ಬೆಂಗಳೂರು: ಕೋವಿಡ್ ಮಹಾಮಾರಿಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಆ್ಯಂಬುಲೆನ್ಸ್ ಹಾಗೂ ಚಿತಾಗಾರದ ಸಿಬ್ಬಂದಿಗಳು ಹಣ ಪೀಕುತ್ತಿರುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ.
ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಬಿಬಿಎಂಪಿಯವರೇ ಮಾಡಬೇಕು. ಆದರೆ, ಈ ನಿಯಮ ಗಾಳಿಗೆ ತೂರಿರುವ ಕೆಲವರು, ಕೋವಿಡ್‍ನಿಂದ ಬಲಿಯಾದವರ ಶವಗಳ ಮೇಲೆ ಹಣದ ದಂಧೆಗೆ ಇಳಿದಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೀಗ ಸ್ವತಃ ಕನ್ನಡದ ನಟ ನವರಸ ನಾಯಕ ಜಗ್ಗೇಶ್ ಅವರೇ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಕೋವಿಡ್ ನಿಂದ ಬಲಿಯಾದ ಜಗ್ಗೇಶ್ ಅವರ ಸ್ನೇಹಿತರ ಅಂತ್ಯ ಸಂಸ್ಕಾರಕ್ಕೆ 30 ಸಾವಿರ ರೂ. ಪಡೆದಿದ್ದಾರಂತೆ. ಈ ಕೃತ್ಯದ ವಿರುದ್ಧ ಟ್ವಿಟರಿನಲ್ಲಿ ಹರಿಹಾಯ್ದಿರುವ ಜಗ್ಗೇಶ್, ಕೋವಿಡ್ ಸಂತ್ರಸ್ತರು ನೊಂದು ಟಿವಿಯಲ್ಲಿ ಮಾತಾಡಿದ್ದು ನೋಡಿ ಸಂಕಟವಾಯ್ತು. ಆಸ್ಪತ್ರೆ, ಆ್ಯಂಬುಲೆನ್ಸ್, ಔಷಧಿ ಅಂಗಡಿ, ಸ್ಮಶಾನ ಕಾರ್ಯಕರ್ತರು ಹಣಕ್ಕಾಗಿ ಸಾಯಬೇಡಿ. ನೊಂದವರನ್ನು ಪೀಡಿಸಬೇಡಿ. ನೀವು ತಿನ್ನಲು ಅನ್ನ ಸಿಗದೆ ಸಾಯುತ್ತೀರಿ. ನೊಂದವರಿಗೆ ಭುಜ ಕೊಟ್ಟು ಸಹಾಯಮಾಡಿ. ಸತ್ತರೆ ಹಣ ಬರೋಲ್ಲಾ ಪಾಪಪುಣ್ಯ ಮಾತ್ರ ನಮ್ಮಹಿಂದೆ ಬರೋದು.ದೇವನೊಬ್ಬನಿರುವ ಎಲ್ಲ ನೋಡುತಿರುವನು ಎಂದು ಖಾರವಾಗಿ ನುಡಿದಿದ್ದಾರೆ.
ಜಗ್ಗೇಶ್ ಅವರ ಬಂಧುಗಳು ಹಾಗೂ ಸ್ನೇಹಿತರಿಗೆ ಕೋವಿಡ್ ಖಾಯಿಲೆ ಬಂದಿದೆಯಂತೆ. ಅವರ ಪೈಕಿ ಇಬ್ಬರು ಶುಕ್ರವಾರ ಹಾಗೂ ಗುರುವಾರ ತೀರಿಹೋಗಿದ್ದಾರೆ. 3 ಜನ ನರಳುತ್ತಿದ್ದಾರೆ. ಎದ್ದು ಹೋಗಿ ಸಹಾಯ ಮಾಡಲು ಆಗದು ಅಂತ ದರಿದ್ರ ಈ ಖಾಯಿಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ತನ್ನ ಬಂಧುಗಳ ಹೆಣ ಸಂಸ್ಕಾರಕ್ಕೆ ನಾಯಿಗಳಂತೆ 30 ಸಾವಿರ ಹಣ ಪೀಕಿದ ಆಂಬುಲೆನ್ಸ ಹಾಗು ಸ್ಮಶಾನದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಅನ್ನಿಸಿತು. ಇಂಥವರಿಂದ ಸರ್ಕಾರಕ್ಕೆ ಕೆಟ್ಟಹೆಸರು ನೋವು ಭರಿತ ಆಕ್ರೋಶ ಹೊರ ಹಾಕಿದ್ದಾರೆ.