Advertisement

ಮಾರ್ಗಸೂಚಿ ಫ‌ಲಕಗಳ ತುಂಬ ಜಾಹೀರಾತು ಹಾವಳಿ

11:11 PM Jan 08, 2020 | mahesh |

ಉಡುಪಿ: ನಗರಕ್ಕೆ ಮೊದಲ ಬಾರಿಗೆ ಭೇಟಿ ನೀಡುವ ಜನರು ಕಾಲೋನಿಗಳಿಗೆ ಬಂದು ನಿಂತರೆ ಹೆಸರು ತಿಳಿಯದೆ ತಬ್ಬಿಬ್ಟಾಗುತ್ತಾರೆ. ಕಾರಣ ಅಲ್ಲಿರುವ ಮಾರ್ಗಸೂಚಿ ಫ‌ಲಕಗಳಲ್ಲಿ ರಾರಾಜಿಸುವ ಜಾಹೀರಾತುಗಳು. ಈ ಜಾಹೀರಾತುಗಳು ಹೆಸರುಗಳನ್ನು ಮುಚ್ಚಿದ್ದು ಜನರ ಗೊಂದಲಕ್ಕೆ ಕಾರಣವಾಗುತ್ತಿವೆ.

Advertisement

ಸ್ಥಳೀಯಾಡಳಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹೆಸರು ಚಿರ ಸ್ಥಾಯಿ ಮಾಡುವ ಉದ್ದೇಶದಿಂದ ಕಾಲೋನಿಗಳಿಗೆ ಚಿತ್ತರಂಜನ್‌ ಸರ್ಕಲ್‌, ಲಾಲಾಲಜಪತ್‌ ರೈ, ಕನಕದಾಸ, ಕಟ್ಟೆ ಆಚಾರ್ಯ, ಜಾರ್ಜ್‌ ಫೆರ್ನಾಂಡಿಸ್‌, ಶ್ಯಾಮ್‌ ಪ್ರಸಾದ್‌ ಮುಖರ್ಜಿ, ಕೆ.ಎಂ. ಮಾರ್ಗ, ಕವಿ ಮುದ್ದಣ್ಣ ಮಾರ್ಗ, ಡಯಾನ ಸರ್ಕಕಲ್‌, ಬ್ರಹ್ಮಗಿರಿ ಸರ್ಕಲ್‌, ಬನ್ನಂಜೆ ಮಾರ್ಗ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಧಕರ ಹಾಗೂ ಪ್ರದೇಶದ ಹೆಸರುಗಳನ್ನು ನಾಮಕರಣ ಮಾಡಿ ಮಾರ್ಗಸೂಚಿ ಫ‌ಲಕ ಆಳವಡಿಸಲಾಗಿದೆ. ಆದರೆ ಆ ಮಾರ್ಗಸೂಚಿ ಫ‌ಲಕಗಳು ಸಂಪೂರ್ಣವಾಗಿ ಜಾಹೀರಾತು ಫ‌ಲಕಗಳಾಗಿ ಪರಿವರ್ತನೆಯಾಗಿವೆ. ಅನಧಿ ಕೃತವಾಗಿ ಸಿನೆಮಾ ಪೋಸ್ಟರ್‌ಗಳು, ವಸತಿ ನಿಲಯ, ಶಾಲಾ ಪ್ರವೇಶ, ತರಬೇತಿ ಕೇಂದ್ರಗಳ ಜಾಹೀರಾತುಗಳು ಹಾಗೂ ಸಂಘಟನೆಗಳು ನಡೆಸುವ ಮುಷ್ಕರ, ಹೋರಾಟದ ಭಿತ್ತಿಪತ್ರಗಳನ್ನು ಅಂಟಿಸುತ್ತಿದ್ದಾರೆ. ಅಂತಹ ಅನಧಿಕೃತ ಜಾಹೀರಾತುದಾರರ ವಿರುದ್ಧ ನಗರ ಸಭೆ ಕ್ರಮ ತೆಗೆದುಕೊಳ್ಳದ ಕಾರಣ ಸಾರ್ವಜನಿಕರು ನಾಮಫ‌ಲಗಳಿಗೆ ಬೇಕಾಬಿಟ್ಟಿಯಾಗಿ ಭಿತ್ತಿ ಪತ್ರ ಅಂಟಿಸುತ್ತಿದ್ದಾರೆ.

ಕಾನೂನು ಉಲ್ಲಂಘನೆ
ನಗರಸಭೆ ಕಾಯ್ದೆ ಅನ್ವಯ ಸ್ಥಳೀಯ ಸಂಸ್ಥೆಯಿಂದ ಅಳವಡಿಸಿರುವ ನಾಮಫ‌ಲಕ, ಮಾರ್ಗಸೂಚಿ ಫ‌ಲಕ ಇತ್ಯಾದಿಗೆ ಯಾವುದೇ ಜಾಹೀರಾತು, ಕರಪತ್ರ ಅಂಟಿಸುವಂತಿಲ್ಲ. ಈ ಬಗ್ಗೆ ಕಾನೂನಿನಡಿ ಸ್ಪಷ್ಟಪಡಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸುವ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ಇದೆ. ಸರಕಾರಿ ಕಚೇರಿಗಳ ಕಾಂಪೌಂಡ್‌ ಗೋಡೆಗೂ ಭಿತ್ತಿಪತ್ರ ಇತ್ಯಾದಿ ಅಂಟಿಸುವಂತಿಲ್ಲ. ಆದರೆ ಇದಕ್ಕೆ ಕಡಿವಾಣ ಬಿದ್ದಿಲ್ಲ.

ದಾರಿ ಯಾವುದು?
ನಗರದಲ್ಲಿ ನಿತ್ಯ ಸಾವಿರಾರು ಜನರು ಬೇರೆ ಬೇರೆ ಊರುಗಳಿಂದ ಬರುತ್ತಾರೆ. ರಸ್ತೆಗಳ ಹೆಸರು ಗೊತ್ತಿಲ್ಲ ದವರು, ಆ ರಸ್ತೆ ಎಲ್ಲಿಗೆ ಹೋಗುತ್ತದೆ ಎಂಬುದರ ಅರಿವು ಇಲ್ಲದವರು ದಾರಿ ಯಾವುದು ಎಂದು ಕೇಳಬೇಕಿದೆ. ಹೆಸರು ತಿಳಿ ಯಲು ಇನ್ನೊಬ್ಬರನ್ನು ಕೇಳಿಕೊಂಡು ಹೋಗಬೇಕಾದ ಅನಿವಾರ್ಯವಿದೆ.

ಜಾಹೀರಾತು ನಾಮಫ‌ಲಕ!
ಬಹುತೇಕ ನಾಮಫ‌ಲಕಗಳು ಕೇವಲ ಜಾಹೀರಾತು ಅಂಟಿಸಲಿಕ್ಕಾಗಿಯೇ ಅಳವಡಿಸಲಾಗಿದೆಯೇ ಎನ್ನುವ ಅನುಮಾನ ಮೂಡುವಂತಾಗಿದೆ. ಅಳಿಸಿ ಹೋದ ಹೆಸರುಗಳನ್ನು ಮತ್ತೆ ಬರೆಸುವಂತಹ ಕೆಲಸವನ್ನು ಕೂಡಾ ನಗರಸಭೆ ಮಾಡದೇ ಇತಿಹಾಸ ಪುರುಷರ ಇಲ್ಲವೇ ಸಾಧಕರ ಹೆಸರುಗಳನ್ನು ಸ್ಮರಿಸುವ ಬದಲಾಗಿ ಕಣ್ಮರೆಯಾಗುವಂತಾಗಿದೆ.
-ವಿದ್ಯಾ, ಉಡುಪಿ ನಿವಾಸಿ.

Advertisement

ಶೀಘ್ರ ಬದಲಾವಣೆ
ಹಾಳಾಗಿರುವ ಮಾರ್ಗಸೂಚಿ ಫ‌ಲಕ ಶೀಘ್ರದಲ್ಲಿ ದುರಸ್ತಿಯಾಗಲಿದೆ. ಮುರಿದ ನಾಮಫ‌ಲಗಳನ್ನು ಬದಲಾಯಿಸಲಾಗುವುದು. ಬಣ್ಣ ಮಾಸಿದ ಫ‌ಲಕಗಳಿಗೆ ಬಣ್ಣ ಹಾಕಿ ಹೆಸರು ಬರೆಸಲಾಗುತ್ತದೆ.
-ಆನಂದ ಕಲ್ಲೋಳಿಕರ್‌, ನಗರಸಭೆ ಪೌರಾಯುಕ್ತ, ಉಡುಪಿ.

  • ತೃಪ್ತಿ ಕುಮ್ರಗೋಡು
Advertisement

Udayavani is now on Telegram. Click here to join our channel and stay updated with the latest news.

Next