ಬೆಂಗಳೂರು : ಚಂದನವನದ ನಟ ದುನಿಯಾ ವಿಜಯ್, ಕೋವಿಡ್ ಮಹಾಮಾರಿಗೆ ಸಿಲುಕಿಕೊಂಡಿದ್ದ ತಮ್ಮ ತಂದೆ-ತಾಯಿಯನ್ನು ಸತತ ಪ್ರಯತ್ನದಿಂದ ಕಾಪಾಡಿಕೊಂಡಿದ್ದಾರೆ. ಮಹಾಮಾರಿಗೆ ಸೆಡ್ಡು ಹೊಡೆದು ಪೋಷಕರನ್ನು ಬದುಕಿಸಿಕೊಂಡಿದ್ದಾರೆ.
ವಿಜಯ್ ಅವರ 80 ವರ್ಷ ವಯಸ್ಸಿನ ತಂದೆ ಹಾಗೂ 76 ವಯಸ್ಸಿನ ತಾಯಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿತ್ತು. ಎಷ್ಟೇ ಪ್ರಯತ್ನ ಪಟ್ಟರು ಆಕ್ಸಿಜನ್ ಬೆಡ್ ಸಿಗದೆ ಹೋದಾಗ ವಿಜಯ್ ಅವರಲ್ಲಿ ಒಂದು ಕ್ಷಣ ಏನೂ ತೋಚದಂತಾಗಿತ್ತು. ನಂತರ ತನ್ನ ಪ್ರಾಣ ಹೋದರೂ ಸರಿ ಅಪ್ಪ-ಅಮ್ಮನನ್ನು ಬದುಕಿಸಿಕೊಳ್ಳಬೇಕೆಂದು ಪಣ ತೊಟ್ಟ ಅವರು, ಪರಿಚಿತ ವೈದ್ಯ ವಿದ್ಯಾನಂದ ಅವರ ಸಲಹೆ ಮೆರೆಗೆ ಮನೆಯಲ್ಲಿಯೆ ಚಿಕಿತ್ಸೆ ಪ್ರಾರಂಭಿಸಿದರು.
ವಿಜಯ್ , ಅವರ ಮಗ ಮತ್ತು ಕೀರ್ತಿ ಮೂರು ಜನ ತಂದೆ ತಾಯಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಕ್ರೂರಿ ಕೊರೋನಾ ಜೊತೆ ಸೆಣೆಸಾಡಲು ನಿಂತರು. ಈಗಾಗಲೇ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಿಜಯ್ ಅವರ ತಂದೆಯವರನ್ನು ಕೊರೋನಾ ತುಂಬಾ ಬಳಲುವಂತೆ ಮಾಡಿತು. ಅವರ ತಾಯಿ ಎರಡು ಮೂರು ದಿನದಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿದರು. ಈ ನಡುವೆ ಪ್ರತಿ ದಿನ ವಿಡಿಯೋ ಕಾಲ್ ಮೂಲಕ ವೈದ್ಯರು ಚಿಕಿತ್ಸೆಯನ್ನು ಹೇಳುತ್ತಿದ್ದರು ಮತ್ತು ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ತಂದೆಯ ಆರೋಗ್ಯ ಮಾತ್ರ ದಿನದಿಂದ ದಿನಕ್ಕೆ ಬಿಗಡಾಯಿಸಲು ಪ್ರಾರಂಭಿಸಿತು. ಅವರು ಬದುಕುವುದು ಅನುಮಾನ ಎನ್ನುವ ಭಾವನೆ ಕೂಡ ವಿಜಯ್ ಅವರಲ್ಲಿ ಮೂಡಿತು.
ಮೊದಲು ವಿಜಯ ಅವರ ತಾಯಿ ಚೇತರಿಸಿಕೊಂಡು ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖರಾದರು. ತಂದೆ ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಾ ಬಂದರು. ಅವರು ಕೂಡ ಕೋವಿಡ್ ಗೆದ್ದು ಬಂದಿದ್ದಾರೆ.
ಕೋವಿಡ್ ವಿರುದ್ಧ ಸೆಣಸಿದ ರೋಚಕ ಕತೆಯನ್ನು ವಿಜಯ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಕೊರೋನಾ ಬಂತು ಎಂದು ಧೃತಿಗೆಡಬೇಡಿ, ತಂದೆ-ತಾಯಿಯರನ್ನು ಕೈಬಿಡಬೇಡಿ. ನನ್ನ ತಂದೆ-ತಾಯಿ ಬದುಕಿದ್ದಾರೆ ಎಂಬ ಖುಷಿಯಿಂದ ಈ ಘಟನೆಯನ್ನು ಹಂಚಿಕೊಳ್ಳುತ್ತಿಲ್ಲ, ಎಷ್ಟೋ ಜನ ನನ್ನ ರೀತಿ ಸೇವೆ ಮಾಡಿ ತಂದೆತಾಯಿಯನ್ನು ಕಳೆದುಕೊಂಡವರಿದ್ದಾರೆ.ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ಸಕಾರಾತ್ಮಕವಾಗಿ ಯೋಚಿಸಿ ಈ ಕೊರೊನಾ ವಿರುದ್ಧ ಗೆಲ್ಲೋಣ. ಜತೆಗೆ ನನ್ನ ಜೀವನದಲ್ಲಿ ನಡೆದ ಈ ಘಟನೆ ಕೆಲವರಿಗೆ ಸ್ಪೂರ್ತಿಯಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಹಂಚಿಕೊಂಡಿದ್ದೇನೆ. ಏನಾದರೂ ತಪ್ಪಾಗಿದ್ದರೆ ಕ್ಷಮೆಯಿರಲಿ ಎಂದಿದ್ದಾರೆ.