Advertisement

ಬಂಗಾಲಿ ನಟಿಯ ಶಂಕಾಸ್ಪದ ಸಾವು; ಫ್ಲ್ಯಾಟಿನಲ್ಲಿ ಅರೆ ಕೊಳೆತ ಶವ ಪತ್ತೆ

03:51 PM Feb 08, 2017 | Team Udayavani |

ಕೋಲ್ಕತ : ಬಂಗಾಲಿ ಸಿನೆಮಾ ರಂಗದ ಅಷ್ಟೇನೂ ಪ್ರಸಿದ್ಧವಲ್ಲದ ನಟಿ ಬಿತಾಸ್ತಾ ಶಾಲಿನಿ ಸಾಹಾ ಎಂಬಾಕೆಯ ಅರೆ ಕೊಳೆತ ಶವವು ದಕ್ಷಿಣ ಕೋಲ್ಕತಾದ ಕಸಬಾ ಪ್ರದೇಶದಲ್ಲಿರುವ ಅವರ ಫ್ಲ್ಯಾಟಿನಲ್ಲಿ ಪತ್ತೆಯಾಗಿದೆ.

Advertisement

ಬಿತಾಸ್ತಾ ಅವರ ತಾಯಿ ಮಗಳನ್ನು ಫೋನ್‌ ಮೂಲಕ ಸಂಪರ್ಕಿಸಲು ಕಳೆದ ಎರಡು ದಿನಗಳಿಂದ ನಿರಂತರವಾಗಿ ಕರೆ ಮಾಡುತ್ತಿದ್ದರು. ಆಕೆಯ ಯಾವುದೇ ಕರೆಗೆ ಮಗಳಿಂದ ಉತ್ತರ ಬಾರದಿದ್ದಾಗ ಆಕೆ ಖುದ್ದು ಮಗಳ ಫ್ಲ್ಯಾಟಿಗೆ ಬಂದು ಬಾಗಿಲು ತಟ್ಟಿದರೂ ಒಳಗಿಂದ ಯಾವುದೇ ಉತ್ತರ ಬರಲಿಲ್ಲ. ಆಗ ನೆರೆಮನೆಯವರ ಜತೆಗೂಡಿ ಬಿತಾಸ್ತಾಳ ತಾಯಿ ಪೊಲೀಸರಿಗೆ ದೂರು ನೀಡಿದರು.

ಪೊಲೀಸರು ಬಂದು ಮನೆ ಬಾಗಿಲನ್ನು ಒಡೆದು ಒಳಪ್ರವೇಶಿಸಿದಾಗ ಬಿತಾಸ್ತಾಳ ಶವ ಅರೆ ಕೊಳೆತ ಸ್ಥಿತಿಯಲ್ಲಿ ಸೀಲಿಂಗ್‌ ಫ್ಯಾನಿನಿಂದ ನೇತಾಡುತ್ತಿದ್ದುದು ಕಂಡುಬಂತು.

ಬಿತಾಸ್ತಾಳ ಮಣಿಗಂಟಿನ ಮೇಲೆ ಆಳವಾದ ಸೀಳು ಗಾಯವಿತ್ತು. ಆಕೆಯ ದೇಹದ ಮೇಲೆ ಹಲವೆಡೆ ಗಾಯಗಳಿದ್ದವು. ಇದು ಆತ್ಮಹತ್ಯೆಯೇ ಕೊಲೆಯೇ ಎಂಬುದು ತತ್‌ಕ್ಷಣಕ್ಕೆ ಹೇಳುವಂತಿಲ್ಲ ಎಂದು ಪೊಲೀಸರು ಹೇಳಿದರು. 

ಪೊಲೀಸರು ಪ್ರಾಥಮಿಕ ತನಿಖೆಯ ಅಂಗವಾಗಿ ಬಿತಾಸ್ತಾಳ ಫೇಸ್‌ ಬುಕ್‌ ತೆರೆದು ನೋಡಿದಾಗ ಆಕೆ ಕಳೆದ ಕೆಲವು ಸಮಯದಿಂದ ತನಗೆ ಖನ್ನತೆ ಇರುವುದಾಗಿಯೂ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿರುವುದು ಕಂಡುಬಂದಿದೆ. ಆದರೆ ಬಿತಾಸ್ತಾಗೆ ಯಾವ ಕಾರಣಕ್ಕೆ ಬದುಕು ಅಸಹನೀಯವಾಗಿತ್ತು, ಖನ್ನತೆ ಬಾಧಿಸುತ್ತಿತ್ತು ಎಂಬುದು ಗೊತ್ತಾಗಿಲ್ಲ.

Advertisement

“ಪ್ರಾಥಮಿಕ ಸಾಕ್ಷ್ಯಗಳಿಂದ ತೋರಿಬರುವಂತೆ ಬಿತಾಸ್ತಾ ಳದ್ದು ಆತ್ಮಹತ್ಯೆಯ ಪ್ರಕರಣವೆಂದು ಕಂಡುಬರುತ್ತದೆ. ಶವದ ಮರಣೋತ್ತರ ಪರೀಕ್ಷೆಯ ವರದಿ ಬಂದಾಗ ಈ ಪ್ರಕರಣದ ಹಲವು ವಿಷಯಗಳು ತೆರೆದುಕೊಳ್ಳಬಹುದು. ಆದರೂ ನಾವು ಕೇಸು ದಾಖಲಿಸಿಕೊಂಡು ವಿವಿಧ ಕೋನಗಳಿಂದ ಈ ಶಂಕಾಸ್ಪದ ಸಾವಿನ ತನಿಖೆಯನ್ನು ನಡೆಸುತ್ತಿದ್ದೇವೆ; ಇದು ಕೊಲೆಯೋ ಆತ್ಮಹತ್ಯೆಯೋ ಎನ್ನುವುದು ತನಿಖೆ ಪೂರ್ತಿಗೊಂಡಾಗ ಸಾಬೀತಾಗುತ್ತದೆ’ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next