ಚಿಕ್ಕಮಗಳೂರು: ನಟ ಸುದೀಪ್ ಮಾಲೀಕತ್ವದ ಕಿಚ್ಚ ಪ್ರೊಡಕ್ಷನ್ ವತಿಯಿಂದ ನಿರ್ಮಿಸಲಾದ ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕೆ ಅಲಿಖೀತ ಒಪ್ಪಂದದ ಮೂಲಕ ಮನೆ ಮತ್ತು ತೋಟದ ಜಾಗ ಬಾಡಿಗೆ ನೀಡಿದ್ದು ಬಾಡಿಗೆ ಹಣವನ್ನು ನೀಡದೆ ವಂಚಿಸಿರುವ ಬಗ್ಗೆ ಸ್ಥಳಿಯ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆ ಮೇ 4ಕ್ಕೆ ನಡೆಯಲಿದೆ. ನಟ ಸುದೀಪ್ ತಮ್ಮ ಮೇಲಿನ ಪ್ರಕರಣಗಳು ಖುಲಾಸೆಯಾಗಿವೆ. ಯಾವುದೇ ಪ್ರಕರಣ ಬಾಕಿ ಇಲ್ಲವೆಂದು ಸುಳ್ಳು ಹೇಳಿದ್ದಾರೆ ಎಂದು ಮನೆ ಮಾಲೀಕ ದೀಪಕ್ ಮಯೂರ್ ಪಟೇಲ್ ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ವಾರಸ್ಥಾರ ಧಾರಾವಾಹಿ ಚಿತ್ರೀಕರಣಕ್ಕೆ ಕಿಚ್ಚ ಪ್ರೊಡಕ್ಷನ್ ವ್ಯವಸ್ಥಾಪಕ ಮಹೇಶ್ ತನ್ನ ಮನೆ ಹಾಗೂ ಜಾಗ ಕೇಳಿದ್ದು ಅಲಿಖೀತ ಒಪ್ಪಂದದ ಮೂಲಕ ಅನೇಕ ವರ್ಷಗಳ ಹಳೆಯದಾದ ತನ್ನ ಮನೆ ಹಾಗೂ ಜಾಗವನ್ನು ಧಾರಾವಾಹಿ ಚಿತ್ರೀಕರಣಕ್ಕೆ ಬಾಡಿಗೆ ನೀಡಿದ್ದೆ. ಮೂರು ತಿಂಗಳು ಧಾರಾವಾಹಿ ಚಿತ್ರೀಕರಣ ನಡೆಸಲಾಗಿದ್ದು, ಬಾಡಿಗೆ ಹಣದಲ್ಲಿ ಸ್ವಲ್ಪ ಭಾಗವನ್ನು ಮಾತ್ರ ನೀಡಿದ್ದ ವ್ಯವಸ್ಥಾಪಕರು ಬಾಕಿ ಮೊತ್ತವನ್ನು ನೀಡಿರಲಿಲ್ಲ. ಚಿಕ್ಕಮಗಳೂರು ನ್ಯಾಯಾಲಯದಲ್ಲಿ 420 ಪ್ರಕರಣ ದಾಖಲಿಸಿ ದಾಗ ಸುದೀಪ್ ಅವರು ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಖುಲಾಸೆಗೊಳಿಸಿಕೊಂಡಿದ್ದರು ಎಂದರು.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ಧಾರಾವಾಹಿ ಸಂಬಂಧ ತನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ. ದೀಪಕ್ ಮಯೂರ್ ಪಟೇಲ್ ಏನೇ ಹೇಳಿಕೆ ನೀಡಿದರೂ ಮಾನನಷ್ಟ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಆದರೆ ಸುದೀಪ್ ಮಾಲೀಕತ್ವದ ಕಿಚ್ಚ ಪ್ರೊಡಕ್ಷನ್ ಹಾಗೂ ಅದರ ವ್ಯವಸ್ಥಾಪಕನ ಮೇಲೆ ತನಗೆ ಬರಬೇಕಿದ್ದ ಬಾಕಿ ಹಣದ ವಿಚಾರವಾಗಿ 2020ರ ಮಾರ್ಚ್ ತಿಂಗಳಿನಲ್ಲಿ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆ ಮೇ 4ರಂದು ನಡೆಯಲಿದೆ ಎಂದರು.
ಕಿಚ್ಚ ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷ ನವೀನ್ ತನಗೆ ಜೀವ ಬೆದರಿಕೆ ಹಾಕಿದ್ದು, ಜಿಲ್ಲೆಯ ಎರಡನೇ ಹೆಚ್ಚುವರಿ ನ್ಯಾಯಾಲಯದಲ್ಲಿ 506ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ. ವಾರಸ್ಥಾರ ಧಾರಾವಾಹಿಗೆ ತನ್ನ ಮನೆ ಹಾಗೂ ಜಾಗವನ್ನು ಬಾಡಿಗೆಗೆ ಪಡೆದು ಬಾಕಿ ಬಾಡಿಗೆ ಹಣ ನೀಡದಿರುವ ಸಂಬಂಧ ಸುದೀಪ್ ಮೇಲೆ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇದ್ದರೂ ಸುದೀಪ್ ತನ್ನ ಮೇಲೆ ಯಾವುದೇ ಪ್ರಕರಣ ಇಲ್ಲ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಕೀಲ ಜಯರಾಮ್, ಸ್ವರೂಪ್ ಇದ್ದರು.