Advertisement

ಕಾಮಗಾರಿ ನಿರ್ವಹಿಸದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ

03:45 AM Jul 02, 2017 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ಸಾಮಾನ್ಯ ಸಭೆ ಜೂ.30ರಂದು  ಪ.ಪಂ. ಅಧ್ಯಕ್ಷೆ ರತ್ನಾ ನಾಗರಾಜ್‌ ಗಾಣಿಗ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಾರಾಹಿ ನೀರನ್ನು  ಪ.ಪಂ.ವ್ಯಾಪ್ತಿಗೆ ಕುಡಿಯಲು ಬಳಸಿಕೊಳ್ಳುವ ಕುರಿತು, ಕಸ ವಿಲೇವಾರಿಯ ಬಗ್ಗೆ  ಚರ್ಚೆ ನಡೆಯಿತು ಮತ್ತು ಅಸಮರ್ಪಕ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನೋರ್ವನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹ ಕೇಳಿ ಬಂತು. ಸಭೆಯಲ್ಲಿ ಯಾವುದೇ ಗೌಜಿ-ಗಲಾಟೆಗಳಿಲ್ಲದೆ ಅಭಿವೃದ್ಧಿ ಪರ ಚರ್ಚೆ ನಡೆದಿದ್ದು ವಿಶೇಷವಾಗಿತ್ತು.

Advertisement

ಕಸ ವಿಲೇವಾರಿ ಕುರಿತು ಚರ್ಚೆ
ಪ.ಪಂ. ವ್ಯಾಪ್ತಿಯ ಅತೀ ದೊಡ್ಡ ಸಮಸ್ಯೆಯಾದ ಕಸ ವಿಲೇವಾರಿಯ ಕುರಿತು ಒಂದಷ್ಟು ಚರ್ಚೆ ನಡೆಯತು. ಮನೆಯಿಂದ ಹಸಿಕಸ, ಒಣಕಸವನ್ನು ಒಟ್ಟಾಗಿ  ನೀಡಿದರೆ ಪೌರಕಾರ್ಮಿಕರು ಸ್ವೀಕರಿಸುತ್ತಿಲ್ಲ ಎನ್ನುವ ದೂರುಗಳು ಬಂದಿದೆ ಎಂದು ನಾಮ ನಿರ್ದೇಶಿತ ಸದಸ್ಯೆ ಅಚ್ಯುತ್‌ ಪೂಜಾರಿ, ಸದಸ್ಯೆ ಸಾಧು ಪಿ. ಸಭೆಯ ಗಮನಕ್ಕೆ ತಂದರು. ಈ ಕುರಿತು  ಮಾತನಾಡಿದ ಸದಸ್ಯ ರಾಜು ಪೂಜಾರಿ, ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ದಿಢೀರ್‌ ಆಗಿ ಕಸವಿಲೇವಾರಿ ಮಾಡುವ ಹಳೆಕೋಟೆ ಮೈದಾನಕ್ಕೆ ಭೇಟಿ ನೀಡಿದ್ದು, ತೆರದ ಸ್ಥಳದಲ್ಲಿ ಕಸ ವಿಲೇವಾರಿ ಮಾಡದಂತೆ ಸೂಚಿಸಿದ್ದಾರೆ ಹಾಗೂ ಪ್ರಸ್ತುತ ಇರುವ ಕಸವನ್ನು ತೆರವುಗೊಳಿಸುವಂತೆ ಹೇಳಿದ್ದಾರೆ.ಒಣಕಸವನ್ನು ವಾರಕ್ಕೊಮ್ಮೆ ಹಾಗೂ ಹಸಿ ಕಸವನ್ನು ಪ್ರತಿದಿನ ಪಡೆದು ಅನಂತರ ಬೇರ್ಪಡಿಸಿ ಬೇರೆ ಕಡೆಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದ್ದಾರೆ. 

ಆದರೆ ಇದನ್ನು ತಪ್ಪಾಗಿ ಅರ್ಥೈಸಿದ    ಪೌರಕಾರ್ಮಿಕರು ಈ ರೀತಿ ಮಾಡಿದ್ದಾರೆ ಎಂದರು. ಕಸವಿಲೇವಾರಿಗೆ ಪ್ರತಿ ವಾರ್ಡ್‌ಗಳಲ್ಲಿ  ಕಾಂಪೋಸ್ಟ್‌  ಗುಂಡಿ ತಯಾರಿಯ ಕುರಿತು ಚರ್ಚೆ  ನಡೆಯಿತು. ಪ್ರಾಯೋಗಿಕವಾಗಿ ಕಾರ್ಕಡ ವಾರ್ಡ್‌ನಲ್ಲಿ ಇದನ್ನು ಅನುಷ್ಠಾನ್ಕಕೆ ತರುವ ಎಂದು ರಾಜು ಪೂಜಾರಿ, ಅಚ್ಯುತ್‌ ಪೂಜಾರಿ ಹಾಗೂ ಸಂಜೀವ ದೇವಾಡಿಗ ಸಹಮತ ಸೂಚಿಸಿದರು.

ಇದೀಗ ಸರಕಾರದ ವಶದಲ್ಲಿರುವ ಹಳೇ ಗ್ಯಾಸ್‌ ಗೋದಾಮುವನ್ನು ಕಸ ಬೇರ್ಪಡಿಸಲು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ನೀಡಿದ ಸಲಹೆಗೆ ಆ ವಾರ್ಡ್‌ ಸದಸ್ಯೆ ವಸುಮತಿ ನಾೖರಿ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭ ಸದಸ್ಯರ ಗಮನಕ್ಕೆ ತಾರದಿರುವ ಕುರಿತು ಆಕ್ಷೇಪ  ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ದಿಢೀರ್‌ ಭೇಟಿ ನೀಡಿದ್ದು,ಯಾರ ಗಮನಕ್ಕೂ ಬಂದಿಲ್ಲ ಎಂದು ಮುಖ್ಯಾಧಿಕಾರಿಗಳು ಸ್ಪಷ್ಟನೆ ನೀಡಿದರು.

ವಾರಾಹಿ ನೀರನ್ನು 
ಕುಡಿಯಲು ಬಳಸಿಕೊಳ್ಳಲು ಸಲಹೆ

ವಾರಾಹಿ ಕಾಲುವೆಯ ನೀರನ್ನು ಉಡುಪಿ ನಗರಸಭೆಯವರು ಕುಡಿಯಲು  ಬಳಸಿಕೊಳ್ಳುವ ಚಿಂತನೆ ನಡೆಸುತ್ತಿದ್ದು, ಸಾಲಿಗ್ರಾಮ ಪ.ಪಂ. ಕೂಡ ಇದೇ ಮಾದರಿಯಲ್ಲಿ ಬಳಸಿಕೊಳ್ಳಲು ಸಾಧ್ಯವಿದೆಯೇ ಎನ್ನುವುದನ್ನು  ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮಕೈಗೊಳ್ಳಬೇಕಿದೆ ಎಂದು ಸದಸ್ಯ ರಾಜು ಪೂಜಾರಿ ಸಲಹೆ ನೀಡಿದರು. ಈ  ಕುರಿತು ಸಾಧ್ಯಾಸಾಧ್ಯತೆಯನ್ನು  ಪರಿಶೀಲಿಸುವಂತೆ ಸಲಹೆ ಕೇಳಿ ಬಂತು.

Advertisement

ಉಪಾಧ್ಯಕ್ಷ ಉದಯ ಪೂಜಾರಿ, ಮುಖ್ಯಾಧಿಕಾರಿ ಶ್ರೀಪಾದ್‌ ಪುರೋಹಿತ್‌ ಮುಂತಾದವರು ಉಪಸ್ಥಿತರಿದ್ದರು.

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ
 ಪ.ಪಂ. ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಸುರೇಶ ಶೆಟ್ಟಿ ಎನ್ನುವ ಗುತ್ತಿಗೆದಾರ ಕೆಲವೊಂದು ಕಾಮಗಾರಿಗಳನ್ನು ಅಸಮರ್ಪಕವಾಗಿ ನಿರ್ವಹಿಸಿದ್ದು,  ಇದರಿಂದ ಸರಕಾರದ ಅನುದಾನ ದುರ್ಬಳಕೆಯಾಗಿದೆ ಹಾಗೂ ಇದನ್ನು ಪ್ರಶ್ನಿಸಿದ ಸದಸ್ಯರಿಗೂ ಈತ ಅಗೌರವ ತೋರಿದ್ದಾನೆ. ಆದ್ದರಿಂದ ಈತನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸದಸ್ಯರಾದ ಸಂಜೀವ ದೇವಾಡಿಗ ಆಗ್ರಹಿಸಿದರು. ಈ ಕುರಿತು ಉಪಾಧ್ಯಕ್ಷ  ಉದಯ ಪೂಜಾರಿ ಸೇರಿದಂತೆ ಹಲವು ಸದಸ್ಯರು ಒಮ್ಮತ ಸೂಚಿಸಿದರು. ಈ ವಿಚಾರದಲ್ಲಿ ಕಾನೂನಿನ ಪ್ರಕಾರ ಪರಿಶೀಲಿಸಿ, ಕ್ರಮಕೈಗೊಳ್ಳುವ ಭರವಸೆಯನ್ನು ಮುಖ್ಯಾಧಿಕಾರಿ ಶ್ರೀಪಾದ್‌ ಪುರೋಹಿತ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next