Advertisement
ಇಂದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಬಿಗ್ ಬಾಸ್ ಫಿನಾಲೆ ಮೆಗಾ ಶೋನಲ್ಲಿ ಈ ಕಾರ್ಯಕ್ರಮದ ನಿರೂಪಕ ಚಿತ್ರ ನಟ ಕಿಚ್ಚ ಸುದೀಪ್ ಅವರು ಶೈನ್ ಶೆಟ್ಟಿ ಅವರ ಹೆಸರನ್ನು ಘೋಷಿಸುತ್ತಿದ್ದಂತೆ ಬಿಗ್ ಬಾಸ್ ಸ್ಟೇಜ್ ಬಾಣ ಬಿರುಸುಗಳಿಂದ ತುಂಬಿಹೋಯಿತು. ಶೈನ್ ಹೆಸರು ಘೋಷಣೆಯಾಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಈ ಸೀಸನ್ ನ ಇತರೇ ಸ್ಪರ್ಧಿಗಳ ಹಾಗೂ ಪ್ರೇಕ್ಷಕರ ಭಾರೀ ಕರಾಡತನ ಸಭಾಂಗಣವನ್ನು ತುಂಬಿಕೊಂಡಿತು. ವಿಜೇತ ಶೈನ್ ಶೆಟ್ರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಟ್ರೋಫಿ ಹಾಗೂ 50 ಲಕ್ಷ ರೂ. ನಗದು ಬಹುಮಾನವನ್ನು ವಿತರಿಸಿದರು.
ಈ ಬಾರಿಯ ಬಿಗ್ ಬಾಸ್ ನಲ್ಲಿ 18 ಜನ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದರು. ಇವರಲ್ಲಿ ಜನಪ್ರಿಯ ಪತ್ರಕರ್ತ ರವಿ ಬೆಳಗೆರೆ, ಹಿರಿಯ ನಟ, ನಿರ್ಮಾಪಕ ಜೈ ಜಗದೀಶ್, ರಂಗಭೂಮಿ ಹಾಗೂ ಚಿತ್ರ ನಟ ರಾಜು ತಾಳಿಕೋಟೆ, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಿರೂಪಕಿ, ನಟಿ, ಸುಜಾತ ಅವರು ಪ್ರಮುಖರಾಗಿದ್ದರು. ಒಟ್ಟು 113 ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಪ್ರತೀ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ಮನೆಯಿಂದ ಹೊರ ಹೋಗುತ್ತಿದ್ದರು.
Related Articles
Advertisement
ಬಹುಮುಖ ಪ್ರತಿಭೆಯು ಶೈನ್ ಶೆಟ್ಟಿ ಅವರು ಸ್ಯಾಂಡಲ್‌ವುಡ್‌ನಲ್ಲಿ ಸಾಧನೆ ಮಾಡುವ ಗುರಿ-ಛಲದೊಂದಿಗೆ ಕಳೆದ 7 ವರ್ಷಗಳ ಹಿಂದೆ ಬೆಂಗಳೂರಿಗೆ ಪ್ರಯಾಣಿಸಿದರು. ಇವರಲ್ಲಿರುವ ನಟನಾ ಪ್ರತಿಭೆಗೆ ಆರಂಭದಲ್ಲೇ ಕಿರುತೆರೆಯಲ್ಲಿ ಅವಕಾಶಗಳು ಅರಸಿ ಬಂದವು. ‘ಮೀರಾ ಮಾಧವ’, ‘ಲಕ್ಷ್ಮೀ ಬಾರಮ್ಮ’, ‘ಮನೆದೇವ್ರು’, ‘ಕೋಗಿಲೆ’, ‘ಕನಕ’ ಮತ್ತಿತರ ಧಾರಾವಾಹಿಗಳಲ್ಲಿ ನಟಿಸಿ ಕರ್ನಾಟಕದ ಮನೆಮಾತಾದರು. ಉತ್ತಮ ಕಂಠಸಿರಿಯನ್ನೂ ಹೊಂದಿರುವ ಶೈನ್ ಅವರು ಸುವರ್ಣ ಸ್ಟಾರ್ ಸಿಂಗರ್ ಕಾರ್ಯಕ್ರಮದ ಫೈನಲ್ ಹಂತದವರೆಗೂ ತಲುಪಿದ್ದರು. ಶೈನ್ ಅವರು ‘ಕುಡ್ಲ ಕೆಫೆ’, ‘ರಂಗ್’ ಎಂಬ ಎರಡು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತುಳು ಚಿತ್ರರಂಗದಲ್ಲೂ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದ್ದಾರೆ.
ಇನ್ನುಳಿದಂತೆ ‘ಒಂದು ಮೊಟ್ಟೆಯ ಕಥೆ’, ‘ಅಸ್ತಿತ್ವ’, ‘ಜೀವನ ಯಜ್ಞ’, ‘ಕ’ ಮೊದಲಾದ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಿದ್ದಾರೆ. ಗಾಯಕರೂ, ಕಾರ್ಯಕ್ರಮ ನಿರೂಪಕರೂ ಆಗಿರುವ ಶೈನ್ ಶೆಟ್ರು ತಮ್ಮ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡವರು. ಕಠಿಣ ಪರಿಶ್ರಮದ ಮೂಲಕ ಚಿತ್ರರಂಗದಲ್ಲಿ ತನ್ನ ಛಾಪನ್ನು ಮೂಡಿಸುತ್ತಿರುವ ಕರಾವಳಿಯ ಈ ಪ್ರತಿಭೆಯ ಮುಡಿಗೆ ಇದೀಗ ಬಿಗ್ ಬಾಸ್ ಕಿರೀಟ ಲಭಿಸಿರುವುದು ಅವರ ಪ್ರತಿಭೆಗೆ ಸಿಕ್ಕಿದ ಮನ್ನಣೆಯಾಗಿದೆ.
ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ಎರಡನೇ ಸ್ಥಾನ ಗಳಿಸಿದ ಕುರಿ ಪ್ರತಾಪ್ ಮತ್ತು ತೃತೀಯ ಸ್ಥಾನ ಗಳಿಸಿದ ವಾಸುಕಿ ವೈಭವ್ ಅವರಿಗೆ ಅಭಿನಂದನೆಗಳು.