ನೀವೇನಾದರೂ ಕಿರುತೆರೆ ವೀಕ್ಷಕರಾಗಿದ್ದಾರೆ, ಧಾರಾವಾಹಿ ಪ್ರಿಯರಾಗಿದ್ದರೆ, ನಿತ್ಯಾ ರಾಮ್ ಎನ್ನುವ ಈ ಚೆಲುವೆಯನ್ನ ಖಂಡಿತ ನೋಡಿರುತ್ತೀರಿ. ತನ್ನ ಧಾರಾವಾಹಿಗಳ ಮೂಲಕವೇ ಅಸಂಖ್ಯಾತ ಕಿರುತೆರೆ ಪ್ರೇಕ್ಷಕರ ಮನಗೆದ್ದ ನಿತ್ಯಾರಾಮ್, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲೂ ಕೂಡ ಜನಪ್ರಿಯ ಕಿರುತೆರೆ ನಟಿ.
ನಿತ್ಯಾ ರಾಮ್ ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ಶಾಲಾ ದಿನಗಳಿಂದಲೇ ಕಲೆಯ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ ನಿತ್ಯಾ ರಾಮ್, ಭರತನಾಟ್ಯ ಕಲಾವಿದೆ ಕೂಡ ಹೌದು. ಬಯೋ ಟೆಕ್ನಾಲಜಿಯಲ್ಲಿ ಪದವಿ ಪಡೆದ ನಿತ್ಯಾ ಬಳಿಕ ತನ್ನ ಆಸೆಯಂತೆ ಅಭಿನಯದ ಕಡೆಗೆ ಮುಖ ಮಾಡಿದರು.
2010ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬೆಂಕಿಯಲ್ಲಿ ಆರಳಿದ ಹೂವು ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ನಿತ್ಯಾ, ನಿಧಾನವಾಗಿ ತನ್ನ ಅಭಿನಯದ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮಾತಾದರು. ಬಳಿಕ ಕರ್ಪೂರದ ಗೊಂಬೆ, ರಾಜಕುಮಾರಿ, ಎರಡು ಕನಸು ಹಾಗೂ ಗಿರಿಜಾ ಕಲ್ಯಾಣ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಿತ್ಯಾ, ಕಿರುತೆರೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು. ನಂತರ ತೆಲುಗು ಮತ್ತು ತಮಿಳಿನತ್ತ ವಾಲಿದ ನಿತ್ಯಾಗೆ ಅಲ್ಲಿ ಪ್ರಸಾರವಾಗುತ್ತಿದ್ದ ಮುದ್ದು ಬಿಡ್ಡ, ಅಮ್ಮ ನಾ ಕೊಡಲ, ಅವಳ್ ಧಾರಾವಾಹಿಗಳು ಸಾಕಷ್ಟು ಹೆಸರು ತಂದುಕೊಟ್ಟವು.
ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯ ಜೊತೆಗೆ ಬ್ಯುಸಿಯಾಗಿರುವಾಗಲೇ ಹಿರಿತೆರೆಯತ್ತ ಮುಖ ಮಾಡಿದ ನಿತ್ಯಾ ರಾಮ್, ಸಾಕಷ್ಟು ನಿರೀಕ್ಷೆಯೊಂದಿಗೆ ಮುದ್ದು ಮನಸೆ ಚಿತ್ರದಲ್ಲಿ ಆರು ಗೌಡಗೆ ನಾಯಕಿಯಾಗಿ ಬೆಳ್ಳೆತೆರೆಗೆ ಪಾದಾರ್ಪಣೆ ಮಾಡಿದರು. ಆದರೆ, ಮುದ್ದು ಮನಸೆ ಚಿತ್ರದ ಬಗ್ಗೆ ಒಂದಷ್ಟು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ, ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಬಳಿಕ ಒಂದಷ್ಟು ಚಿತ್ರಗಳಲ್ಲಿ ನಿತ್ಯಾ ರಾಮ್ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಕೆಲಕಾಲ ಹರಿದಾಡಿದ್ದರೂ, ದುರದೃಷ್ಟವಶಾತ್ ನಿತ್ಯಾ ಅಭಿನಯದ ಯಾವ ಚಿತ್ರಗಳೂ ಸೆಟ್ಟೇರಲೇ ಇಲ್ಲ.
ಆನಂತರ ಬ್ಯಾಕ್ ಟು ಫೆವಿಲಿಯನ್ ಎನ್ನುವಂತೆ, ಮತ್ತೆ ಕಿರುತೆರೆಗೆ ಮರಳಿದ ನಿತ್ಯಾರಾಮ್ ಅಲ್ಲಿಯೇ ಬ್ಯುಸಿಯಾಗಿದ್ದಾರೆ. ಸದ್ಯ ಕಿರುತೆರೆ ವಾಹಿನಿಯೊಂದರಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿ ಸುತ್ತಿರುವ ನಿತ್ಯಾ ರಾಮ್, ಕೆಲ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ನಿತ್ಯಾರಾಮ್ ಕಿರುತೆರೆಯಲ್ಲಿ ಬಹುಬೇಡಿಕೆಯ ನಟಿಯಾದರೆ, ನಿತ್ಯಾ ರಾಮ್ ಸೋದರಿ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.