Advertisement

Actress Died: ʼಬ್ರಹ್ಮಗಂಟು’ ಧಾರಾವಾಹಿ ಖ್ಯಾತಿ, ಸಿನಿಮಾ ನಟಿ ಶೋಭಿತಾ ಶಿವಣ್ಣ ನಿಧನ!

02:05 AM Dec 02, 2024 | Team Udayavani |

ಬೆಂಗಳೂರು:  ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಖ್ಯಾತಿ ಪಡೆದು ‘ಎರಡೊಂದ್ಲಾ ಮೂರು’, ಎಟಿಎಂ, ‘ಒಂದ್‌ ಕಥೆ ಹೇಳ್ಲಾ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ (30) ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಶೋಭಿತಾ, ಮದುವೆ ಬಳಿಕ ಹೈದರಾಬಾದ್‌ನಲ್ಲೇ ನೆಲೆಸಿದ್ದರು. ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲೂ ಕಾರ್ಯನಿರ್ವಹಿಸುತ್ತಿದ್ದರು. ಶೋಭಿತಾ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆಕೆಯ ಕುಟುಂಬದವರು ಹೈದರಾಬಾದ್‌ಗೆ ತೆರಳಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಪಾರ್ಥಿವ ಶರೀರ ಬೆಂಗಳೂರಿಗೆ ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮೂಲತಃ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮದವರಾದ ಶೋಭಿತಾ ಸಕಲೇಶಪುರದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಬ್ರಹ್ಮಗಂಟು, ಕೃಷ್ಣ ರುಕ್ಮಿಣಿ, ಕೋಗಿಲೆ, ಮಂಗಳಗೌರಿ, ಗಾಳಿಪಟ, ಮನೆದೇವರು ಸೇರಿದಂತೆ 12ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ನಟಿಯ ಆತ್ಮಹತ್ಯೆಗೆ ಕಾರಣ ಏನೆಂಬುದು ಗೊತ್ತಾಗಿಲ್ಲ. ಶನಿವಾರ (ನ.30) ರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದೆ. ಶನಿವಾರವಷ್ಟೇ ಸೋಶಿಯಲ್‌ ಮೀಡಿಯಾದಲ್ಲಿ ಸ್ಟೋರಿ ಶೇರ್ ಮಾಡಿದ್ದರು. ಆ ಬಳಿಕ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ.

Advertisement

ಚಿತ್ರರಂಗದಲ್ಲೂ ಕೆಲಸ ನಿರ್ವಹಿಸಿದ್ದ ಶೋಭಿತಾ, ಎರಡೊಂದ್ಲ ಮೂರು, ಒಂದ್‌ ಕಥೆ ಹೇಳ್ಲಾ, ಜಾಕ್‌ಪಾಟ್‌, ಎಟಿಎಂ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಸದ್ಯ ಅವರು ನಟಿಸಿದ್ದ “ಫ‌ಸ್ಟ್‌ ಡೇ ಫ‌ಸ್ಟ್‌ ಶೋ’ ಸಿನಿಮಾ ತೆರೆಗೆ ಸಿದ್ಧಗೊಂಡಿತ್ತು. ಕಾಲೇಜು ದಿನಗಳಿಂದಲೂ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಶೋಭಿತಾ, ಬಳಿಕ ಟಿವಿ ನಿರೂಪಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿ ನಂತರ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಅವಕಾಶ ಪಡೆದಿದ್ದರು. ಅವರ ನಿಧನಕ್ಕೆ ಸಿನಿಮಾ ಮತ್ತು ಧಾರಾವಾಹಿ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next