Advertisement

ಉಡುಪಿ ಪರ್ಯಾಯ ಉತ್ಸವಕ್ಕೆ ಸಿದ್ಧತೆ

10:17 PM Jan 02, 2020 | Sriram |

ಶ್ರೀಕೃಷ್ಣಮಠದಲ್ಲಿ ಮಧ್ವಾಚಾರ್ಯರು ಹಾಕಿಕೊಟ್ಟ ಸಂಪ್ರದಾಯದಂತೆ ಎರಡು ತಿಂಗಳಿಗೆ ಒಮ್ಮೆಯಂತೆ ಎಂಟು ಯತಿಗಳು ಶ್ರೀಕೃಷ್ಣನನ್ನು ಪೂಜಿಸುತ್ತಿದ್ದರು. ಇದಾದ ಸುಮಾರು ಎರಡು ಶತಮಾನಗಳ ಬಳಿಕ ಶ್ರೀವಾದಿರಾಜಸ್ವಾಮಿಗಳು ಎರಡು ವರ್ಷಗಳಿಗೊಮ್ಮೆ ಪೂಜಿಸುವ ಕ್ರಮವನ್ನು ಆರಂಭಿಸಿದರು. ಎರಡು ವರ್ಷಗಳ ಪರ್ಯಾಯ ಆರಂಭವಾದುದು 1522ರಲ್ಲಿ. ಈಗ 2020ರ ಜ. 18ರಂದು ಪರ್ಯಾಯ ಉತ್ಸವದ ಸಡಗರ ಸಂಪನ್ನಗೊಳ್ಳಲಿದೆ.

Advertisement

ಕೃಷ್ಣನಗರಿ ಮತ್ತೂಂದು ಪರ್ಯಾಯ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಈ ಬಾರಿ ಅದಮಾರು ಪರ್ಯಾಯ.

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೂಜಾ ಕೈಂಕರ್ಯವನ್ನು ಕೈಗೊಳ್ಳಲಿರುವ ಅದಮಾರು ಮಠಾಧೀಶರ ಪರ್ಯಾಯಕ್ಕೆ ಇನ್ನು ಎರಡು ವಾರ ಬಾಕಿ ಇದೆ.

ಪರ್ಯಾಯ ಶ್ರೀಗಳ ಪುರಪ್ರವೇಶ
ಜ. 17ರ ರಾತ್ರಿ, ಜ. 18ರಂದು ಪರ್ಯಾಯೋತ್ಸವ ಜರಗಲಿದ್ದು ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಶ್ರೀಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರ ಶಿಷ್ಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿದ್ದು ಜ. 8ರಂದು ಅಪರಾಹ್ನ ಪುರಪ್ರವೇಶ ಮಾಡಲಿದ್ದಾರೆ.

ವಿವಿಧೆಡೆ ಕಮಾನುಗಳನ್ನು ನಿರ್ಮಾಣ
ಶ್ರೀಕೃಷ್ಣಸೇವಾ ಬಳಗ ಪರ್ಯಾಯ ಸಿದ್ಧತೆಯಲ್ಲಿ ತೊಡಗಿದೆ. ಪುರಪ್ರವೇಶ ಮತ್ತು ಪರ್ಯಾಯ ಮೆರವಣಿಗೆ ಆಗಮಿಸುವ ನಗರದ ವಿವಿಧೆಡೆ ಕಮಾನುಗಳನ್ನು ನಿರ್ಮಿಸುವ ಕೆಲಸ ಭರದಿಂದ ನಡೆಯುತ್ತಿದೆ. ಪುರಪ್ರವೇಶ ಮತ್ತು ಪರ್ಯಾಯ ಮೆರವಣಿಗೆ ಜೋಡುಕಟ್ಟೆಯಿಂದ ಹಳೆ ಡಯಾನ ವೃತ್ತ, ಕೊಳದ ಪೇಟೆ, ತೆಂಕುಪೇಟೆ ಮಾರ್ಗವಾಗಿ ರಥಬೀದಿಯನ್ನು ಪ್ರವೇಶಿಸಲಿದ್ದು ಇಲ್ಲಿ ಮತ್ತು ಶ್ರೀಕೃಷ್ಣಮಠದ ಪಾರ್ಕಿಂಗ್‌ ಪ್ರದೇಶ ಪ್ರವೇಶಿಸುವ ಕಲ್ಸಂಕ ವೃತ್ತದ ಹೀಗೆ ವಿವಿಧೆಡೆ ಕಮಾನುಗಳನ್ನು ನಿರ್ಮಿಸಲಾಗುತ್ತಿದೆ.

Advertisement

ಸುಣ್ಣಬಣ್ಣ
ಶ್ರೀಅದಮಾರು ಮಠ ಮತ್ತು ಶ್ರೀಕೃಷ್ಣಮಠದಲ್ಲಿ ಸುಣ್ಣಬಣ್ಣ ಕೊಡುವ ಕೆಲಸ ನಡೆಯುತ್ತಿದೆ. ಮೂರು ದಿನಗಳಿಂದ 11 ಕಾರ್ಮಿಕರು ನಿತ್ಯ ಕೆಲಸ ಮಾಡುತ್ತಿದ್ದಾರೆ. ಮಠದ ಗೋಡೆಗಳನ್ನು ತೊಳೆದು ಬಣ್ಣ ಕೊಡಲಾಗುತ್ತಿದ್ದು ಹೊಸ ಲುಕ್‌ ಬಂದಿದೆ. ಶ್ರೀಕೃಷ್ಣಮಠದೊಳಗೆ ಸ್ವರ್ಣ ಗೋಪುರವನ್ನು ವೀಕ್ಷಿಸಲು ಅನುವಾಗುವಂತೆ ಲಿಫ್ಟ್ ಅಳವಡಿಕೆ ಕೆಲಸ ನಡೆಯುತ್ತಿರುವುದರಿಂದ ಹೊರಗಿನ ಭಾಗದಲ್ಲಿ ಮಾತ್ರ ಬಣ್ಣ ಕೊಡಲಾಗುತ್ತಿದೆ. ಈಗ ಕನಕಗೋಪುರ ಹೊಸ ಬಣ್ಣದಿಂದ ಕಂಗೊಳಿಸುತ್ತಿದೆ. ಕನಕಗೋಪುರವು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರ ಹಿಂದಿನ ಪರ್ಯಾಯ ಅವಧಿಯಲ್ಲಿ (2004 -06) ನಿರ್ಮಿಸಿದ್ದನ್ನು ನೆನಪಿಸಬಹುದಾಗಿದೆ. ವಾಹನ ಪಾರ್ಕಿಂಗ್‌ ಪ್ರದೇಶದ ಸ್ವಾಗತ ಗೋಪುರಕ್ಕೆ ಬಣ್ಣ ಕೊಡಲು ಆರಂಭಿಸಿದ್ದಾರೆ.

ಅದಮಾರು ಮಠದ ಒಳಗೆ ಒಂದು ಭಾಗದ ಗೋಡೆಗೆ ಸುಣ್ಣ ಕೊಟ್ಟಿದ್ದರೆ ಇನ್ನು ಮಣ್ಣಿನ ಬಣ್ಣದ ಪೇಂಟ್‌ ಕೊಡಲಾಗಿದೆ. ಪರ್ಯಾಯ ಮೆರವಣಿಗೆ ಆರಂಭವಾಗುವ ಜೋಡುಕಟ್ಟೆಯ ಗೋಪುರಕ್ಕೆ ಪೇಂಟ್‌ ಕೊಡಲಾಗಿದೆ. ಮಠದಲ್ಲಿರುವ ಮರಮಟ್ಟುಗಳಿಗೆ ಗೋಪಾಲ್‌ ವಾರ್ನಿಶ್‌ ಕೊಡಲಾಗಿದೆ. ಪೇಂಟ್‌ನ್ನು ತರಿಸಿ ಕಾರ್ಮಿಕರಿಂದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಶೌಚಾಲಯ-ಸ್ನಾನಗೃಹ ಸಂಕೀರ್ಣ
ಭಕ್ತರು ಅದಮಾರು ಮಠಕ್ಕೆ ಹೆಚ್ಚಿಗೆ ಬರುವ ಕಾರಣ ಅದಮಾರು ಮಠದ ಆವರಣದಲ್ಲಿ ಹೊಸ ಶೌಚಾಲಯ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಒಟ್ಟು ಒಂಭತ್ತು ಶೌಚಾಲಯ, ನಾಲ್ಕು ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಮೂರು ಪಾಶ್ಚಾತ್ಯ, ಆರು ಭಾರತೀಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರ ಪಿಟ್‌ಗಳನ್ನು ನಗರಸಭೆಯ ಒಳಚರಂಡಿಗೆ (ಯುಜಿಡಿ) ಜೋಡಿಸಲಾಗಿದೆ.

ಬಣ್ಣ ಅಂದಾಜಿಲ್ಲ
ಅದಮಾರು ಮಠದಲ್ಲಿ ಹೊಸ ಬಣ್ಣ ಕೊಡುವ ಎಲ್ಲ ಕೆಲಸಗಳು ಮುಗಿದಿವೆ. ಶ್ರೀಕೃಷ್ಣಮಠದಲ್ಲಿ ಸುವರ್ಣ ಗೋಪುರ ನೋಡಲು ಲಿಫ್ಟ್ ಕೆಲಸ ನಡೆಯುತ್ತಿರುವುದರಿಂದ ಅವರ ಕೆಲಸಕ್ಕೆ ತೊಂದರೆಯಾಗಬಾರದೆಂದು ಕೃಷ್ಣಮಠದೊಳಗೆ ಬಣ್ಣವನ್ನು ಕೊಟ್ಟಿಲ್ಲ. ಇದುವರೆಗೆ 600 ಲೀ. ಪೇಂಟ್‌ ತರಿಸಲಾಗಿದೆ. ಈಗ ನಡೆಯುತ್ತಿರುವ ಕೆಲಸಕ್ಕೆ ಇನ್ನು 40 ಲೀ. ಪೇಂಟ್‌ ಬೇಕು. ಮಿಕ್ಕುಳಿದಂತೆ ಕೃಷ್ಣಮಠದೊಳಗೆ ಎಷ್ಟು ಬೇಕಾಗಬಹುದು ಎಂದು ಅಂದಾಜಿಸಿಲ್ಲ.
– ರಾಘವೇಂದ್ರ ರಾವ್‌,
ಅದಮಾರು ಮಠದ ಮೆನೇಜರ್‌.

ನೋಡಲು ಕಾತರ
ಪರ್ಯಾಯೋತ್ಸವಕ್ಕೆ ಶ್ರೀಅದಮಾರು ಮಠ ಸುಣ್ಣ ಬಣ್ಣದೊಂದಿಗೆ ಕಂಗೊಳಿಸುತ್ತಿದೆ. ಈಗಾಗಲೇ ರಥಬೀದಿಗಳಲ್ಲಿ ಜನರು ಸೇರುತ್ತಿದ್ದಾರೆ. ಇನ್ನು ಪ್ರತಿದಿನವೂ ಹಬ್ಬದ ವಾತಾವರಣವಿದ್ದು, ವ್ಯಾಪಾರವೂ ಬಿರುಸಾಗಿರುತ್ತದೆ. ನಾವೆಲ್ಲ ಪರ್ಯಾಯೋತ್ಸವವನ್ನು ನೋಡಲು ಕಾತರರಾಗಿದ್ದಾರೆ.
– ವಿವೇಕ, ತರಕಾರಿ ವ್ಯಾಪಾರಸ್ಥರು,
ರಥಬೀದಿ, ಉಡುಪಿ

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next