ಚಿತ್ರದುರ್ಗ: ತಲೆ ಬುಡವಿಲ್ಲದ ಸಾಮಾಜಿಕ ಜಾಲತಾಣದ ಮೇಲೆ ಅವಲಂಬಿತರಾಗುವ ಬದಲು ಇಂದಿನ ತಾಂತ್ರಿಕ ಯುಗದಲ್ಲೂ ಮುದ್ರಣ ಮಾಧ್ಯಮ ನಂಬಿಕೆ ಉಳಿಸಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರತಿ ದಿನ ಕನಿಷ್ಟ ಎರಡು ಪತ್ರಿಕೆಗಳನ್ನಾದರೂ ಓದುವ ಅಭ್ಯಾಸ ಮಾಡಿಕೊಳ್ಳಿ ಎಂದು ರಾಜ್ಯ ಬಿಜೆಪಿ ವಕ್ತಾರ, ಮಾಜಿ ಶಾಸಕ, ನಟ ಜಗ್ಗೇಶ್ ಕರೆ ನೀಡಿದರು.
ಬಿಜೆಪಿಯ ದಾವಣಗೆರೆ ವಿಭಾಗದ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳ ತಾಲ್ಲೂಕು ಬಿಜೆಪಿ ಮಾಧ್ಯಮ ಸಂಚಾಲಕರು ಹಾಗೂ ಸಹ ಸಂಚಾಲಕರಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಮಾಧ್ಯಮ ಮಂಥನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕನಸುಗಳು ಸಾಕಾರಗೊಳ್ಳಲು ಮಾಧ್ಯಮ ಅತಿ ಮುಖ್ಯ. ಶರವೇಗದಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿರುವ ಸಾಮಾಜಿಕ ಜಾಲತಾಣದಿಂದ ಮುದ್ರಣ ಮಾಧ್ಯಮ ಸಂಕಷ್ಟಕ್ಕೊಳಗಾಗಿದೆ. ಆದರೆ ತನ್ನ ಶಕ್ತಿಯನ್ನು ಕಳೆದುಕೊಂಡಿಲ್ಲ. ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಿಸಿಕೊಂಡಿರುವುದು ನಮ್ಮ ಪ್ರಧಾನಿ ನರೇಂದ್ರ ಮೋದಿ ಮಾತ್ರ. ಇದು ಸ್ಪರ್ಧಾತ್ಮಕ ಯುಗ, ಆದರೆ ಯಾವ ಕಾರಣಕ್ಕೂ ಉದ್ವೇಗ, ದ್ವೇಷದ ಮನೋಭಾವ ಬೇಡ. ಯಾರನ್ನೂ ಉತ್ಪ್ರೆಕ್ಷೆ, ಅಣಕ ಮಾಡಬಾರದು. ಬಿಜೆಪಿ ಶ್ರದ್ಧೆಯಿಂದ ಕಟ್ಟಿದ ಪಕ್ಷ. ಇಲ್ಲಿ ಕಲಿಯುವ ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದರು.
ನಡೆ-ನುಡಿ ಸರಿಯಿದ್ದರೆ ದೇವರು ಕೈಹಿಡಿದು ನಡೆಸುತ್ತಾನೆ. ಆರಂಭದಲ್ಲಿ ಏನೂ ಅರಿವಿಲ್ಲದೆ ಕಾಂಗ್ರೆಸ್ ಸೇರಿ ಇದ್ದ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಮಂತ್ರಾಲಯದ ರಾಘವೇಂದ್ರಸ್ವಾಮಿ ಸನ್ನಿ ಧಿಗೆ ಹೋಗಿ ಕಣ್ಣೀರು ಸುರಿಸಿದೆ. ಅಲ್ಲಿಂದ ಲಕ್ಷಾಂತರ ಅಭಿಮಾನಿಗಳು ನನ್ನನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಸ್ಪರ್ಧಿಸುವಂತೆ ಒತ್ತಾಯಿಸಿ ಗೆಲ್ಲಿಸಿದರು ಎಂದು ಸ್ಮರಿಸಿಕೊಂಡರು.
ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಮಾಧ್ಯಮ ಮತ್ತು ರಾಜಕೀಯದ ನಡುವೆ ಸಂಘರ್ಷ-ಸಾಮರಸ್ಯದ ಸಂಬಂಧವಿದೆ. ತಾಜಾ ಸುದ್ದಿಗಳನ್ನು ಕೊಡುವುದು ಅನಿವಾರ್ಯ. ರಾಜಕಾರಣಿಗಳು ಒಳ್ಳೆಯದು ಮಾಡಿದಾಗ ಬೆನ್ನು ತಟ್ಟುವುದು, ಕೆಟ್ಟದ್ದನ್ನು ಮಾಡಿದಾಗ ಎಚ್ಚರಿಸುವ ಜವಾಬ್ದಾರಿ ಮಾಧ್ಯಮದ ಮೇಲಿದೆ ಎಂದು ತಿಳಿಸಿದರು.
ಹಾಲಾಹಲದ ರಾಜಕಾರಣದಲ್ಲಿ ಸತ್ಯವನ್ನೇ ತೋರಿಸಬೇಕು. ಬಿಜೆಪಿ ನಿಮ್ಮನ್ನು ಸೈನಿಕರಂತೆ ಸಿದ್ಧಗೊಳಿಸುತ್ತಿದೆ. ಪಕ್ಷದ ವಾಗ್ಧಾನ ಜಾರಿಗೊಳಿಸಬೇಕಾದರೆ ಮಾಧ್ಯಮ ಸಂಚಾಲಕರು, ಸಹ ಸಂಚಾಲಕರು ಮಾಹಿತಿ ವಿನಿಮಯ ಮಾಡಿಕೊಳ್ಳುವಲ್ಲಿ ಮಾಧ್ಯಮದವರೊಡನೆ ಆರೋಗ್ಯಪೂರ್ಣ ಸಂಬಂಧ ಇಟ್ಟುಕೊಂಡು ಸಮಾಜಮುಖೀಯಾಗಿ ಕೆಲಸ ಮಾಡಬೇಕು ಎಂದರು.
ಆಳುವ ಸರ್ಕಾರಗಳು ಮದಗಜದಂತೆ. ಕಾಲ ಕಾಲಕ್ಕೆ ಅಂಕುಶ ಹಾಕಿ ಪಳಗಿಸುವ ಕೆಲಸ ಮಾಧ್ಯಮ ಮಾಡಬೇಕಿದೆ. ಪ್ರತಿಭೆ, ಬದ್ಧತೆ ಇದ್ದರೆ ಎಂತಹ ಕಠಿಣ ಹಾದಿ ಇದ್ದರೂ ಯಶಸ್ಸಿನ ತುತ್ತ ತುದಿ ಏರಬಹುದು ಎಂದು ತಿಳಿಸಿದರು. ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್, ರಾಜ್ಯ ಮಾಧ್ಯಮ ಸಂಚಾಲಕರಾದ ಅವಿನಾಶ್, ಕೆಂಡೋಜಿ, ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ನವೀನ್, ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ಮತ್ತಿತರರು ಭಾಗವಹಿಸಿದ್ದರು. ಡಿ.ಒ. ಮುರಾರ್ಜಿ ಪ್ರಾರ್ಥಿಸಿದರು. ಕೊಪ್ಪಳ ನಾಗರಾಜ್ ಸ್ವಾಗತಿಸಿದರು. ವಕ್ತಾರ ನಾಗರಾಜ್ ಬೇದ್ರೆ ನಿರೂಪಿಸಿದರು.