ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವಸಂತಗಳನ್ನು ಪೂರೈಸಿದ ಖುಷಿಯಲ್ಲಿರುವ ಬಹುಭಾಷಾ ನಟ ಕಿಚ್ಚ ಸುದೀಪ್, ಈಗ ಹಳ್ಳಿಯೊಂದರ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.
ಸಿನಿಮಾ ರಂಗದ ಜತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿರುವ ಕನ್ನಡ ಬಾದ್ ಷಾ ಸುದೀಪ್ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿಗೆ ಗ್ರಾಮಕ್ಕೆ ಕಾಯಕಲ್ಪ ಒದಗಿಸಲು ಮುಂದಾಗಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯ ಮೂಲಕ ಈ ಮಹತ್ವದ ಕಾರ್ಯ ಕೈಗೊಳ್ಳುತ್ತಿದ್ದಾರೆ.
ತಾಲ್ಲೂಕು ಕೇಂದ್ರದಿಂದ 70 ಕಿ.ಮೀ ದೂರದಲ್ಲಿರುವ ಈ ಗ್ರಾಮ ಶರಾವತಿ ಹಿನ್ನೀರಿನ ಪ್ರದೇಶ. ಈಗಾಗಲೇ ಗ್ರಾಮಕ್ಕೆ ಸರ್ಕಾರಿ ಶಾಲೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಸುರಕ್ಷಿತ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿವೆ.
ಆವಿಗೆ ಗ್ರಾಮಕ್ಕೆ ಕಿಚ್ಚ ಸುದೀಪ್ ಅವರು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ವಾಗ್ದಾನ ನೀಡಿದ್ದಾರೆ. ಪ್ರಮುಖವಾಗಿ ಸುಸಜ್ಜಿತವಾದ ರಸ್ತೆಗಳು, ಕಾಲು ಸಂಕ (ಕಿರು ತೂಗು ಸೇತುವೆ), ಶಾಲಾ ಹಾಗೂ ಅಂಗನವಾಡಿಗಳಿಗೆ ವ್ಯವಸ್ಥಿತವಾದ ಕಟ್ಟಡಗಳು, ನಿರಂತರ ವಿದ್ಯುತ್ ಸೌಲಭ್ಯ, ಹಾಗೂ ದೂರವಾಣಿ ಮತ್ತು ಅಂತರ್ಜಾಲ ಸಂಪರ್ಕ ಕಲ್ಪಿಸುವುದಾಗಿ ಕಿಚ್ಚ ಸುದೀಪ್ ಮಾತು ಕೊಟ್ಟಿದ್ದಾರೆ. ಈ ಕಾರ್ಯಗಳಿಗೆ ಇಂದಿನಿಂದಲೇ ಕಾರ್ಯೋನ್ಮುಖರಾಗಿದ್ದಾರೆ.
ಇದನ್ನೂ ಓದಿ:ಫೆ.18ರಿಂದ 21ರವರೆಗೆ ಉಡುಪಿ, ದಕ್ಷಿಣಕನ್ನಡ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಸುದೀಪ್ ಅವರು ಗ್ರಾಮ ದತ್ತು ಪಡೆಯುವುದು ಇದೇ ಮೊದಲು. ಆದರೆ, ಈ ಹಿಂದೆ ಹಲವು ಗ್ರಾಮಗಳಲ್ಲಿಯ ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದರು. ಈ ಮೂಲಕ ಅಕ್ಷರ ಕ್ರಾಂತಿಗೆ ಕೈ ಜೋಡಿಸಿದ್ದರು. ಆದರೆ, ಸದ್ಯ ಇಡೀ ಗ್ರಾಮವನ್ನೇ ದತ್ತು ಪಡೆದು, ಅಭಿವೃದ್ಧಿಯ ಬೆಳಕು ಮೂಡಿಸಲು ಹೊಸ ಹೆಜ್ಜೆ ಇಟ್ಟಿದ್ದಾರೆ.