Advertisement

ನಟನೆಗೆ ಸ್ಕೋಪ್‌ ಇರುವ ಪಾತ್ರ ಬೇಕು: ನಿರೂಪ್‌

11:36 AM Mar 28, 2018 | |

ನಿರೂಪ್‌ ಬೆಂಗಳೂರಿಗೆ ಶಿಫ್ಟ್ ಆಗುವ ಬಗ್ಗೆ ಯೋಚಿಸುತ್ತಿದ್ದಾರೆ. ಇದುವರೆಗೂ ಮೈಸೂರಿನಲ್ಲಿದ್ದ ಅವರು, ಇನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನೆಲೆಗೊಳ್ಳುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಅಲ್ಲಾ, ನಿರೂಪ್‌ ಇದ್ದಿದ್ದು ಅಮೇರಿಕಾದಲ್ಲಲ್ವಾ? ಎಂಬ ಪ್ರಶ್ನೆಯೊಂದು ಬರಬಹುದು. “ರಂಗಿತರಂಗ’ ಬಿಡುಗಡೆಯಾದ ಹೊಸದರಲ್ಲಿ ಅನೂಪ್‌ ಮತ್ತು ನಿರೂಪ್‌ ಇಬ್ಬರೂ ಅಮೇರಿಕಾದಲ್ಲಿದ್ದಾರೆ,

Advertisement

ಅಲ್ಲೇ ಕೆಲಸ ಮಾಡುತ್ತಿದ್ದಾರೆ ಎಂಬಂತಹ ಸುದ್ದಿಗಳು ಓಡಾಡುತ್ತಿದ್ದವು. ಈ ಕುರಿತು ಕೇಳಿದರೆ, “ನಾನು ಮೈಸೂರಿನಲ್ಲಿದ್ದೇನೆ. ಇಲ್ಲೇ ಕೆಲಸ ಮಾಡುತ್ತಿದ್ದೆ. “ರಂಗಿತರಂಗ’ ಆದ ನಂತರ ಕೆಲಸ ಬಿಟ್ಟು, ಅಭಿನಯದಲ್ಲಿ ತೊಡಗಿಕೊಂಡೆ. “ರಾಜರಥ’ ಚಿತ್ರದ ಚಿತ್ರೀಕರಣ ಬಹುತೇಕ ಮೈಸೂರಿನಲ್ಲಾದ್ದರಿಂದ, ಅಷ್ಟು ಸಮಸ್ಯೆಯಾಗಲಿಲ್ಲ. ಇನ್ನು ಮುಂದೆ ಬೆಂಗಳೂರಿಗೆ ಶಿಫ್ಟ್ ಆಗುವ ಯೋಚನೆ ಇದೆ’ ಎನ್ನುತ್ತಾರೆ ನಿರೂಪ್‌.

“ರಂಗಿತರಂಗ’ ಚಿತ್ರದಲ್ಲಿ ಭಯಂಕರ ಗಂಭೀರವಾಗ ಪಾತ್ರವೊಂದನ್ನು ಮಾಡಿದ್ದರು ನಿರೂಪ್‌ ಭಂಡಾರಿ. ಅದಕ್ಕೆ ತದ್ವಿರುದ್ಧವಾದ ಪಾತ್ರವೆಂದರೆ “ರಾಜರಥ’ ಚಿತ್ರದಲ್ಲಿ. ಬಹಳ ಜಾಲಿಯಾಗಿ, ಸದಾ ಲವಲವಿಕೆಯಿಂದಿರುವ ಪಾತ್ರ ಅದು. ಈ ಎರಡೂ ಪಾತ್ರಗಳೂ ತಾವಲ್ಲ ಎನ್ನುತ್ತಾರೆ ನಿರೂಪ್‌ ಭಂಡಾರಿ. “ನಾನು ರಿಯಲ್‌ ಲೈಫ್ನಲ್ಲಿ ಹಾಗೂ ಇಲ್ಲ, ಹೀಗೂ ಇಲ್ಲ. ಮಧ್ಯಕ್ಕೆ ಇದ್ದೇನೆ’ ಎನ್ನುತ್ತಾರೆ ಅವರು.

ಹಾಗಾಗಿಯೇ ಈ ಪಾತ್ರಕ್ಕೆ ಸಾಕಷ್ಟು ತಯಾರಿ ನಡೆಸಬೇಕಾಯಿತಂತೆ. “ಬಾಡಿ ಲಾಂಗ್ವೇಜ್‌, ಮ್ಯಾನರಿಸಂ ಎಲ್ಲವೂ ಬದಲಾಯಿಸಬೇಕಿತ್ತು. ನಾನು ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದರಿಂದ ಸ್ವಲ್ಪ ಸಹಾಯವಾಯ್ತು. ಸಾಕಷ್ಟು ರಿಹರ್ಸಲ್‌ ಮಾಡಿಕೊಂಡೇ ಅಭಿನಯಿಸಿದ್ದೇನೆ’ ಎನ್ನುತ್ತಾರೆ ನಿರೂಪ್‌. “ರಾಜರಥ’ ಚಿತ್ರವನ್ನು ನೋಡಿದವರೆಲ್ಲಾ, ನಿರೂಪ್‌ ಒಬ್ಬ ಆ್ಯಕ್ಷನ್‌ ಹೀರೋ ಆಗಬಹುದು ಎಂಬ ಅಭಿಪ್ರಾಯವನ್ನು ಹೇಳುತ್ತಿದ್ದಾರಂತೆ.

ನಿರೂಪ್‌ಗೆ ಆ್ಯಕ್ಷನ್‌ ಹೀರೋ ಆಗುವ ಯೋಚನೆ ಇದೆಯಾ ಎಂದರೆ, “ಪ್ಲಾನ್‌ ಇದೆ. ನನ್ನ ಮುಂದಿನ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್‌ ದೃಶ್ಯಗಳಿವೆ. ನನಗೆ ಪ್ರತಿ ಚಿತ್ರದಲ್ಲೂ ಹೊಸದೇನೋ ಮಾಡುವ ಆಸೆ ಇದೆ. ಬೇರೆ ಒಂದಿಷ್ಟು ಸ್ಕ್ರಿಪ್ಟ್ಗಳು ಬಂದಿವೆ. ನನಗೆ ಆ್ಯಕ್ಷನ್‌, ಲವ್‌ ಅಂತೇನೂ ಇಲ್ಲ. ನೆಗೆಟಿವ್‌ ಪಾತ್ರಗಳನ್ನು ಸಹ ಮಾಡೋಕೆ ಇಷ್ಟ. ಒಟ್ಟಾರೆ ನಟನೆಗೆ ಸ್ಕೋಪ್‌ ಇರುವ ಪಾತ್ರಗಳು ಬೇಕು’ ಎನ್ನುತ್ತಾರೆ ನಿರೂಪ್‌.

Advertisement

ಇನ್ನು ಚಿತ್ರದ ಒಂದು ದೃಶ್ಯದಲ್ಲಿ ನಿರೂಪ್‌ ಅವರ ತಂದೆ ಸುಧಾಕರ್‌ ಭಂಡಾರಿ ಹೊಡೆಯುವ ದೃಶ್ಯವೊಂದಿದೆ. ರೀಲ್‌ ಲೈಫ್ನಲ್ಲೇನೋ ಸರಿ, ರಿಯಲ್‌ ಲೈಫ್ನಲ್ಲಿ ಒಮ್ಮೆಯೂ ತಮ್ಮ ತಂದೆ ಹೊಡೆದಿಲ್ಲ ಎನ್ನುತ್ತಾರೆ ನಿರೂಪ್‌. “ಚಿಕ್ಕಂದಿನಲ್ಲೂ ನನ್ನ ತಂದೆ ಒಮ್ಮೆಯೂ ನನಗೆ ಹೊಡೆದಿಲ್ಲ. ಈ ಚಿತ್ರದಲ್ಲಿ ನನಗೆ ಹೊಡೆಯುವ ಒಂದು ದೃಶ್ಯವಿತ್ತು. ಹಾಗಾಗಿಯೇ ಸಾಕಷ್ಟು ಒದ್ದಾಡಿದರು. 30-40 ಟೇಕ್‌ಗಳಾದ ಮೇಲೆ ಎಲ್ಲವೂ ಓಕೆ ಆಯಿತು. ಅಷ್ಟರಲ್ಲಿ ನನಗೆ ತಲೆನೋವು ಶುರುವಾಗಿತ್ತು’ ಎಂದು ನಗುತ್ತಾರೆ ನಿರೂಪ್‌.

ಇನ್ನು ತಮ್ಮ ಹೊಸ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿರುವ ನಿರೂಪ್‌, “ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದಾರೆ. ಪ್ರಿಯಾ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ರಾಧಿಕಾ ಪಂಡಿತ್‌ ಈ ಚಿತ್ರದ ನಾಯಕಿ. ಎರಡು ಪಾತ್ರಗಳ ಮೇಲೆ ಕಥೆ ಸಾಗುತ್ತದೆ. “ರಾಜರಥ’ದಲ್ಲಿ ಯಾವ ಪಾತ್ರ ಮಾಡಿದ್ದೆನೋ, ಅದಕ್ಕೆ ತದ್ವಿರುದ್ಧವಾದ ಪಾತ್ರ ಅದು. ಅದೊಂದು ಮಹಿಳಾ ಪ್ರಧಾನವಾದ ಚಿತ್ರ ಎಂಬ ನಂಬಿಕೆ ಎಲ್ಲರಿಗೂ ಇದೆ. ಅದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರ. ಈ ಚಿತ್ರದಲ್ಲಿ ನನಗೊಂದು ಗಂಭೀರವಾದ ಪಾತ್ರವಿದೆ’ ಎನ್ನುತ್ತಾರೆ ನಿರೂಪ್‌.

ಸದ್ಯದಲ್ಲೇ ರಥಯಾತ್ರೆ ಶುರು!: ನಿರೂಪ್‌ ಭಂಡಾರಿ ಮತ್ತೆ ಫಾರಿನ್‌ಗೆ ಹೊರಟು ನಿಂತಿದ್ದಾರೆ. “ರಂಗಿತರಂಗ’ ಚಿತ್ರವು ಬಿಡುಗಡೆಯಾದ ನಂತರ ಅನೂಪ್‌ ಮತ್ತು ನಿರೂಪ್‌ ಇಬ್ಬರೂ ಅಮೇರಿಕಾಗೆ ಹೋಗಿದ್ದರು. ಅಲ್ಲಿ ಚಿತ್ರದ ಪ್ರಚಾರ ಮಾಡುವುದರ ಜೊತೆಗೆ ಸಂವಾದದಲ್ಲಿ ಭಾಗವಹಿಸಿದ್ದರು. ಈಗ ಭಂಡಾರಿ ಸಹೋದರರು ಮತ್ತೆ ಫಾರಿನ್‌ಗೆ ಹೊರಟು ನಿಂತಿದ್ದಾರೆ. ಈ ಬಾರಿ ಅಮೇರಿಕಾಗಲ್ಲ, ಯೂರೋಪ್‌ಗೆ.

ಮುಂದಿನ ತಿಂಗಳು “ರಾಜರಥ’ ಚಿತ್ರವು ಯೂರೋಪ್‌ನ ಬೇರೆಬೇರೆ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಆ ಸಂದರ್ಭದಲ್ಲಿ ಇಬ್ಬರೂ ಅಲ್ಲೆಲ್ಲಾ ಚಿತ್ರದ ಬಗ್ಗೆ ಪ್ರಚಾರ ಮಾಡಿ ಬರಲಿದ್ದಾರೆ. ಇನ್ನು ಅದಕ್ಕೂ ಮುನ್ನ ಅಂದರೆ ಮುಂದಿನ ವಾರದಿಂದ “ರಥಯಾತ್ರೆ’ ಎಂಬ ಹೆಸರಿನಲ್ಲಿ ಬೇರೆಬೇರೆ ಊರುಗಳಿಗೆ ಹೋಗಿ ಅವರು ಚಿತ್ರದ ಕುರಿತು ಪ್ರಚಾರ ಮಾಡಲಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ರವಿಶಂಕರ್‌ ಅವರು ಬಳಿಸಿರುವ ಒಂದು ಸ್ಕೂಟರ್‌ನ್ನು ಲಕ್ಕಿ ಡಿಪ್‌ನಲ್ಲಿ ವೀಕ್ಷಕರಿಗೆ ನೀಡುವ ಯೋಚನೆಯೂ ಚಿತ್ರತಂಡಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next