Advertisement

ಕೋಲಿ ಎಸ್‌ಟಿಗೆ ಸೇರಿಸಲು ಲಕ್ಷ ಸಹಿ ಸಂಗ್ರಹ

03:01 PM Mar 08, 2017 | |

ಅಫಜಲಪುರ: ರಾಜ್ಯದಲ್ಲಿ ಹಿಂದುಳಿದ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ನಿಟ್ಟಿನಲ್ಲಿ  ಸರ್ಕಾರ ಪ್ರಯತ್ನ ಮಾಡಬೇಕು. ಹೀಗಾಗಿ ಜಿಲ್ಲೆಯಾದ್ಯಂತ ಕೋಲಿ ಸಮಾಜ ಬಾಂಧವರ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನ  ಕೈಗೊಳ್ಳಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಶಂಕು ಮ್ಯಾಕೇರಿ ಹೇಳಿದರು. 

Advertisement

ಪಟ್ಟಣದ ಅಂಬಿಗರ ಚೌಡಯ್ಯ ಬಡಾವಣೆಯಲ್ಲಿ ಲಕ್ಷ ಸಹಿ ಸಂಗ್ರಹ ರಥಯಾತ್ರೆ  ಸ್ವಾಗತಿಸಿ ಮಾತನಾಡಿದ ಅವರು, ಕೋಲಿ ಸಮಾಜದವರು ಭಾರತದ ಮೂಲನಿವಾಸಿಗಳು. ಎಲ್ಲಾ ರಾಜ್ಯಗಳಲ್ಲಿ ಕೋಲಿ ಸಮಾಜಕ್ಕೆ ಹೆಚ್ಚಿನ ಸವಲತ್ತುಗಳಿವೆ. ಕರ್ನಾಟದಲ್ಲಿ ಮಾತ್ರ ಸಮಾಜ ಸವಲತ್ತುಗಳಿಂದ ವಂಚಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ನಮ್ಮನ್ನಾಳುವ ಸರ್ಕಾರಗಳು ಕೋಲಿ ಸಮಾಜವನ್ನು ಕಡೆಗಣಿಸದೆ ಎಸ್‌ಟಿಗೆ  ಸೇರಿಸಬೇಕು. ಸಂವಿಧಾನ ರಚನೆಯಾಗಿ 70 ವರ್ಷಗಳಾದರೂ ನಮಗೆ ಸಂವಿಧಾನ ಬದ್ದ ಹಕ್ಕು ಸಿಕ್ಕಿಲ್ಲ.  ಹೀಗಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಲಕ್ಷ ಸಹಿ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದರು.  ಕರ್ನಾಟಕ ಕೋಲಿ ಸೈನ್ಯದ ರಾಜ್ಯಾಧ್ಯಕ್ಷ ನಿಂಗಣ್ಣ ದೇವಣಗಾಂವ ಮಾತನಾಡಿ, ಕೋಲಿ ಸಮಾಜ ಹಿಂದುಳಿದ ಸಮಾಜವಾಗಿದೆ.

ಹೀಗಾಗಿ ಎಸ್‌ಟಿ ಪಂಗಡಕ್ಕೆ ಸೇರಿಸಿ ನ್ಯಾಯ ಒದಗಿಸುವ ಜವಾಬ್ದಾರಿ  ಸರಕಾರದ್ದು ಎಂದರು. ಜಿಲ್ಲೆಯಾದ್ಯಂತ ಲಕ್ಷ ಸಹಿ  ಸಂಗ್ರಹಿಸಿ ಮಾ. 18ರಂದು ಕಲಬುರಗಿ ನಗರದಲ್ಲಿ ಬೃಹತ್‌ ರ್ಯಾಲಿ  ಹಮ್ಮಿಕೊಂಡು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು. ರಾಜೇಂದ್ರ ರಾಜವಾಳ, ಲಕ್ಷಿಪುತ್ರ ತಳವಾರ, ಬಾಬು ಬೈರಂಪಳ್ಳಿ, ಮಹಾರಾಯ ಅಗಸಿ, ಅಶೋಕ ದುದ್ದಗಿ, ಸುರೇಶ ಕಲ್ಲೂರ, ಶರಣಪ್ಪ ದುದ್ದಗಿ, ಮಹಾಂತೇಶ ಬಡಿಗೇರ, ಸಿದ್ದು ಸಿನ್ನೂರ ಹಾಗೂ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next