Advertisement

ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸುಧಾರಾಣಿ-ಶೃತಿ-ಮಾಳವಿಕಾ

03:39 PM Aug 09, 2021 | Team Udayavani |

ಬೆಂಗಳೂರು: ಕನ್ನಡ ಸಿನಿಮಾ ನಟಿ  ಶ್ರುತಿ, ಮಾಳವಿಕಾ ಮತ್ತು ಸುಧಾರಾಣಿ ಅವರು ಹಿರಿಯ ನಟಿ ಲೀಲಾವತಿಯವರ ಆರೋಗ್ಯ ವಿಚಾರಿಸಿದ್ದಾರೆ.

Advertisement

ಲೀಲಾವತಿ ಅಮ್ಮನವರು ಇತ್ತೀಚಿಗಷ್ಟೆ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಅವರ ಸೊಂಟ ಹಾಗೂ ಕಾಲಿಗೆ ಪೆಟ್ಟು ಬಿದ್ದಿದ್ದು, ವೈದ್ಯರ ಸೂಚನೆಯಂತೆ ಒಂದು ತಿಂಗಳ ಕಾಲ ನೆಲಮಂಗಲದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಭಾನುವಾರ ಸುಧಾರಾಣಿ, ಮಾಳ್ವಿಕಾ ಅವಿನಾಶ್ ಹಾಗೂ ಶೃತಿಯವರು ಮನೆಗೆ ತೆರಳಿ ಲೀಲಾವತಿಯವರ ಆರೋಗ್ಯ ವಿಚಾರಿಸಿದ್ದಾರೆ. ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸುಧಾರಾಣಿ, ಲೀಲಾವತಿ ಅಮ್ಮನ ಜೊತೆಗೆ ತಮ್ಮ ಒಡನಾಟವನ್ನು ಮೆಲುಕು ಹಾಕಿದ್ದಾರೆ.

Advertisement

“ಲೀಲಾವತಿ ಅಮ್ಮ, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ ಇವರು. ನೂರಾರು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ. ಲೀಲಾವತಿ ಎನ್ನುವುದು ದುರ್ಗಾದೇವಿಯ ಮತ್ತೊಂದು ಹೆಸರು, ಕನ್ನಡದಲ್ಲಿ ಲೀಲಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ವಿನೋದ. ಲೀಲಾವತಿ ಅಮ್ಮ ದುರ್ಗೆಯ ಅವತಾರವಾದರು, ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇಂದು ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ” ಎಂದು ಸುಧಾರಾಣಿ ಬರೆದುಕೊಂಡಿದ್ದಾರೆ.

“ಅವರು ವಾಸವಿರುವ ಊರಿನಲ್ಲಿ ಬಡಜನರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ, ಹಸು ಕರುಗಳಿಗೆ ನೀರಿನ ಟ್ಯಾಂಕ್ ಕಟ್ಟಿಸಿ ಅವುಗಳಿಗೆ ಮೇವು ನೀಡಿದ್ದಾರೆ, ಎಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡುತ್ತಾ ಇರುವ ಇವರನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎಂದು ಕರೆಯುವುದೋ ಅಥವಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು, ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ನಿಭಾಯಿಸಿರವ ಇವರನ್ನು ಭೂಮಿ ತಾಯಿಯ ಸ್ವರೂಪ ಎಂದು ಕರೆಯುವುದೋ. ಇಂತಹ ವ್ಯಕ್ತಿತ್ವ ಹೊಂದಿರುವ ಲೀಲಾವತಿ ಅಮ್ಮನವರ ಜೊತೆ ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು” ಎಂದು ಸುಧಾರಾಣಿ ಹೇಳಿದ್ದಾರೆ.

“ನಾಯಕಿಯಾದ ಮೇಲು ಲೀಲಾವತಿ ಅಮ್ಮನವರ ಜೊತೆ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ. ಇಲ್ಲಿರುವ ಎರಡು ಫೋಟೋಗಳಲ್ಲಿ ಮೊದಲನೆಯದು ನಾನು ಬಾಲನಟಿಯಾಗಿ ನಟಿಸಿದ ಮೊದಲ ಸಿನಿಮಾ “ಕಿಲಾಡಿ ಕಿಟ್ಟು” ಚಿತ್ರೀಕರಣದ ಸಮಯದ ಫೋಟೋ ಮತ್ತೊಂದು ಇಂದು ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ..ವರ್ಷಗಳು ಉರುಳಿವೆ ಹೊರತು ನಮ್ಮ ನಡುವೆ ಇರುವ ಬಾಂಧವ್ಯವಲ್ಲ” ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next