Advertisement

ಸರ್ಜಾ- ಶ್ರುತಿ ಸಂಧಾನ ವಿಫ‌ಲ

06:00 AM Oct 26, 2018 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿದ ಅರ್ಜುನ್‌ ಹಾಗೂ ಶ್ರುತಿ ಹರಿಹರನ್‌ ನಡುವಿನ “ಮಿ ಟೂ’ಆರೋಪದ ಕುರಿತಾದ ಸಂಧಾನ ಸಭೆ ಮುರಿದು ಬೀಳುವ ಮೂಲಕ ಪ್ರಕರಣ ಇನ್ನೊಂದು ಹಂತ ತಲುಪಿದೆ. ನಟ ಅರ್ಜುನ್‌ ಸರ್ಜಾ “ವಿಸ್ಮಯ’ ಚಿತ್ರೀಕರಣದ ವೇಳೆ ತನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆಂದು  ನಟಿ ಶ್ರುತಿ ಹರಿಹರನ್‌ “ಮಿ ಟೂ’ ಅಭಿಯಾನದಡಿ ಮಾಡಿದ ಆರೋಪಕ್ಕೆ ತಾರ್ಕಿಕ ಅಂತ್ಯ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ ಹಿರಿಯ ನಟ ಅಂಬರೀಶ್‌ ನೇತೃತ್ವದಲ್ಲಿ ನಡೆದ ಸಭೆ ಸಂಪೂರ್ಣ ವಿಫ‌ಲವಾಗಿದ್ದು, ಅರ್ಜುನ್‌ ಸರ್ಜಾ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಸುಮಾರು ಮೂರು ಗಂಟೆಗೆ ಅಧಿಕ ಕಾಲ ನಡೆದ ಸಂಧಾನ ಸಭೆಯಲ್ಲಿ ಅಂಬರೀಶ್‌ ಅವರು, ಅರ್ಜುನ್‌ ಸರ್ಜಾ ಹಾಗೂ ಶ್ರುತಿ ಹರಿಹರನ್‌ ಇಬ್ಬರಲ್ಲೂ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ತಾರ್ಕಿಕ ಅಂತ್ಯವಾಡಲು ಸೂಚಿಸಿದರೂ ಅದು ವಿಫ‌ಲವಾಗಿದ್ದು, ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಅರ್ಜುನ್‌ ಸರ್ಜಾ ಅವರು ಶ್ರುತಿ ಹರಿಹರನ್‌ ವಿರುದ್ಧ 5 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಸಭೆ ಬಳಿಕ ಮಾತನಾಡಿದ ಅಂಬರೀಶ್‌, “ಇಬ್ಬರನ್ನು ಕರೆದು ಮಾತನಾಡಿದೆವು. ಇಬ್ಬರೂ ಅವರವರಿಗಾದ ನೋವನ್ನು ಹೇಳಿಕೊಂಡಿದ್ದಾರೆ. ಜೊತೆಗೆ ಪ್ರಕರಣ ಈಗಾಗಲೇ ಕೋರ್ಟ್‌ ಮೆಟ್ಟಿಲೇರಿದೆ. ಹಾಗಾಗಿ, ಇಲ್ಲಿ ನಾವು ಹೆಚ್ಚೇನು ಮಾತನಾಡುವಂತಿಲ್ಲ. ಹೆಣ್ಣು ಮಗಳು ಆರೋಪ ಮಾಡಿದಳು ಎಂಬ ಕಾರಣಕ್ಕೆ ನಾವು ಸಭೆ ಕರೆದು ಚರ್ಚಿಸಿದೆವು. ಆದರೆ ಇಬ್ಬರು ತಮ್ಮ ನೋವು ಹೇಳಿಕೊಂಡಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕೊಡಲು ನಾನೇನು ಸುಪ್ರೀಂಕೋರ್ಟ್‌ ಜಡ್ಜ್ ಅಲ್ಲ. ಆದರೂ ಇಬ್ಬರಿಗೂ ತಮ್ಮ ಅಭಿಪ್ರಾಯವನ್ನು ತಿಳಿಸಲು ಇನ್ನೊಂದಿಷ್ಟು ಕಾಲಾವಕಾಶ ನೀಡಲಾಗಿದೆ’ ಎಂದರು. ಪರ-ವಿರೋಧದ ಬಗ್ಗೆ ಮಾತನಾಡಿದ ಅಂಬರೀಶ್‌, “ನಾನು ಯಾರ ಪರವಾಗಿಯೂ ಇಲ್ಲ. ಯಾರದ್ದು ಸರಿ, ಯಾರದ್ದು ತಪ್ಪು ಎಂದು ಹೇಳಲು ನಾನು ಘಟನೆಯನ್ನು ಕಣ್ಣಾರೆ ಕಂಡಿಲ್ಲ’ ಎಂದು ಉತ್ತರಿಸಿದ ಅಂಬರೀಶ್‌, “ಚಿತ್ರರಂಗದ ಬಹುತೇಕ ಸಮಸ್ಯೆಗಳು ನೇರವಾಗಿ ನಮ್ಮಲ್ಲೇ ಬರುತ್ತಿದ್ದವು. ಹಾಗಾಗಿ ಬಗೆಹರಿಸುತ್ತಿದ್ದೆವು. ಆದರೆ, ಈ ಪ್ರಕರಣ ಕೋರ್ಟ್‌ಗೆ ಹೋಗಿರುವುದರಿಂದ ನಾವು ನಮ್ಮ ಅಭಿಪ್ರಾಯವನ್ನಷ್ಟೇ ತಿಳಿಸಬಹುದು’ ಎಂದರು.

ರಾಜಿಯಾಗುವ ಪ್ರಶ್ನೆಯೇ ಇಲ್ಲ:  ನಟಿ ಶ್ರುತಿ ಮಾಡಿದ ಆರೋಪದಲ್ಲಿ ರಾಜಿಯಾಗುವ  ಪ್ರಶ್ನೆಯೇ ಇಲ್ಲ ಎಂದು ನಟ ಅರ್ಜುನ್‌ ಸರ್ಜಾ ನೇರವಾಗಿ ಹೇಳುವ ಜೊತೆಗೆ ತಮ್ಮ ನೋವನ್ನು ತೋಡಿಕೊಂಡರು. “ಈ ತರಹದ ಸನ್ನಿವೇಶದಲ್ಲಿ ನಿಂತು ಮಾತನಾಡುತ್ತಿರುವುದು ವಿಷಾದಕರ. ನನಗೆ ಈ ವಿಚಾರದಲ್ಲಿ ಆದ ನೋವನ್ನು ಹೇಳಲಾಗದು. ಕೇವಲ ನನಗೊಬ್ಬನಿಗೆ ನೋವಾಗಿದ್ದರೆ ನಾನು ಸಹಿಸಿಕೊಳ್ಳುತ್ತಿದ್ದೆ. ಆದರೆ, ನನ್ನ ಕುಟುಂಬಕ್ಕೆ, ಅಭಿಮಾನಿಗಳಿಗೆ ಬೇಸರವಾಗಿದೆ. 

ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ನನ್ನ ತೇಜೋವಧೆಯಾಗಿದೆ. ಯಾಕಾಗಿ ಈ ತೇಜೋವಧೆಯಾಯಿತು, ಇದರ ಹಿಂದೆ ಯಾರಿದ್ದಾರೆಂಬುದು ಗೊತ್ತಿಲ್ಲ. ತಪ್ಪು ಮಾಡಿದರಿಗೆ ಶಿಕ್ಷೆಯಾಗಲೇ ಬೇಕು. ಆ ಕಾರಣದಿಂದ ನಾನು ಈ ಪ್ರಕರಣದಲ್ಲಿ ರಾಜಿಯಾಗಲು ಸಾಧ್ಯವಿಲ್ಲ. ನಮಗೆ ನಮ್ಮ ತಂದೆಯ ಕಾಲದಿಂದಲೂ ಮಂಡಳಿ ಮೇಲೆ, ಇಲ್ಲಿನ ಹಿರಿಯರ ಮೇಲೆ ಅಪಾರ ಗೌರವವಿದೆ. ಅದೇ ಗೌರವದೊಂದಿಗೆ ಇಂದಿನ ಸಭೆಗೆ ನಾನು ಬಂದೆ. ಆದರೆ, ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರಾಜಿಯಾದರೆ ನನ್ನ ತಪ್ಪಾಗುತ್ತದೆ. ಹಾಗಾಗಿ, ಕಾಂಪ್ರಮೈಸ್‌ ಆಗಲ್ಲ ಎಂದು ಮಂಡಳಿಯಲ್ಲಿ ಮನವಿ ಮಾಡಿದ್ದೇನೆ’ ಎಂದರು.

Advertisement

“ಮಿ ಟೂ ಒಳ್ಳೆಯದೇ, ಅಮಾಯಕರಿಗೆ ಅನ್ಯಾಯವಾಗಬಾರದು: “ಮಿ ಟೂ’ ಅಭಿಯಾನದ ಬಗ್ಗೆ ಮಾತನಾಡಿದ ಅರ್ಜುನ್‌ ಸರ್ಜಾ, “ಮಿ ಟೂ’ ವೇದಿಕೆ ಒಳ್ಳೆಯದೇ. ಹೆಣ್ಣು ಮಕ್ಕಳು ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಇದೊಂದು ವೇದಿಕೆ. ಆದರೆ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಬಾರದು. ಈ ವೇದಿಕೆಯಿಂದ ಅಮಾಯಕರಿಗೆ ಅನ್ಯಾಯವಾಗಬಾರದು. “ಸಿನಿಮಾದಲ್ಲಿ ನನ್ನನ್ನು ಹಿಡಿದ, ಊಟಕ್ಕೆ ಕರೆದ’ ಎನ್ನುತ್ತಾ ಆರೋಪ ಮಾಡಿದರೆ ಈ ವೇದಿಕೆ ದುರ್ಬಳಕೆಯಾದಂತೆ. ನಾವೂ ಕೂಡಾ ಹೆಣ್ಣು ಮಕ್ಕಳ ಪರ ಸಾಕಷ್ಟು ಕೆಲಸ ಮಾಡಿದ್ದೇವೆ. ಆದರೆ, ಅವೆಲ್ಲವನ್ನು ಹೇಳಿಕೊಂಡು ಪ್ರಚಾರ ತೆಗೆದುಕೊಳ್ಳಲು ಇಷ್ಟವಿಲ್ಲ’ ಎಂದು ಹೇಳಿದರು.

ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಶ್ರುತಿ
ಸಂಧಾನ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರುತಿ ಹರಿಹರನ್‌, “ಮಂಡಳಿಗೆ ಗೌರವ ಕೊಟ್ಟು ಇಷ್ಟು ದಿನ ನಾನು ಯಾವುದೇ ಕಾನೂನು ಹೋರಾಟಕ್ಕೆ ಮುಂದಾಗಿರಲಿಲ್ಲ. ನಾಳೆ(ಶುಕ್ರವಾರ) ಬೆಳಗ್ಗೆವರೆಗೆ ಕಾಯುತ್ತೇನೆ. ಆ ನಂತರ ನನ್ನ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು. “ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ.  ಸಮಸ್ಯೆಯಾಗಿರುವುದು ನನಗೆ, ನಾನ್ಯಾಕೆ ಕ್ಷಮೆ ಕೇಳಲಿ’ ಎಂದ ಶ್ರುತಿ, “ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿರುವ ಸುದ್ದಿ ಗೊತ್ತಾಯಿತು. ನಾನು ಹೋರಾಡಲು ಸಿದ್ಧ’ ಎಂದರು.

ಗೌರವವಿದ್ದರೆ ಮುಂಚೆ ಯಾಕೆ ಬರಲಿಲ್ಲ: “ನನಗೆ ವಾಣಿಜ್ಯ ಮಂಡಳಿ ಮೇಲೆ ಅಪಾರ ಗೌರವವಿದೆ. ಹಾಗಾಗಿ, ಕೋರ್ಟ್‌ ಮೆಟ್ಟಿಲೇರಿಲ್ಲ’ ಎಂದು ಶ್ರುತಿ ಹೇಳುತ್ತಿದ್ದಂತೆ, ಪಕ್ಕದಲ್ಲಿದ್ದ ಸಾ.ರಾ.ಗೋವಿಂದು, “ಅಷ್ಟೊಂದು ಗೌರವವಿದ್ದರೆ ಮುಂಚೆನೇ ಈ ಪ್ರಕರಣವನ್ನು ಮಂಡಳಿಯ ಗಮನಕ್ಕೆ ಯಾಕೆ ತರಲಿಲ್ಲ’ ಎಂದು ಖಾರವಾಗಿ ಪ್ರಶ್ನಿಸಿದರು. ಈ ಪ್ರಶ್ನೆಗೆ ಪೂರಕವಾಗಿ ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ, ಇರುಸುಮುರುಸಾದ ಶ್ರುತಿ ಸರಿಯಾಗಿ ಉತ್ತರಿಸದೇ, ಮಂಡಳಿಯಿಂದ ಎದ್ದು ಹೊರನಡೆದರು.

ಶ್ರುತಿ ವಿರುದ್ಧ ಮಾನವಷ್ಟ ಮೊಕದ್ದಮೆ:
ಮಿ ಟೂ ಅಭಿಯಾನದಡಿ ಶ್ರುತಿ ಹರಿಹರನ್‌ ತನ್ನ ವಿರುದ್ಧ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ನಟ ಅರ್ಜುನ್‌ ಸರ್ಜಾ, ಗುರುವಾರ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಆಕೆಯ ವಿರುದ್ಧ ಐದು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next