ನವದೆಹಲಿ:“ದ ಡರ್ಟಿ ಪಿಕ್ಚರ್” ಸೇರಿದಂತೆ ಬಾಲಿವುಡ್ ನ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಬಂಗಾಳಿ ನಟಿ ಆರ್ಯ ಬ್ಯಾನರ್ಜಿ ದಕ್ಷಿಣ ಕೋಲ್ಕತಾದ ನಿವಾಸದಲ್ಲಿ ಶುಕ್ರವಾರ(ಡಿ.11, 2020) ಶವವಾಗಿ ಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
3ನೇ ಮಹಡಿಯ ಅಪಾರ್ಟ್ ಮೆಂಟ್ ನಲ್ಲಿರುವ ಮನೆಯ ಬಾಗಿಲನ್ನು ಒಡೆದು ಪೊಲೀಸರು ಒಳಹೋದ ಸಂದರ್ಭದಲ್ಲಿ 33ವರ್ಷದ ನಟಿಯ ಶವ ಬೆಡ್ ರೂಂನಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಸೀತಾರ್ ವಾದಕ ದಿ.ನಿಖಿಲ್ ಬಂಡೋಪಾಧ್ಯಾಯ ಅವರ ಪುತ್ರಿಯಾಗಿರುವ ಆರ್ಯ ಬ್ಯಾನರ್ಜಿ, 2010ರಲ್ಲಿ ಬಿಡುಗಡೆಯಾದ ಲವ್, ಸೆಕ್ಸ್ ಔರ್ ದೋಕಾ, ದ ಡರ್ಟಿ ಪಿಚ್ಚರ್ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅಲ್ಲದೇ ಮುಂಬೈನಲ್ಲಿ ರೂಪದರ್ಶಿಯಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಮನೆಯ ಅಡುಗೆ ಕೆಲಸದ ಮಹಿಳೆ ಮನೆ ಬಾಗಿಲಿನ ಬೆಲ್ ಒತ್ತಿದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲವಾಗಿತ್ತು. ನಂತರ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರ್ಯ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು ಎಂದು ವರದಿ ಹೇಳಿದೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿಧಿವಿಜ್ಞಾನ ತಜ್ಞರು ಸ್ಯಾಂಪಲ್ಸ್ ಅನ್ನು ಸಂಗ್ರಹಿಸಿದ್ದು, ವರದಿ ಬಳಿಕ ತನಿಖೆ ಮುಂದುವರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.