Advertisement

ನಟ ದುನಿಯಾ ವಿಜಯ್‌ ಬಂಧನ, ಬಿಡುಗಡೆ​​​​​​​

07:00 AM Jun 09, 2018 | Team Udayavani |

ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ನಟ ದುನಿಯಾ ವಿಜಯ್‌ರನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ತಮಿಳುನಾಡು-ಕರ್ನಾಟಕ ಗಡಿ ಭಾಗದ ಬಂಡಿಪುರ ಸಮೀಪದ ರೆಸಾರ್ಟ್‌ ವೊಂದರಲ್ಲಿ ತಂಗಿದ್ದ ವಿಜಯ್‌ರನ್ನು ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ನಿರೀಕ್ಷಣಾ ಜಾಮೀನು ಪಡೆದ ವಿಜಯ್‌ಗೆ ಕಾನೂನು ಪ್ರಕ್ರಿಯೆ ಮುಗಿಸಿ ಸಂಜೆ ವೇಳೆಗೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ವಿಜಯ್‌ ಯಾರ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದರು.
ಮತ್ತೂಂದೆಡೆ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ತೀರ್ಪನ್ನು ಕೋರ್ಟ್‌ ಶುಕ್ರವಾರಕ್ಕೆ ಕಾಯ್ದಿರಿಸಿತ್ತು. ಕೋರ್ಟ್‌ ತೀರ್ಪಿಗೂ ಮುನ್ನವೇ ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ವಿಜಯ್‌ರನ್ನು ಬಂಧಿಸಿದ್ದರು.
2016ರಲ್ಲಿ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ “ಮಾಸ್ತಿಗುಡಿ’ ಸಿನಿಮಾ ಚಿತ್ರೀಕರಣದ ವೇಳೆ ಖಳನಟರಾದ ಉದಯ್‌ ಮತ್ತು ಅನಿಲ್‌ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ನಿರ್ಮಾಪಕ ಸುಂದರ್‌ ಪಿ.ಗೌಡರ ಮೇಲೆ ರಾಮನಗರ ಜೆಎಂಎಫ್ಸಿ ಕೋರ್ಟ್‌ ವಾರೆಂಟ್‌ ಜಾರಿ ಮಾಡಿತ್ತು. ಹೀಗಾಗಿ ತಾವರೆಕೆರೆ ಪೊಲೀಸರು ನಿರ್ದೇಶಕ
ಸುಂದರ್‌ ಪಿ. ಗೌಡನನ್ನು ಬಂಧಿಸಲು ಮೇ 30ರ ತಡರಾತ್ರಿ ನಗರಕ್ಕೆ ಬಂದಿದ್ದರು. ಆದರೆ,ಈ ವಿಚಾರ ತಿಳಿದ ವಿಜಯ್‌, ಸುಂದರ್‌ ಗೌಡರನ್ನು ಬಂಧಿಸದಂತೆ ಪೊಲೀಸರನ್ನು ತಡೆದಿದ್ದರು. ಆಗ ಸುಂದರ್‌ ಮನೆಯ ಹಿಂಬಾಗಿಲಿಂದ ಪರಾರಿಯಾಗಿದ್ದರು.

ಅಲ್ಲದೆ, ಸುಂದರ್‌ ಗೌಡ ತಾಯಿಗೆ ಅನಾರೋಗ್ಯ ಸಮಸ್ಯೆಯಿದೆ. ಮರುದಿನ ತಾವೇ ಠಾಣೆಗೆ ಕರೆತರುವುದಾಗಿ ವಿಜಯ್‌ ಮಧ್ಯಸ್ಥಿಕೆ ವಹಿಸಿದ್ದರು. ಖುದ್ದು ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು.

ಹೀಗಾಗಿ ತಾವರೆಕೆರೆ ಹೆಡ್‌ಕಾನ್‌ಸ್ಟೆಬಲ್‌ ಗೋವಿಂದರಾಜು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next