Advertisement

ಮಹಾನ್‌ ಗ್ರಂಥಗಳ ಜೀವನ ಮೌಲ್ಯ ಅಳವಡಿಸಿಕೊಳ್ಳಿ

04:25 PM Aug 06, 2018 | Team Udayavani |

ಶಿವಮೊಗ್ಗ: ಮಹಾನ್‌ ಗ್ರಂಥಗಳಲ್ಲಿರುವ ಜೀವನ ಮೌಲ್ಯಗಳನ್ನು ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಂಡು ಪಾಲಿಸಬೇಕು. ಸಾರ್ವಕಾಲಿಕ ಮೌಲ್ಯಗಳಾದ ಸತ್ಯ, ಸದಾಚಾರ, ಪ್ರೇಮ, ಶಾಂತಿ,  ಅಹಿಂಸೆಯನ್ನು ಆಚರಣೆಗೆ ತರಬೇಕು ಎಂದು 5ನೇ ಶಿವಮೊಗ್ಗ ಮಕ್ಕಳ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ಆರ್‌. ಅನುಘಾ ತಿಳಿಸಿದರು.

Advertisement

 ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಿಕ್ಷಣ ಕಲಿಸುವಿಕೆ ಜತೆಯಲ್ಲಿ ಪ್ರಸ್ತುತ ಔದ್ಯೋಗಿಕ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯ ಬೆಳೆಸುವ ಶಿಕ್ಷಣ ಅಗತ್ಯ ಇದೆ. ವೃತ್ತಿ ಜೀವನದಲ್ಲಿ ಎದುರಿಸುವ ಸವಾಲುಗಳ ಬಗ್ಗೆ ತರಬೇತಿ ನೀಡುವ ವ್ಯವಸ್ಥೆ ಅವಶ್ಯವಿದೆ. ಜೀವನ ರೂಪಿಸುವ ಹಾಗೂ ಆಧುನಿಕ ಜಗತ್ತಿಗೆ ಪೂರಕ ಆಗಿರುವ ಶಿಕ್ಷಣ ಪದ್ಧತಿ ರೂಪಿಸಬೇಕಿದೆ ಎಂದರು.
 
ವಿದ್ಯಾರ್ಥಿಗಳು ಕೇವಲ ಪಠ್ಯ, ಅಂಕಗಳಿಕೆಗೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಸಂಗೀತ, ಸಾಹಿತ್ಯ, ಭರತನಾಟ್ಯ, ಕಥೆ, ಕವನ ಬರೆಯುವುದು ಸೇರಿ ಹವ್ಯಾಸ ಬೆಳೆಸಿಕೊಳ್ಳಬೇಕು. ಆಸಕ್ತ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಸಾರ್ವಜನಿಕ ಅಭಿಪ್ರಾಯ ವ್ಯಕ್ತಗೊಳಿಸುವ ಸಮಸ್ಯೆಗಳ ಬಗ್ಗೆ
ಚರ್ಚಿಸುವ ಪ್ರತಿಭೆ ಪ್ರದರ್ಶಿಸಲು ಮಕ್ಕಳ ಸಾಹಿತ್ಯ ಸಮ್ಮೇಳನ ಉತ್ತಮ ವೇದಿಕೆಯಾಗಿದೆ. ಮಕ್ಕಳ ಸಾಹಿತ್ಯ
ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಸ್ವತ್ಛತೆ ಇದ್ದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸ್ವತ್ಛ ಪರಿಸರ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಉಸಿರಾಗಬೇಕು. ಪರಿಸರ ಕಾಪಾಡಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಪ್ಲಾಸ್ಟಿಕ್‌ ಕಡ್ಡಾಯ ಬಳಕೆ ಬಿಡಬೇಕು. ಬಟ್ಟೆ ಚೀಲ ಬಳಕೆ ಮಾಡುವ ಮೂಲಕ ಪರಿಸರದ ಮೇಲಾಗುತ್ತಿರುವ ಹಾನಿ ತಡೆಗಟ್ಟಬೇಕು ಎಂದು ತಿಳಿಸಿದರು.

 ಮಕ್ಕಳ ಸಾಹಿತಿ ಮಾರ್ಪಳ್ಳಿ ಆರ್‌. ಮಂಜುನಾಥ್‌ ಮಾತನಾಡಿ, ಮಕ್ಕಳ ಬುದ್ಧಿಶಕ್ತಿಯ ಮೇಲಾಗುತ್ತಿರುವ ಮಾನಸಿಕ ದಾಳಿಗಳ ಕುರಿತು ಚರ್ಚೆ ನಡೆಸಬೇಕಿದೆ. ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಬ್ಲೂವೇಲ್‌ ಗೇಮ್‌, ಕಾಲುಸಂಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕಿದೆ. 

ಮಕ್ಕಳಿಗೆ ವಾಸ್ತವಿಕ ಜಗತ್ತಿನಲ್ಲಿ ಆಗು ಹೋಗುತ್ತಿರುವ ನಿಜ ಚಿತ್ರಣದ ಬಗ್ಗೆ ಅರಿವು ಮೂಡಿಸುವ ಕೆಲಸ ಪಾಲಕರು ಹಾಗೂ ಗುರುಗಳಿಂದ ಆಗಬೇಕು. ವೈದ್ಯ, ಎಂಜಿನಿಯರ್‌ ಶಿಕ್ಷಣ ಓದುವಂತೆ ಮಕ್ಕಳ ಮೇಲೆ ಒತ್ತಡ ಹಾಕದೆ ಆಸಕ್ತ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವಂತೆ ಪಾಲಕರು ಪ್ರೋತ್ಸಾಹಿಸಬೇಕು. ಪೂರಕ ವಾತಾವರಣ, ಅಭಿರುಚಿ ಬೆಳೆಸಬೇಕು ಎಂದರು.

Advertisement

 ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ರಮ್ಯಾ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ. ಶಂಕರಪ್ಪ, ತಾಲೂಕು ಕಸಾಪ ಅಧ್ಯಕ್ಷ ಜಿ.ಪಿ. ಸಂಪತ್‌ಕುಮಾರ್‌, ಬಿಇಒ ಎಸ್‌. ಗೀತಾ, ಸಹ್ಯಾದ್ರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಲೋಕೇಶ್ವರಪ್ಪ, ಎಂ.ಎನ್‌. ಸುಂದರ್‌ರಾಜ್‌, ಚನ್ನಬಸಪ್ಪ ನ್ಯಾಮತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next