ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ “ಲೀಲಾಕಿರಣ್’ ಅವರು ಕಂಕನಾಡಿಯಲ್ಲಿರುವ ಸೈಂಟ್ ಜೋಸೆಫ್ ಎಲಿಮೆಂಟರಿ ಸ್ಕೂಲ್‌ನಲ್ಲಿ 2ನೇ ತರಗತಿ ವರೆಗೆ ಕಲಿತವರು. ಕಡು ಬಡತನದಲ್ಲಿ ಮನೆ ಕೆಲಸವನ್ನೂ ಆಗ ಕಲಿತಿದ್ದರು!
ಕನ್ನಡ ಸಿನೆಮಾದಲ್ಲಿ ಅವರು ತೊಡಗಿಸಿಕೊಂಡ ಬಳಿಕ, ಮಾತೃ ನೆಲದ ಭಾಷೆಯ ಪ್ರೀತಿಯಲ್ಲಿ ತುಳು ಭಾಷಾ ಚಲನಚಿತ್ರದ ಆರಂಭಕ್ಕೆ ಲೀಲಾವತಿ ಅವರು ಮೊದಲು ಸಹಾಯಹಸ್ತ ನೀಡಿದ್ದರು. ತುಳುವಿನ “ದಾರೆದ ಬುಡೆದಿ’ಯಿಂದ ಆರಂಭವಾಗಿ ಹಲವು ತುಳು ಸಿನೆಮಾಗಳ ನಿರ್ಮಾಣಕ್ಕೆ ತನ್ನದೇ ಆದ ರೀತಿಯಲ್ಲಿ ಬೆಂಬಲ-ಸಹಾಯ ನೀಡಿದ್ದರು.
ತುಳು ಭಾಷೆಯ 2ನೇ ಸಿನೆಮಾ 1971ರಲ್ಲಿ ತೆರೆಕಂಡ “ದಾರೆದ ಬುಡೆದಿ’, 1972ರಲ್ಲಿ ತೆರೆಕಂಡ “ಪಗೆತ ಪುಗೆ’ ಹಾಗೂ ಬಿಸತ್ತಿ ಬಾಬು, 1973ರಲ್ಲಿ ತೆರೆಕಂಡ “ಯಾನ್ ಸನ್ಯಾಸಿ ಆಪೆ’, 1976ರಲ್ಲಿ ಬಂದ “ಸಾವಿರಡೊರ್ತಿ ಸಾವಿತ್ರಿ’, 1981ರಲ್ಲಿ “ಭಾಗ್ಯವಂತೆದಿ’, 1983ರಲ್ಲಿ “ಬದ್ಕೆರೆ ಬುಡ್ಲೆ’ ಹಾಗೂ 1984ರಲ್ಲಿ “ದಾರೆದ ಸೀರೆ’ ಸಿನೆಮಾಗಳಲ್ಲಿ ಅದ್ಬುತವಾಗಿ ಅಭಿನಯಿಸಿ ತುಳುನಾಡಿನ ಮನಸ್ಸು ಗೆದ್ದವರು.
“ಮನೆಯಲ್ಲಿಯೂ ಅವರು ತುಳುವಿನಲ್ಲಿಯೇ ಹೆಚ್ಚಾಗಿ ಮಾತನಾಡುತ್ತ ತುಳು ಭಾಷಾ ಪ್ರೇಮ ಮೆರೆದವರು’ ಎಂದು ನೆನಪು ಮಾಡಿಕೊಳ್ಳುತ್ತಾರೆ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ.
ಪ್ರತೀ ಸಿನೆಮಾದಲ್ಲಿಯೂ ತನ್ನ ಅಭಿನಯದ ಮೂಲಕವೇ ಮನಸೆಳೆದ ಲೀಲಾವತಿ ಅವರು ಕರಾವಳಿಯಲ್ಲಿ ನಡೆದ ತುಳು ಭಾಷಾ ಕುರಿತಾದ ಕೆಲವು ಕಾರ್ಯಕ್ರಮ, ತುಳು ಸಿನೆಮಾ ಸಂಭ್ರಮದಲ್ಲಿ ಹಿಂದೆ ಭಾಗವಹಿಸಿದ್ದರು. ಹಲವು ವರ್ಷಗಳ ಹಿಂದೆ ನಿರಂತರವಾಗಿ ಕರಾವಳಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದರು.