Advertisement

ರಾಜ್ಯೋತ್ಸವ-2022: ಎಲ್ಲೆಡೆ ಕನ್ನಡ ಕಡ್ಡಾಯಗೊಳಿಸುವ ನಿಯಮ ಸೇರಿಸಿ

09:49 AM Nov 01, 2022 | Team Udayavani |

ಕನ್ನಡ ಅಸ್ಮಿತೆ ಪರಂಪರೆ, ಇತಿಹಾಸ ಇವುಗಳನ್ನು ಕುರಿತು ನಾನು ಯೋಚಿಸಿದಾಗ ನನಗೆ ಥಟ್ಟನೆ ನೆನಪಾಗುವುದು 9ನೇ ಶತಮಾನದಲ್ಲಿ ಶ್ರೀವಿಜಯ ರಚಿಸಿರುವ ಕವಿರಾಜ ಮಾರ್ಗ ಎನ್ನುವ ಗ್ರಂಥ. ಅದರಲ್ಲಿ ಕನ್ನಡ ನಾಡಿನ ವಿಸ್ತಾರ ವನ್ನು ಕನ್ನಡಿಗರ ಕತೃìತ್ವ ಸಾಮರ್ಥವನ್ನು ಶ್ರೀವಿಜಯ ವಿವರಿಸಿದ್ದಾನೆ.

Advertisement

“ಕಾವೇರಿಯಿಂದಂ-ಆ-ಗೋದಾವರಿವರಂ-ಇರ್ದ-ನಾಡು- ಅದು ಆ ಕನ್ನಡದೊಳ್‌’ ಎಂದು ಅಂದಿನ ಕನ್ನಡನಾಡಿನ ಗಡಿಯನ್ನು ಗುರುತಿಸಿದ್ದಾನೆ. ದಕ್ಷಿಣದ ಕಾವೇರಿಯಿಂದ ಉತ್ತರದ ಗೋದಾವರಿ ನದಿಯ ವರೆಗೂ ಕನ್ನಡ ನಾಡು ಹಬ್ಬಿತ್ತು. ಈಗ ಆ ವಿಸ್ತಾರವಾದ ನಾಡು ಅನೇಕ ಪ್ರದೇಶಗಳನ್ನು ಕಳೆದು ಕೊಂಡಿದೆ.
“ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್‌’ ಆಗಿದ್ದ ಕನ್ನಡಿಗರು ಹಿಂದೆ ಇಡಿಯಾಗಿ ಬಾಳಿದ್ದಾರೆ. ನಮ್ಮ ಭಾಷಾವಾರು ಪ್ರಾಂತ್ಯ ರಚನೆಯಾದದ್ದು ಭಾಷೆ ಗಳ ಆಧಾರದ ಮೇಲೆ ಒಂದು ರಾಜ್ಯದ ಭಾಷೆಯೆಂದರೆ ಅದು ಕೇವಲ ಸಂವಹನ ಕ್ರಿಯೆ ಮಾತ್ರವಲ್ಲ. ಭಾಷೆ ಆ ರಾಜ್ಯದ ಸಕಲನ್ನೂ ಕೂಡ ಒಳಗೊಂಡಿರುತ್ತದೆ.

ಅದೊಂದು ಪ್ರಬಲವಾದ ಮಾಧ್ಯಮವೂ ಹೌದು.ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರದಿಂದ ಹಿಂದಿ ಹೇರಿಕೆಯಾಗುತ್ತಿದೆ. ಆದರೆ ಇದರಿಂದ ಕನ್ನಡಿಗರಿಗೆ ಯಾವುದೇ ಪ್ರಾಂತ್ಯೀಯ ಭಾಷಿಕರಿಗೆ ಉಪಯೋಗವಿಲ್ಲ. ಕನ್ನಡ ದೂರದರ್ಶನ ವಾಹಿನಿ ವಿಚಾರದಲ್ಲೂ ಇದೇ ಆಗುತ್ತಿದೆ. ಇಲ್ಲಿಯೂ ಹಿಂದಿಯ ಒಂದೆರಡು ಜಾಹೀರಾತುಗಳು ಪ್ರಸಾರವಾಗುತ್ತಿವೆ.ಹೀಗಾಗಿ, ಹಿಂದಿ ಭಾಷೆಯ ಹೇರಿಕೆ ಕಡಿವಾಣ ಹಾಕುವ ಸಂಬಂಧದ ಅಂಶಗಳು ಕೂಡ “ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ 2022′ ರಲ್ಲಿ ಅಳವಡಿಕೆ ಆಗಬೇಕು.

ಕನ್ನಡ ಶಾಲೆಗಳನ್ನು ಅಭಿವೃದ್ದಿ ಪಡಿಸುವುದರ ಮೂಲಕ ಕನ್ನಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿ ಕೊಡ ಬೇಕಾಗಿದೆ. ಜತೆಗೆ ಕನ್ನಡ ಕಲಿತವರಿಗೆ ಸರಕಾರದಲ್ಲಿ ಹೆಚ್ಚಿನ ಉದ್ಯೋ ಗವಕಾಶಗಳು ದೊರೆಯುತ್ತದೆ ಎನ್ನುವ ಭರವಸೆ ಯನ್ನು ಸರಕಾರ ಈಗ ಜಾರಿಗೆ ತರಲು ಹೊರಟಿ ರುವ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಮಸೂದೆ 2022ರಲ್ಲಿ ನೀಡಬೇಕಾಗಿದೆ.

ಕನ್ನಡವನ್ನು ಎಲ್ಲ ಹಂತದಲ್ಲೂ ಬಳಸುವ ಪ್ರಕ್ರಿಯೆ ತೀವ್ರ  ಗೊಳ್ಳಬೇಕು. ಸರಕಾರ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳ ಬೇಕು. ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕಲಿ ಯುವ ವಿದ್ಯಾರ್ಥಿಗಳು ಯಾವ ಮಾತೃ ಭಾಷೆಯವರಾ ದರೂ ಸರಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಲೇಬೇಕು ಎಂಬುದನ್ನು ವಿಧೇಯಕದಲ್ಲಿ ಸೇರಿಸಬೇಕು.

Advertisement

ಕನ್ನಡವನ್ನು ಅಳವಡಿಸದೇ ಇರುವ ಶಾಲೆಗಳನ್ನು ದಂಡಿಸಬೇಕಾದ ಪ್ರಮೇಯ ಬರಬಹುದು. ಈ ಹಿನ್ನೆಲೆಯಲ್ಲಿ ಸರಕಾರ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಹೆಚ್ಚು ಸಶಕ್ತವಾಗಿ ಕೆಲಸ ಮಾಡಬೇಕು. ಮಕ್ಕಳಲ್ಲಿ ಭಾಷೆಯ ಪ್ರೇಮವನ್ನು ಮೂಡಿಸದೆ ನಾವು ಕನ್ನಡ ನಾಡನ್ನು ಕಟ್ಟುತ್ತೇವೆ, ಕನ್ನಡ ನಾಡನ್ನು ಅಭಿವೃದ್ದಿ ಪಡಿಸುತ್ತೇವೆ ಎನ್ನು ವುದು ಕನಸಿನ ಮಾತಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡವನ್ನು ಎಲ್ಲ ಹಂತದಲ್ಲೂ ಕಡ್ಡಾಯವಾಗಿ ಬಳಕೆ ಮಾಡುವುದರ ಮೂಲಕ ಹೊಸ ಮಸೂದೆಯನ್ನು ಇನ್ನೂ ಹೆಚ್ಚು ನಾವು ಸಮರ್ಥ ರೀತಿಯಲ್ಲಿ ಕಟ್ಟಬಹುದಾಗಿದೆ.

ಆಡಳಿತ ಪೂರ್ತಿ ಕನ್ನಡ ಎಂದರೂ ಎಷ್ಟೋ ಸಂದರ್ಭಗಳಲ್ಲಿ ಅದು ಸಂಪೂರ್ಣ ಜಾರಿಗೊಳ್ಳುತ್ತಿಲ್ಲ. ಆ ಹಿನ್ನೆಲೆಯಲ್ಲಿ ಸರಕಾರ ಕಂಕಣ ಬದ್ಧವಾಗಿ ಕನ್ನಡವನ್ನು ಅಭಿವೃದ್ದಿಪಡಿಸುವ ಕೈಂಕರ್ಯದಲ್ಲಿ
ತೊಡಗಬೇಕಾಗಿದೆ.

-ನಾಡೋಜ ಡಾ| ಕಮಲಾ ಹಂಪನಾ,
ಹಿರಿಯ ಲೇಖಕರು ಹಾಗೂ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next