ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮತ್ತು ಶ್ರೀನಗರ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಮಹಿಳಾ ಟಿವಿ ಕಲಾವಿದೆಯ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ಅಗನ್ಹಂಜಿಪೋರಾದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್ ಕೌಂಟರ್ ನಡೆದಿದೆ. ಒಂದು ದಿನದ ಹಿಂದೆ ಬುದ್ಗಾಮ್ ಜಿಲ್ಲೆಯಲ್ಲಿ ಟಿವಿ ಕಲಾವಿದೆ ಅಮ್ರೀನ್ ಭಟ್ ಅವರನ್ನು ಕೊಂದ ಇಬ್ಬರು ಭಯೋತ್ಪಾದಕರು ಕೂಡಾ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದರು.
“ಇಬ್ಬರೂ ಹೊಸದಾಗಿ ಸೇರ್ಪಡೆಗೊಂಡ ಸ್ಥಳೀಯ ಭಯೋತ್ಪಾದಕರನ್ನು ಹಫ್ರೂ ಚದೂರದ ಶಾಹಿದ್ ಮುಷ್ತಾಕ್ ಭಟ್ ಮತ್ತು ಪುಲ್ವಾಮಾದ ಫರ್ಹಾನ್ ಹಬೀಬ್ ಎಂದು ಗುರುತಿಸಲಾಗಿದೆ. ಅವರು ಎಲ್ಇಟಿ ಸಿಎಂಡಿಆರ್ ಲತೀಫ್ ಸೂಚನೆಯ ಮೇರೆಗೆ ಟಿವಿ ಕಲಾವಿದೆ ಅಮ್ರೀನ್ ಭಟ್ ರನ್ನು ಕೊಂದ ಆರೋಪಿಗಳು. ಒಂದು ಎಕೆ 56 ರೈಫಲ್, ನಾಲ್ಕು ಮ್ಯಾಗಜಿನ್ ಗಳು ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ” ಎಂದು ಐಜಿಪಿ ಕಾಶ್ಮೀರ ವಲಯ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ
ಶ್ರೀನಗರದ ಸೌರಾ ಪ್ರದೇಶದಲ್ಲಿ ಮತ್ತೊಂದು ಎನ್‌ಕೌಂಟರ್ ನಡೆದಿದ್ದು, ಇಬ್ಬರು ಎಲ್‌ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನದಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಮೂವರು ಜೈಶ್ ಎ ಮೊಹಮ್ಮದ್ ಮತ್ತು ಏಳು ಲಷ್ಕರ್ ಉಗ್ರರನ್ನು ಹೊಡೆದುರಿಳಿಸಲಾಗಿದೆ.