“ದಿಯಾ’ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ದೀಕ್ಷಿತ್ ಶೆಟ್ಟಿ “ದಸರಾ’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸಿನಿ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಗೆಳೆಯನಿಗೆ “ದಸರಾ’ದಲ್ಲಿ ಬಣ್ಣ ಹಚ್ಚಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿರುವ ಈ ಚಾಕ್ಲೇಟ್ ಹೀರೋ, ಈಗ ಮಲಯಾಳಂ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ.
ಹೌದು, ದೀಕ್ಷಿತ್ ಶೆಟ್ಟಿ ಮೊದಲ ಬಾರಿಗೆ ಮಲೆಯಾಳಂನಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ “ಒಪ್ಪೀಸ್’ ಎಂದು ಹೆಸರಿಡಲಾಗಿದೆ. ಪ್ಯಾರಾ ಸೈಕಲಾಜಿಕಲ್ ಕಥಾಹಂದರ ಹೊಂದಿರುವ “ಒಪ್ಪೀಸ್’ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ಕೇರಳದಲ್ಲಿ ಸರಳವಾಗಿ ನಡೆದಿದೆ.
10 ವರ್ಷಗಳ ಕಾಲ ವಿದೇಶದಲ್ಲಿದ್ದ ವ್ಯಕ್ತಿ ತಾನು ಹುಟ್ಟಿ ಬೆಳೆದ ಕೇರಳಗೆ ವಾಪಸ್ ಆದಾಗ ಏನಾಗುತ್ತದೆ ಎಂಬುದೇ ಈ ಸಿನಿಮಾದ ಕಥೆಯ ತಿರುಳು. ಇದೇ ಫೆಬ್ರವರಿಯಿಂದ “ಒಪ್ಪೀಸ್’ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸೌಜನ್ ಜೋಸೆಫ್ ಈ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, “ಒಪ್ಪೀಸ್’ ಸಿನಿಮಾದ ಹಾಡುಗಳಿಗೆ ಎಂ. ಜಯಚಂದ್ರನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಪ್ರದ್ಯುಮನ್ಹಾ ಕೊಳ್ಳೇಕಾಲ ಈ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಬಂದು “ದಿಯಾ’ ಚಿತ್ರದ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದ ಸ್ಪುರದ್ರೂಪಿ ನಟ ದೀಕ್ಷಿತ್ ಶೆಟ್ಟಿ. ಸದ್ಯ ಅವರೀಗ ಕನ್ನಡದಲ್ಲಿ ಅಭಿನಯಿಸಿರುವ “ಕೆಟಿಎಂ’ ಫೆಬ್ರವರಿಯಲ್ಲಿ ಬಿಡುಗಡೆಯಾಗುತ್ತಿದೆ.
ಇದರ ಮತ್ತೂಂದು ಸಿನಿಮಾ “ಬ್ಲಿಂಕ್’ ಕೂಡ ಮಾರ್ಚ್ 8ಕ್ಕೆ ಬಿಡುಗಡೆಯಾಗುತ್ತಿದೆ. ಇದರ ಹೊರತಾಗಿ ದೀಕ್ಷಿತ್ ಶೆಟ್ಟಿ ತೆಲುಗಿನಲ್ಲಿ ಅಲ್ಲು ಅರವಿಂದ್ ಪ್ರಸೆಂಟ್ ಮಾಡುತ್ತಿರುವ “ಗರ್ಲ್ ಫ್ರೆಂಡ್’ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ಹೆಚ್. ಕೆ. ಪ್ರಕಾಶ್ ನಿರ್ಮಾಣದ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾದಲ್ಲಿಯೂ ದಿಯಾ ಹೀರೋ ಬಣ್ಣ ಹಚ್ಚುತ್ತಿದ್ದಾರೆ. ಇವೆಲ್ಲದರ ಜೊತೆಗೆ ದೀಕ್ಷಿತ್ ನಟನೆಯ ಮತ್ತೂಂದು ತಮಿಳು ಸಿನಿಮಾ ಕೂಡ ತೆರೆಗೆ ಬರಲು ಅಣಿಯಾಗಿದೆ.