Advertisement

ಪತ್ನಿ ಮೇಲೆ ಹಲ್ಲೆ To ನಿರ್ಮಾಪಕರ ಜೊತೆ ತಗಾದೆ.. ದರ್ಶನ್‌ ವಿವಾದದ ಸುತ್ತ ಒಂದು ಸುತ್ತು..

02:20 PM Jun 11, 2024 | ಸುಹಾನ್ ಶೇಕ್ |

ರೇಣುಕಾಸ್ವಾಮಿ ಎನ್ನುವವರ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅರೆಸ್ಟ್‌ ಆಗಿದ್ದಾರೆ. ಅವರ ಅಭಿಮಾನಿಗಳಿಗೆ ಇದೊಂದು ಬಿಗ್‌ ಶಾಕಿಂಗ್‌ ವಿಚಾರ. ಇತ್ತೀಚೆಗೆ ʼಕಾಟೇರʼ ಸಿನಿಮಾದ ಮೂಲಕ ಮತ್ತೆ ಬಾಕ್ಸ್‌ ಆಫೀಸ್‌ ಸುಲ್ತಾನ್‌ ಆಗಿ ಅಬ್ಬರಿಸಿ, ʼಡೆವಿಲ್‌ʼ ಮೂಲಕ ಮತ್ತೊಂದು ಹಿಟ್‌ ಕೊಡುವ ತಯಾರಿಯಲ್ಲಿದ್ದ ದರ್ಶನ್‌ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವುದು ನಿಜಕ್ಕೂ ಶಾಕಿಂಗ್‌ ವಿಚಾರವೇ ಸರಿ.

Advertisement

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ವಿವಾದದಿಂದ ಮುಕ್ತಗೊಂಡು ಹೊರಬಂದರೂ, ವಿವಾದ ಮಾತ್ರ ಅವರ ಬೆನ್ನು ಬಿಟ್ಟಿಲ್ಲ ಎನ್ನುವುದಕ್ಕೆ ರೇಣುಕಾಸ್ವಾಮಿ ಕೇಸ್ ಮತ್ತೊಂದು ಉದಾಹರಣೆಯಾಗಿದೆ. ದರ್ಶನ್‌ ಆನ್‌ ಸ್ಕ್ರೀನ್ ಮಾಸ್‌ ಹೀರೋ ಆಗಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದ್ದರೋ, ಆಫ್‌ ಸ್ಕ್ರೀನ್‌ ವಿವಾದದಿಂದಲೂ ಸುದ್ದಿಯಾಗಿದ್ದಾರೆ.

ದರ್ಶನ್‌ ಸುತ್ತ ಕೇಳಿ ಬಂದ ವಿವಾದಗಳು ಒಂದೆರಡಲ್ಲ.. ಇಲ್ಲಿದೆ ದರ್ಶನ್‌ ಅವರ ವಿವಾದಗಳು

ಪತ್ನಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ನಟ: 2011 ರಲ್ಲಿ ನಟ ದರ್ಶನ್‌ ಅವರ ಕೌಟುಂಬಿಕ ಕಲಹ ವಿಚಾರ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. 2011 ರ ಸೆ.8 ರಂದು ದರ್ಶನ್‌ ಪತ್ನಿ ವಿಜಯಲಕ್ಷ್ಮೀ  ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಸಂಬಂಧ ಅವರ ಪತ್ನಿ ಠಾಣೆಗೆ ದೂರು ನೀಡಿದ್ದರು. ಬಳಿಕ ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ್ದರು. ನಟ ದರ್ಶನ್‌ 28 ದಿನಗಳ ಕಾಲ ಜೈಲಿನಲ್ಲಿದ್ದರು. ಈ ಪ್ರಕರಣದಲ್ಲಿ ನಟಿ ನಿಖಿತಾ ತುಕ್ರಾಲ್ ಹೆಸರು ಕೇಳಿ ಬಂದಿತ್ತು. ಆ ಬಳಿಕ ಪ್ರಕರಣ ರಾಜಿ ಸಂಧಾನ ಮೂಲಕ ಸುಖಾಂತ್ಯ ಕಂಡಿತ್ತು.

ನಿರ್ಮಾಪಕರ ಜೊತೆ ತಗಾದೆ?: 2012 ರಲ್ಲಿ ದರ್ಶನ್‌ ಅವರ ʼಚಿಂಗಾರಿʼ ಸಿನಿಮಾ ರಿಲೀಸ್‌ ಆಗಿ ಸದ್ದು ಮಾಡಿತ್ತು. ಇದೇ ಸಮಯದಲ್ಲಿ ಸಿನಿಮಾದ ನಿರ್ಮಾಪಕ ಮಹದೇವ್ ಜೊತೆ ಸಿನಿಮಾ ಯಶಸ್ಸಾಗಿ ಪ್ರದರ್ಶನ ಕಾಣುತ್ತಿರುವಾಗಲೇ ಕಿರಿಕ್‌ ಮಾಡಿಕೊಂಡಿದ್ದರು ಎನ್ನುವ ಮಾತುಗಳು ಅಂದು ಗಾಂಧಿನಗರದಲ್ಲಿ ಹರಿದಾಡಿತ್ತು. ‌ನಿರ್ಮಾಪಕರಿಗೆ ದರ್ಶನ್‌ ಫೋನ್‌ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿತ್ತು.

Advertisement

ದೂರವಾದ ಕಿಚ್ಚ – ದಚ್ಚು: ಸ್ಯಾಂಡಲ್‌ ವುಡ್‌ ನಲ್ಲಿ ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ದರ್ಶನ್‌ ಹಾಗೂ ಸುದೀಪ್‌ ಮುಖಾಮುಖಿಯಾಗಿ ಮಾತನಾಡದೆ ಎಷ್ಟೋ ವರ್ಷಗಳಾಗಿವೆ. “ನಾನು ಹಾಗೂ ಸುದೀಪ್‌ ಸ್ನೇಹಿತರಲ್ಲ, ನಾವು ಕೇವಲ ಕನ್ನಡ ಚಿತ್ರರಂಗದ ನಟರಷ್ಟೆ. ಯಾವುದೇ ಉಹಾಪೋಹಗಳು ಬೇಡ. ಎಲ್ಲಾ ಮುಗೀತು” ಎಂದು ದರ್ಶನ್ ಟ್ವೀಟ್ ಮಾಡಿದ್ದರು. ಇದಾದ ಕೆಲ ಸಮಯದ ಬಳಿಕ ಸುದೀಪ್‌ ಸಂದರ್ಶನವೊಂದರಲ್ಲಿ ದರ್ಶನ್‌ ಗೆ ʼಮೆಜೆಸ್ಟಿಕ್‌ʼ ಸಿನಿಮಾ ಕೊಡಿಸಿದ್ದು ನಾನೇ. ಆ ಚಿತ್ರದಲ್ಲಿ ನಾನು ನಟಿಸಬೇಕಿತ್ತು ಆದರೆ ನನ್ನ ಡೇಟ್ಸ್ ಇಲ್ಲದ ಕಾರಣಕ್ಕೆ ಆ ಅವಕಾಶವನ್ನ ದರ್ಶನ್‌ಗೆ ಕೊಡಿಸಿದ್ದೆ ಎಂದು ಹೇಳಿದ್ದರು. ಈ ಬಗ್ಗೆ ಸುದೀಪ್‌ ಸ್ಪಷ್ಟನೆ ಕೊಡಲಿ ಎಂದು ದರ್ಶನ್‌ ಪ್ರತಿಕ್ರಿಯೆಯಾಗಿ ಹೇಳಿದ್ದರು.

ಜ್ಯೂ. ಆರ್ಟಿಸ್ಟ್‌ ಮೇಲೆ ಹಲ್ಲೆ ನಡೆಸಿದ್ರಾ ದರ್ಶನ್?‌ : ʼಯುಜಮಾನʼ ಸಿನಿಮಾದ ಶೂಟಿಂಗ್‌ ವೇಳೆ ಹಾಡೊಂದರ ಚಿತ್ರೀಕರಣ ವೇಳೆ ಜ್ಯೂ. ಆರ್ಟಿಸ್ಟ್‌ ಯೊಬ್ಬ ಮೊಬೈಲ್‌ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ಕಾರಣಕ್ಕೆ ದರ್ಶನ್‌ ಆತನ ಮೇಲೆ ಹಲ್ಲೆ ಮಾಡಿದ್ದರು ಎಂದು ಸಹ ಕಲಾವಿದ ಶಿವಶಂಕರ್‌ ಆರೋಪಿಸಿದ್ದರು. ಕೋಟ್ಯಂತರ ರೂ. ಖರ್ಚು ಮಾಡಿ ಸೆಟ್‌ ಸಿನಿಮಾ ನಿರ್ಮಾಣ ಮಾಡಲಾಗುತ್ತದೆ ಚಿತ್ರೀಕರಣದ ಸಂದರ್ಭದಲ್ಲಿ ಮೊಬೈಲ್‌ ನಲ್ಲಿ ಅದನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದು ತಪ್ಪು ಎನ್ನುವ ಕಾರಣಕ್ಕೆ ದರ್ಶನ್‌ ಈ ರೀತಿ ಮಾಡಿದ್ದರು ಎನ್ನಲಾಗಿತ್ತು.

ಜಗ್ಗೇಶ್‌ – ದರ್ಶನ್‌ ಫ್ಯಾನ್ಸ್‌ ಕಿರಿಕ್:‌ ದರ್ಶನ್‌ ಫ್ಯಾನ್ಸ್‌ ಬಗ್ಗೆ ಜಗ್ಗೇಶ್‌ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ ವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಕಾರಣದಿಂದ ದರ್ಶನ್‌ ಫ್ಯಾನ್ಸ್‌  ʼತೋತಾಪುರಿʼ ಸಿನಿಮಾದ ಸೆಟ್‌ ಗೆ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಆದರೆ ಸಂದರ್ಶನವೊಂದರಲ್ಲಿ ಈ ಬಗ್ಗೆ ದರ್ಶನ್‌ ಅವರೇ ಫ್ಯಾನ್ಸ್‌ ಅವರ ಪರವಾಗಿ ಜಗ್ಗೇಶ್‌ ಅವರಲ್ಲಿ ಕ್ಷಮೆ ಕೇಳಿದ್ದರು.

ʼರಾಬರ್ಟ್‌ʼ ನಿರ್ಮಾಪಕ ಉಮಾಪತಿ ಜೊತೆಗಿನ ವಿವಾದ: ʼರಾಬರ್ಟ್‌ʼ ಸಿನಿಮಾದ ಕೆಲ ಸಮಯದ ಬಳಿಕ ನಿರ್ಮಾಪಕ ಉಮಾಪತಿ ಅವರೊಂದಿಗೆ ವಿವಾದ ಹುಟ್ಟಿಕೊಂಡಿತ್ತು. ದರ್ಶನ್‌ ಹೆಸರು ಹೇಳಿಕೊಂಡು ಉಮಾಪತಿ 25 ಕೋಟಿ ವಂಚನೆಗೆ ಯತ್ನಿಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಆ ಬಳಿಕ ಇಬ್ಬರ ನಡುವೆ ʼಕಾಟೇರʼ ಟೈಟಲ್‌ ವಿಚಾರವಾಗಿ ವಿವಾದ ಉಂಟಾಗಿತ್ತು.  ದರ್ಶನ್‌ ವೇದಿಕೆಯಲ್ಲಿ ʼತಗಡೇʼ ಎಂದು ಉಮಾಪತಿಗೆ ಗೌಡರಿಗೆ ಹೇಳಿದ್ದು ವಿವಾದ ಹುಟ್ಟು ಹಾಕಿತ್ತು.

ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಇನ್ನು ನಟ ದರ್ಶನ್‌ ಹೊಟೇಲ್‌ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದರು ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು.  ಮೈಸೂರಿನ ಖಾಸಗಿ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಗಳನ್ನು ಮಾಡಿದ್ದರು. ದರ್ಶನ್ ಹಾಗೂ ಸ್ನೇಹಿತರು ಪಾರ್ಟಿ ಮಾಡಿ, ಸಪ್ಲೆಯರ್ ಗಂಗಾಧರ್ ಎಂಬವರ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್‌ ಆರೋಪಿಸಿದ್ದರು. ಇದಾದ ಬಳಿಕ ಇದಕ್ಕೆ ದರ್ಶನ್‌ ತಿರುಗೇಟು ನೀಡಿದ್ದರು.

ನಿರ್ದೇಶಕ ಪ್ರೇಮ್‌ ಗೆ  ʼಪುಡುಂಗಾʼ ಎಂದಿದ್ದ ದರ್ಶನ್:‌ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ವೇಳೆ ನಿರ್ದೇಶಕ ಪ್ರೇಮ್‌ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. “ಪ್ರೇಮ್ ಏನು ಪುಡಂಗಾ, ಎರಡು ಕೊಂಬೈತಾ? ‘ಕರಿಯ’ದಲ್ಲೂ ನಾವು ನೋಡಿದ್ದೇವೆ ಪ್ರೇಮ್‌ದು ಏನು ಅಂತ” ಎಂದು ಬಿಟ್ಟಿದ್ದರು.

ಈ ಬಗ್ಗೆ ಪ್ರೇಮ್  ಅಸಮಾಧಾನ ವ್ಯಕ್ತಪಡಿಸಿ, ಸುದ್ದಿಗೋಷ್ಠಿಯಲ್ಲಿ ಇನ್ಮುಂದೆ ದರ್ಶನ್ ಜೊತೆ ಸಿನಿಮಾ ಮಾಡುವ ಮಾತೇ ಇಲ್ಲ ಎಂದಿದ್ದರು.. ಇತ್ತೀಚಿಗೆ ಇದೇ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಘೋಷಣೆಯಾಗಿದೆ.

ಮಾಧ್ಯಮಗಳ ಮೇಲೆ ಗರಂ ಆಗಿದ್ದ ದಾಸ: ನಟ ದರ್ಶನ್‌ ಕೆಲವೊಮ್ಮೆ ಮಾತಿನ ಭರದಲ್ಲಿ ಏನೋ ಹೇಳಿ ಬಿಡುತ್ತಾರೆ. ಅಂದು ಮಾಧ್ಯಮಗಳ ಜೊತೆ ಮಾತನಾಡುವಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಕೆಲ ಮಾಧ್ಯಮಗಳು ದರ್ಶನ್‌ ಅವರ ಯಾವುದೇ ಸುದ್ದಿಯನ್ನು ಹಾಕಲು ನಿರ್ಬಂಧ ಹೇರಿತ್ತು. ಕೆಲ ಸಮಯದ ಬಳಿಕ ದರ್ಶನ್‌ ಮಾಧ್ಯಮ ಮಿತ್ರರಿಗೆ ಕ್ಷಮೆಯಾಚಿಸಿದ್ದರು.

ಫಾರ್ಮ್‌ ಹೌಸ್‌ ಮೇಲೆ ಅಧಿಕಾರಿಗಳ ದಾಳಿ: ನಟ ದರ್ಶನ್‌ ಪ್ರಾಣಿಪ್ರಿಯ ವ್ಯಕ್ತಿ. ತನ್ನ  ಫಾರ್ಮ್‌ ಹೌಸ್‌ ನಲ್ಲಿ ಅವರು ಅನೇಕ ಪ್ರಭೇದ ಪ್ರಾಣಿ – ಪಕ್ಷಿಗಳನ್ನು ಸಾಕಿದ್ದಾರೆ. ಇದರಲ್ಲಿ ಬಾರ್‌ ಹೆಡೆಡ್‌ ಗೂಸ್‌ ಎಂಬ ವಿಶಿಷ್ಟ ಪ್ರಭೇದದ ಬಾತುಕೋಳಿ ಇತ್ತು. ಇದನ್ನು ಸಾಕಲು ಅನುಮತಿಯಿಲ್ಲ ಹಾಗಾಗಿ ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಆ ಪಕ್ಷಿಗಳನ್ನು ವಶಕ್ಕೆ ಪಡೆದಿದ್ದರು. ಈ ಪಕ್ಷಿಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧವಾದ ಕಾರಣ ಸಾಕಣೆ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಾಗಿತ್ತು.

ದರ್ಶನ್‌ ಮೇಲೆ ಚಪ್ಪಲಿ ಎಸೆತ: ಹೊಸಪೇಟೆಯಲ್ಲಿ ʼಕ್ರಾಂತಿʼ ಸಿನಿಮಾದ ಹಾಡು ರಿಲೀಸ್‌ ವೇಳೆ ದರ್ಶನ್‌ ಮೇಲೆ ಚಪ್ಪಲಿ ಎಸೆದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.  ದೊಡ್ಡ ಬಸ್‌ ಮೇಲೆ ನಿಂತು ಮೈಕ್‌ ನಲ್ಲಿ ಚಿತ್ರತಂಡ ನಿಂತಿತ್ತು. ಈ ವೇಳೆ ಯಾರೋ ಕಿಡಿಗೇಡಿಗಳು ದರ್ಶನ್‌ ಮೇಲೆ ಚಪ್ಪಲಿ ಎಸೆದಿದ್ದರು. ಆದರೆ ಈ ಬಗ್ಗೆ ದರ್ಶನ್‌ ಶಾಂತವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ಈ ಸಂಬಂಧ ದರ್ಶನ್‌ ಪರ ಚಿತ್ರರಂಗ ಬೆಂಬಲವಾಗಿ ನಿಂತಿತ್ತು.

ಹುಲಿ ಉಗುರು ಪ್ರಕರಣ: ಬಿಗ್‌ ಬಾಸ್‌ ಸ್ಪರ್ಧಿ ಹುಲಿ ಉಗುರು ಧರಿಸಿದ್ದ ಪ್ರಕರಣದ ಬಳಿಕ ಅನೇಕ ಸೆಲೆಬ್ರಿಟಿಗಳ ಹೆಸರು ಕೂಡ ಹುಲಿ ಉಗುರಿನ ವಿಚಾರದಲ್ಲಿ ಕೇಳಿ ಬಂದಿತ್ತು. ನಟ ದರ್ಶನ್‌ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಪೋಟೋ ವೈರಲ್‌ ಆಗಿತ್ತು. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ಮನೆಯಲ್ಲಿ ಶೋಧ ನಡೆಸಿದ್ದರು. 8 ಹುಲಿ ಉಗುರಿನ ಪೆಂಡೆಂಟ್ ದರ್ಶನ್ ಮನೆಯಲ್ಲಿ ಸಿಕ್ಕಿದ್ದವು. ಆದರೆ ಅದೆಲ್ಲ ಅಸಲಿ ಹುಲಿ ಉಗುರು ಅಲ್ಲ ಎನ್ನುವ ಮಾಹಿತಿ ಲಭಿಸಿತ್ತು.

ಮಹಿಳೆ ಮೇಲೆ ದರ್ಶನ್‌ ನಾಯಿ ದಾಳಿ: ಕೇಸ್‌ ದಾಖಲು: ಮಹಿಳೆಯೊಬ್ಬರು ದರ್ಶನ್‌ ಅವರ ಮನೆಯ ನಾಯಿ ತನ್ನ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಕಾರ್ ಪಾರ್ಕಿಂಗ್‌ ವಿಚಾರಕ್ಕೆ ಸಂಬಂಧಿಸಿ ಅಮಿತಾ ಹಾಗೂ ದರ್ಶನ್‌ ಮನೆಯ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ನಡುವೆ ವಾಗ್ವಾದ ಉಂಟಾಗಿತ್ತು. ಈ ವೇಳೆ ಆಕೆಯ ಮೇಲೆ ನಾಯಿ ದಾಳಿ ನಡೆಸಿದೆ ಎಂದು ಆರೋಪಿಸಿ ದೂರು ನೀಡಿದ್ದರು. ದರ್ಶನ್‌ ಹಾಗೂ  ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದರು.

ಅವಧಿ ಮೀರಿ ಪಾರ್ಟಿ ನೋಟಿಸ್‌ ಜಾರಿ: ʼಕಾಟೇರʼ ಸಿನಿಮಾದ ವೇಳೆ ಚಿತ್ರತಂಡ ಜೆಟ್‌ ಲ್ಯಾಗ್‌ ಪಬ್‌ ನಲ್ಲಿ ಒಟ್ಟಿಗೆ ಸೇರಿ ಊಟ ಮಾಡಿತ್ತು.  ಈ ವೇಳೆ ಅವಧಿ ನಟ ದರ್ಶನ್‌ ಹಾಗೂ ಇತರರು ಸೇರಿ ಪಾರ್ಟಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಬಳಿಕ ಪೊಲೀಸರು ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ದರ್ಶನ್, ರಾಕ್​ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಷ್ ಮೊದಲಾದವರು ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಲ್ಲಿ ‘ಊಟ ಮಾಡಿದ್ದೇವೆ ಅಷ್ಟೆ, ಪಾರ್ಟಿ ಮಾಡಿಲ್ಲ’ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next