ಉಳ್ಳಾಲ: ಕೊರಗಜ್ಜನ ಕುರಿತಾದ ಬಹು ಬಾಷಾ ಚಿತ್ರ “ಕರಿ ಹೈದ ಕರಿಯಜ್ಜ” ದ ಯಶಸ್ಸಿಗೆ ಕಲ್ಲಾಪು ಬುರ್ದುಗೋಳಿಯ ಕೊರಗಜ್ಜ-ಗುಳಿಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿದ ನಟಿಯರಾದ ಭವ್ಯ, ಶೃತಿ ಸೇರಿದಂತೆ ಚಿತ್ರ ತಂಡ ಗುಳಿಗನಿಗೆ ಹರಕೆಯಾಗಿ ಹುಂಜವನ್ನು ಸಮರ್ಪಿಸಿದ್ದಾರೆ.
ತ್ರಿವಿಕ್ರಮ ಸಪಲ್ಯ ಅವರು 5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ “ಕರಿ ಹೈದ ಕರಿಯಜ್ಜ” ಚಿತ್ರದ ಚಿತ್ರೀಕರಣದ ಆರಂಭದಲ್ಲೇ ನಿರ್ದೇಶಕ ಸುಧೀರ್ ರಾಜ್ ಉರ್ವ ಅವರ ಸಲಹೆಯಂತೆ ಬುರ್ದುಗೋಳಿ ಕ್ಷೇತ್ರದ ಗುಳಿಗಜ್ಜನಿಗೆ ಹುಂಜ ಮತ್ತು ಮಂಗಳೂರಿನ ನಂದಿಗುಡ್ಡೆಯ ಕೊರಗಜ್ಜನ ಕ್ಷೇತ್ರದಲ್ಲಿ ಕೋಲ ಸೇವೆ ನೀಡುತ್ತೇನೆಂದು ಹರಕೆ ಹೊತ್ತಿದ್ದರಂತೆ.
ಅದರಂತೆ ಬುರ್ದುಗೋಳಿ ಕ್ಷೇತ್ರಕ್ಕೆ ಹುಂಜವನ್ನು ಹರಕೆ ನೀಡಿದ್ದು, ಗುಳಿಗ-ಕೊರಗಜ್ಜನ ಉದ್ಭವ ಶಿಲೆ ಸಮ್ಮುಖದಲ್ಲಿ ಚಿತ್ರತಂಡದವರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ತೊಂಭತ್ತರ ದಶಕದ ಜನಪ್ರಿಯ ನಾಯಕಿ ನಟಿಯರಾದ ಭವ್ಯ ಮತ್ತು ಶೃತಿ ಅವರು ಕೊರಗಜ್ಜ-ಗುಳಿಗಜ್ಜನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇಂದು ನಟಿ ಭವ್ಯ ಅವರ ಜನುಮ ದಿನ. ಈ ಸಂದರ್ಭದಲ್ಲೇ ಕೊರಗಜ್ಜನ ಕ್ಚೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದ್ದು, ನಿಜಕ್ಕೂ ನನಗೆ ಸಿಕ್ಕಿದ ಭಾಗ್ಯ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ʼಕರಿ ಹೈದ ಕರಿಯಜ್ಜʼ ಚಿತ್ರದ 99 ಶೇಕಡಾ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಏಪ್ರಿಲ್, ಮೇ ತಿಂಗಳಲ್ಲಿ ಬಿಡುಗಡೆಗೊಳಿಸಲಾಗುವುದು. ತುಳು, ಕನ್ನಡ, ಮಳಯಾಳಂ ಬಾಷೆಗಳಲ್ಲಿ ಚಿತ್ರ ಮೂಡಿ ಬರಲಿದೆ. ದಕ್ಷಿಣ ಕನ್ನಡದ ಬಂಗಾಡಿ, ಮಡಂತ್ಯಾರ್, ಸೋಮೇಶ್ವರ, ಉಳ್ಳಾಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು, ಕೊರಗಜ್ಜನ 800 ವರ್ಷಗಳ ಐತಿಹ್ಯದ ಕಥೆಯನ್ನೇ ಚಿತ್ರದಲ್ಲಿ ಅಳವಡಿಸಲಾಗಿದೆ ಎಂದು ನಿರ್ಮಾಪಕ ತ್ರಿವಿಕ್ರಮ ಸಫಲ್ಯ ಹೇಳಿದ್ದಾರೆ.
ನಟಿ ಶೃತಿಯವರ ಸುಪುತ್ರಿ ಗೌರಿ ಚಿತ್ರತಂಡದ ಜತೆಯಲ್ಲಿದ್ದರು. ಬಳಿಕ ಚಿತ್ರತಂಡವು ನಂದಿಗುಡ್ಡೆ ಕೊರಗಜ್ಜನ ಕ್ಷೇತ್ರಕ್ಕೆ ಹರಕೆಯ ಕೋಲ ನೀಡಲು ತೆರಳಿತು.
ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ನಾಯ್ಕ್ ಕಲ್ಲಾಪು, ಭಂಡಾರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪ್ರಮುಖರಾದ ಪ್ರಶಾಂತ್ ಗಟ್ಟಿ ಕಾಯಂಗಳ, ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್. ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
ಪವಾಡಗಳೇ ನಡೆಯಿತು!
ನೇತ್ರಾವತಿ ನದಿ ತಟದಲ್ಲಿ ನಡೆಯುತ್ತಿದ್ದ ಶೂಟಿಂಗ್ ಸೆಟ್ ಗೆ ಹರೇಕಳದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಷೋಲೈಟ್ ಅಡ್ಡಿಯುಂಟು ಮಾಡುತಿತ್ತು. ಎಲ್ಲರೂ ಮೇಕಪ್ ಮಾಡಿ, ದೋಣಿಗಳ ಮೂಲಕ ಶೂಟಿಂಗ್ ನಡೆಸುವಾಗ ಅಡಚಣೆಗಳೇ ಜಾಸ್ತಿಯಾಯಿತು. ಅಂದು ಶೂಟಿಂಗ್ ನಿಲ್ಲಿಸುತ್ತಿದ್ದಲ್ಲಿ ಲಕ್ಷಾಂತರ ನಷ್ಟವುಂಟಾಗುತಿತ್ತು. ಆದರೆ ಕೊರಗಜ್ಜನನ್ನು ಸ್ಮರಿಸಿದಾಗ ಪವಾಡವೆಂಬಂತೆ ಷೋಲೈಟ್ ಗೆ ಅಡ್ಡವಾಗಿ ದೋಣಿಯೊಂದು ಬಂದು ನಿಂತು ಸೀನ್ ಶೂಟಿಂಗ್ ಅಡಚಣೆಯಿಲ್ಲದೆ ನಡೆಯಿತು. ಇಂತಹ ಪವಾಡಗಳು ಜಿಲ್ಲೆಯ ವಿವಿದೆಡೆ ನಡೆದುಕೊಂಡೇ ಯಶಸ್ವಿಯಾಗಿ ಶೂಟಿಂಗ್ ನಡೆದಿದೆ ಎಂದು ನಿರ್ದೇಶಕ ಅತ್ತಾವರ್ ಪ್ರಾರ್ಥನೆ ವೇಳೆ ತಿಳಿಸಿದರು.