ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ (Sandalwood) ಒಳ್ಳೆಯ ಸಿನಿಮಾಗಳಿಗೆ ಬರಗಾಲ ಬಂದಿದೆ. ಯಾವುದೇ ಕನ್ನಡ ಸಿನಿಮಾಗಳು (Kannada Movies) ಬಂದರೆ ಅದು ಕಷ್ಟಪಟ್ಟು ಥಿಯೇಟರ್ ನಲ್ಲಿ ಎರಡು ವಾರವೂ ಉಳಿಯುವುದು ಅಪರೂಪವಾಗಿಬಿಟ್ಟಿದೆ.
‘ಕೆಜಿಎಫ್’ ‘ಕಾಂತಾರ’, ‘777 ಚಾರ್ಲಿ’ , ಕಾಟೇರ’ ದಂತಹಗಳ ಸಿನಿಮಾಗಳಿಂದ ಚಂದನವನ ಹೊಸ ಹಾದಿಯಲ್ಲಿ ಸಾಗುತ್ತಿದೆ ಎಂದು ಭಾವಿಸಲಾಗಿತ್ತು. ಇತರೆ ಭಾಷಾ ಸಿನಿಮಂದಿಯೂ ಕನ್ನಡ ಸಿನಿಮಾಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದರು. ಆದರೆ ಇದೆಲ್ಲವೂ ಒಂದು ಕ್ಷಣಿಕಕಾಲದವರೆಗೆ ಮಾತ್ರ ಎನ್ನುವಂಥ ಸ್ಥಿತಿ ಬಂತು.
ಕೊನೆಯ ಸಲಿ ಕನ್ನಡದಲ್ಲಿ ‘ಕಾಟೇರ’ ದೊಡ್ಡ ಹಿಟ್ ತಂದುಕೊಟ್ಟಿತು. ಇದಾದ ನಂತರ ಒಳ್ಳೆಯ ಸಿನಿಮಾಗಳು ಕನ್ನಡದಲ್ಲಿ ಬರಲಿಲ್ಲ ಎಂದೇನಿಲ್ಲ. ಒಳ್ಳೆಯ ಕಂಟೆಂಟ್ ವುಳ್ಳ ಸಿನಿಮಾಗಳು ಬಂದಿವೆ. ಆದರೆ ಜನ ಥಿಯೇಟರ್ ಗೆ ಬಂದು ನೋಡುವುದನ್ನೇ ಕಮ್ಮಿ ಮಾಡಿದರೆ ಎನ್ನುವ ಮಟ್ಟಿಗೆ ಕನ್ನಡ ಸಿನಿಮಾಗಳ ಸ್ಥಿತಿ ಬಂದು ತಲುಪಿರುವುದು ದುಃಖದ ವಿಚಾರವೇ ಸರಿ.
ಕಳೆದ ಕೆಲ ವರ್ಷಗಳಿಂದ ಕನ್ನಡ ಸಿನಿಮಾಗಳ ಸ್ಥಿತಿ ಈ ಮಟ್ಟಿಗೆ ಇಳಿದಿರುವ ಬಗ್ಗೆ ಮಾತನಾಡುತ್ತಾ ಹಿರಿಯ ನಟ, ನವರಸ ನಾಯಕ ಜಗ್ಗೇಶ್ (Actor Jaggesh) ಭಾವುಕರಾಗಿದ್ದಾರೆ.
‘ಕಾಮಿಡಿ ಕಿಲಾಡಿಗಳು ಪ್ರಿಮಿಯರ್ ಲೀಗ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಂದು ಮೂರು – ನಾಲ್ಕು ವರ್ಷಗಳಿಂದ ಎಲ್ಲವೂ ನಾಶವಾಗಿದೆ. ಎಲ್ಲರೂ ಒಳ್ಳೆಯ ಪಿಕ್ಚರ್ ಮಾಡುತ್ತಾ ಇದ್ದಾರೆ. ಕೆಟ್ಟ ಪಿಕ್ಚರ್ ಯಾರು ಮಾಡುತ್ತಾ ಇಲ್ಲ. ಸಿನಿಮಾಗಳ ಬಗ್ಗೆ ಟಿವಿ, ಪೇಪರ್ ಗಳು ಜಾಹೀರಾತುಗಳನ್ನು ಕೊಡುತ್ತವೆ. ಆದರೆ ಸಿನಿಮಾ ಥಿಯೇಟರ್ ಗೆ ಬಂದಾಗ ಜನವೇ ಬರಲ್ಲ. ಯಾಕೆ ಹೀಗಾಯಿತು. ಕನ್ನಡವೇ ಹೀಗೆ ಅಂದರೆ ಸತ್ಯವಾಗಲೂ ಅಲ್ಲ. ಏನು ಆಗ್ತಾ ಇದೆ. ನಾವು ಹೇಗೆ ಸಿನಿಮಾ ಮಾಡುವುದು. ಜನ ಬರ್ತಾ ಇಲ್ಲ ಅಂತಾರೆ. ಅಕ್ಷಯ್ ಕುಮಾರ್ ಅವರದು ಕೋಟ್ಯಂತರ ರೂ. ಹಾಕಿ ಮಾಡಿದ ಸಿನಿಮಾ ನಾಶವಾಗಿದೆ. ಇಡೀ ಇಂಡಿಯಾದ ಸಿನಿಮಾ ವಾಶ್ ಔಟ್ ಆಗಿದೆ” ಎಂದಿದ್ದಾರೆ.
“ಈಗ ಯಾವ ಸ್ಥಿತಿ ಬಂದಿದೆ ಎಂದರೆ 200 ಕೋಟಿ ರೂ. ಹಾಕಿ ಸಿನಿಮಾ ಮಾಡಿದರೆ ಅದು ಸಿನಿಮಾ. ಯಾರು ಒಳ್ಳೆ ಕಥೆ ಮಾಡಿ, ಸಣ್ಣಪುಟ್ಟ ಸಿನಿಮಾ ಮಾಡುತ್ತಾರೋ ಅದು ಸಿನಿಮಾವಲ್ಲ. ನನ್ನ ಅಣ್ಣ ತಮ್ಮಂದಿರು, ಒಡಹುಟ್ಟಿದವರು ಪಿಕ್ಚರ್ ರಿಲೀಸ್ ಆದಾಗ, ಇದೊಂದು ದರಿದ್ರ ಪಿಕ್ಚರ್, ಇದೊಂದು ಕಿತ್ತೋಗಿರುವ ಪಿಕ್ಚರ್, ಇದನ್ನು ನೋಡೋದು ವೇಸ್ಟ್ ಅಂತ ತಮ್ಮ ಶ್ರಮವನ್ನು ಹಾಕಿ ಇನ್ನೊಬ್ಬರ ಲೈಫ್ ನ ಹಾಳು ಮಾಡ್ತಾರೆ ಅದನ್ನು ನೋಡಿ ಬರುವವರು ಇರುತ್ತಾರೆ. ಎಲ್ಲರೂ ಚೆನ್ನಾಗಿರಲಿ ನಾವು ಯಾರಿಗೂ ಕೆಟ್ಟದು ಬಯಸೋದು ಬೇಡ. ನಿಮಗೆ ಬೇಜಾರ್ ಆಗಿ ಸಮಯವೇ ಹೋಗ್ತಾ ಇಲ್ಲ ಅಂದಾಗ ಯೂಟ್ಯೂಬ್ ನಲ್ಲಿ ಒಂದು ಸೀನ್ ನೋಡುತ್ತೀರಿ ಅದು ನನ್ನ ಸಿನಿಮಾ. ನನ್ನ ಬಟ್ಟೆ, ಕನಸು, ನನ್ನ ಊಟ ಸಿನಿಮಾ ಕೊಟ್ಟಿದ್ದು. ಹಾಗಾಗಿ ನಾನು ಸಿನಿಮಾವನ್ನು ತಾಯಿ ಥರಾ ಪ್ರೀತಿಸುತ್ತೇನೆ” ಎಂದು ಜಗ್ಗೇಶ್ ಭಾವುಕರಾಗಿದ್ದಾರೆ.
ಸದ್ಯ ಜಗ್ಗೇಶ್ ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.