ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ಬಳಕೆದಾರರ ಅಭಿವೃದ್ಧಿ ಶುಲ್ಕ (ಯುಡಿಎಫ್)ವನ್ನು ಏರಿಸುವ ಬಗ್ಗೆ ಅದಾನಿ ಗ್ರೂಪ್, ಏರ್‌ಪೋರ್ಟ್ ಎಕನಾಮಿಕ್ ರೆಗ್ಯುಲೇಟರಿ ಅಥಾರಿಟಿ (ಎಇಆರ್‌ಎ)ಗೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರಸ್ತುತ ದೇಶೀಯ ಪ್ರಯಾಣಕ್ಕೆ 150 ರೂ. ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 825 ರೂ. ಯುಡಿಎಫ್ ಇದೆ. 2026ರ ಮಾರ್ಚ್ 31ರ ವರೆಗೆ ಯುಡಿಎಫ್ ಅನ್ನು ಹೆಚ್ಚಿಸಲು ಅದಾನಿ ಸಂಸ್ಥೆ ಉದ್ದೇಶಿಸಿದೆ.
ಪ್ರಸ್ತಾವನೆಯಂತೆ ಅಕ್ಟೋಬರ್‌ನಿಂದ ನಿರ್ಗಮನ ಪ್ರಯಾಣಿಕರಿಗೆ 250 ರೂ.ಗೆ ಏರಿಕೆಯಾಗಲಿದ್ದು, 2024ರ ಎಪ್ರಿಲ್ 1ರಿಂದ 725 ರೂ.ಗಳಿಗೆ ಏರಿಸಲು ಪ್ರಸ್ತಾವಿಸಲಾಗಿದೆ. ದೇಶೀಯವಾಗಿ ಆಗಮಿಸುವ ಪ್ರಯಾಣಿಕರೂ ಅಷ್ಟೇ ಮೊತ್ತವನ್ನು ಪಾವತಿಸಬೇಕಿದೆ.
ಈ ಪ್ರಸ್ತಾವನೆಗೆ ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗಿದ್ದು, ಪ್ರಧಾನಮಂತ್ರಿ ಕಚೇರಿ, ಸಚಿವೆೆ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ಮೊದಲಾದವರಿಗೆ ಟ್ವೀಟ್ ಮಾಡಿ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿದ್ದಾರೆ.
ಶೇ. 30ರಷ್ಟು ದರ ಹೆಚ್ಚಿಸುವ ಮೂಲಕ ಪ್ರಯಾಣಿಕರ ಮೇಲೆ ವಿಮಾನ ನಿಲ್ದಾಣ ಸಂಸ್ಥೆ ಗದಾಪ್ರಹಾರ ನಡೆಸುತ್ತಿದೆ ಎಂದು ಬಳಕೆದಾರರಾದ ಮೋಹನದಾಸ ಕಾಮತ್ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಜಾರಿಯಲ್ಲಿರುವ ದರಪಟ್ಟಿ ಹಳೆಯದು. 2010ರಲ್ಲಿ ಕೊನೇ ಬಾರಿಗೆ ಯುಡಿಎಫ್ ದರ ಪರಿಷ್ಕರಣೆಯಾಗಿತ್ತು ಎಂದು ಆಗಸ್ಟ್ 12ರಂದು ಅದಾನಿ ಗ್ರೂಪ್ ಎಇಆರ್‌ಎ ಕಳುಹಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿದೆ.