ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ಸರ್ಕಾರದ ನೂತನ ನೀತಿಯಿಂದ ಸಂಕಷ್ಟದಲ್ಲಿರುವ ಜಿಮ್ ಮಾಲೀಕರ ನೆರವಿಗೆ ಧಾವಿಸಿದ್ದಾರೆ. ಅವರ ಪರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾನುವಾರ ಈ ಬಗ್ಗೆ ಟ್ವೀಟ್ ಮಾಡಿರುವ ರಾಕಿ ಭಾಯ್, ಅನ್ನ ಹುಟ್ಟಿಸದ ಸಭೆ, ಸಮಾರಂಭ, ಮೆರವಣೆಗೆಗಳಿಗೆ ಮುಕ್ತ ಅವಕಾಶ ಇದೆ. ಆದರೆ, ಹೊಟ್ಟೆ ಹೊರೆಯಲು ಮಾಡುವ ವೃತ್ತಿಗಳಿಗೆ ಹೊಡೆತ ಬೀಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತ ಆಗುವುದೆಂದು ವಾಹನ ಸಂಚಾರ ನಿಲ್ಲಿಸೋದು ಸರಿಯಾಗುತ್ತದೆಯೇ ? ಎಂದು ಪ್ರಶ್ನಿಸಿರುವ ನಟ, ಕಟ್ಟು ನಿಟ್ಟಿನ ಸಂಚಾರ ಕ್ರಮ ಸಾಕಲ್ಲವೆ ಎಂದು ಕೇಳಿದ್ದಾರೆ.
ಸಾಲ-ಸೋಲ ಮಾಡಿ, ಜಿಮ್ ನಡೆಸುವವರು ಕಷ್ಟಪಡುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಜಿಮ್ ಬಳಸಲು ಅನುಮತಿ ನೀಡಿದರೆ ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು, ಜಿಮ್ ಮಾಲೀಕರು ಬದುಕಿಕೊಳ್ಳುತ್ತಾರಲ್ಲವೇ ? ರೋಗಕ್ಕೆ ಪರಿಹಾರ ಏನೆಂದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ, ಹಸಿವೆಗೆ ಪರಿಹಾರ ಗೊತ್ತಿದೆಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್‍ನಿಂದಾಗಿ ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಬಾರ್, ಪಬ್ ಹಾಗೂ ಜಿಮ್‍ಗಳ ಮೇಲೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದೆ. ಚಿತ್ರಮಂದಿರಗಳಿಗೂ ಶೇಕಡಾ 50 ರಷ್ಟು ಆಸನ ಭರ್ತಿ ನೀಡಿದ್ದ ಆದೇಶವನ್ನು ನಿನ್ನೆಯಷ್ಟೆ ಯಶ್ ಖಂಡಿಸಿದ್ದರು. ಕೂಡಲೇ 100 % ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿದ್ದರು.