ಕಲಬುರಗಿ: ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ. ನಿಗದಿ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ ವೀರಶೈವ-ಲಿಂಗಾಯತ ಸಮುದಾಯವನ್ನುಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಿದರೆ ಮಾತ್ರ ಸಮರ್ಪಕ ನ್ಯಾಯ ದೊರಕಲು ಸಾಧ್ಯವಾಗುತ್ತದೆ ಎಂದು ಅಖೀಲ ಭಾರತ ವೀರಶೈವ-ಲಿಂಗಾಯತಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಹೇಳಿದರು.
ನಿಗಮಕ್ಕೆ 500 ಕೋಟಿ ರೂ. ನಿಗದಿಗೊಳಿಸಿ ಆದೇಶಹೊರ ಬೀಳುತ್ತಿದ್ದಂತೆ ಮಂಗಳವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ಸಮಾಜದ ಪದಾಧಿಕಾರಿಗಳೊಂದಿಗೆಸಿಹಿ ತಿನ್ನಿಸಿ ಸಂಭ್ರಮಿಸಿಕೊಂಡು ಮಾತನಾಡಿದ ಅವರು, ವೀರಶೈವ ಲಿಂಗಾಯತ್ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಈಗ ಪ್ರಮುಖವಾಗಿ ಶಿಫಾರಸು ಮಾಡಬೇಕು. ಶಿಫಾರಸು ಮಾಡಲು ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಹೇಳಿದರು.
ಇದನ್ನೂ ಓದಿ:ಮಳೆ ಹಾನಿ ಪ್ರದೇಶಕ್ಕೆ ಕೇಂದ್ರದಿಂದ ಅಧ್ಯಯನ ತಂಡ ಬಂದಿಲ್ಲ: ಅಜಿತ್ ಪವಾರ್
ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಇತರ ಕೆಲವು ಸಮುದಾಯಗಳಿಗಿಂತಲೂ ಹೆಚ್ಚು ಆರ್ಥಿಕವಾಗಿ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವೀರಶೈವ ಲಿಂಗಾಯತ್ ಸಮುದಾಯ ಸೇರಿಲ್ಲ. ಹೀಗಾಗಿ ಕೇಂದ್ರದ ಯಾವುದೇ ಉದ್ಯೋಗದಲ್ಲಿ ಯಾವುದೇ ಮೀಸಲಾತಿ ದೊರೆಯದೇ ಅನ್ಯಾಯ ಎದುರಿಸುವಂತಾಗಿದೆ ಎಂದು ಮೋದಿ ಅಳಲು ತೋಡಿಕೊಂಡರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಪ್ಪು ಕಣಕಿ, ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಡಾ| ಶಂಭುಲಿಂಗ ಪಾಟೀಲ ಬಳಬಟ್ಟಿ, ಮಹಾಸಭಾ ಪದಾಧಿಕಾರಿಗಳಾದ ಶರಣು ಭೂಸನೂರ, ನಾಗಲಿಂಗಯ್ಯ ಮಠಪತಿ, ಶಾಂತಕುಮಾರ ದುಧನಿ, ಮಚ್ಚೇಂದ್ರನಾಥ ಮೂಲಗೆ, ಶರಣು ಟೆಂಗಳಿ, ವಿಜಯಕುಮಾರ ಹುಲಿ, ಮಹಾದೇವ ಬೆಳಮಗಿ, ಸಂಗಮೇಶ ಮನ್ನಳ್ಳಿ, ಜಿ.ಕೆ. ಪಾಟೀಲ, ಅಶೋಕ ಮಾನಕರ್, ಶಾಂತರೆಡ್ಡಿ, ಸುನೀಲಕುಮಾರ ಬನಶೆಟ್ಟಿ ಮುಂತಾದವರಿದ್ದರು.
ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ. ನಿಗದಿ ಮಾಡಿರುವಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಕಾರಣರಾಗಿದ್ದಾರೆ. ಆರ್ಥಿಕವಾಗಿ ದುರ್ಬಲರಿಗೆ ನಿಗಮದಿಂದ ಸಹಾಯವಾಗಲಿದೆ.
–ಅಪ್ಪು ಕಣಕಿ, ಎಪಿಎಂಸಿ ಅಧ್ಯಕ್ಷ