು ನಮೂನೆ-8ಕ್ಕೆ 21,753 ಹಾಗೂ ಅದೇ ವಿಧಾನಸಭೆ ಕ್ಷೇತ್ರದ ಒಂದು ಮತಗಟ್ಟೆಯಿಂದ ಬೇರೊಂದು ಮತಗಟ್ಟೆ ಸ್ಥಳಾಂತರಕ್ಕೆ ನಮೂನೆ-8ಎಗೆ ಸಂಬಂಧಿಸಿದಂತೆ 3,665 ಆಕ್ಷೇಪಣೆಯ ಅರ್ಜಿಗಳು ಬಂದಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತರಬೇತಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ ಇದ್ದರು.