ಅಮೀನಗಡ: ದೇವಾಲಯಗಳ ತೊಟ್ಟಿಲು ಎಂದೇ ಖ್ಯಾತಿ ಪಡೆದ ರಾಷ್ಟ್ರೀಯ ಪ್ರವಾಸಿ ತಾಣ, ಐಹೊಳೆಯ ದೇವಾಲಯದ ವಾಸ್ತು ಶಿಲ್ಪಗಳ ನಡುವೆ ಕಾಣುತ್ತಿರುವ ಬಿರುಕುಗಳನ್ನು ಕೂಡಲೇ ಸರಿಪಡಿಸಬೇಕು ಎಂದು ನಟ ಅನಿರುದ್ಧ ಜತಕರ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕದ ಅತ್ಯಂತ ಪ್ರಸಿದ್ಧವಾದ, ಅತ್ಯದ್ಭುತ ವಾಸ್ತು ಶಿಲ್ಪ ಕಲೆಯನ್ನು ಹೊಂದಿರುವಂತಹ ಅತ್ಯಂತ ಮಹತ್ವದ ಐತಿಹಾಸಿಕ ಕ್ಷೇತ್ರ ಐಹೊಳೆಯ ದೇವಾಲಯಕ್ಕೆ ಇತ್ತಿಚೆಗೆ ಭೇಟಿ ನೀಡಿದಾಗ, ಅಲ್ಲಿನ ವಾಸ್ತು ಶಿಲ್ಪಗಳ ನಡುವೆ ಅಲ್ಲಲ್ಲಿ ಬಿರುಕುಗಳು ಮೂಡಿರುವುದನ್ನು ನೋಡಿ ತುಂಬಾ ಬೇಸರವಾಯಿತು.
ಐತಿಹಾಸಿಕ ಪ್ರವಾಸಿ ತಾಣ ಐಹೊಳೆಯಲ್ಲಿರುವ ಸ್ಮಾರಕಗಳು ಅತ್ಯಂತ ಪ್ರಾಚೀನವಾದ ವಾಸ್ತು ಶಿಲ್ಪಗಳಿಂದ ರೂಪುಗೊಂಡಿರುವುದು ಮರಳುಗಲ್ಲುಗಳಿಂದ. ಸಾವಿರಕ್ಕೂ ಹೆಚ್ಚು ವರ್ಷಗಳಷ್ಟು ಪುರಾತನವಾದ ಇಲ್ಲಿನ ವಾಸ್ತು ಶಿಲ್ಪಗಳು ಕಾಲಕ್ರಮೇಣ ಶಿಥಿಲಗೊಳ್ಳುವ ಮತ್ತು ತನ್ನ ಸೌಂದರ್ಯ ಕಳೆದುಕೊಳ್ಳುವಂತಹ ಅಪಾಯವಿದೆ. ಹೀಗಾಗಿ, ಪುರಾತತ್ವ ಇಲಾಖೆಯು ಕೂಡಲೇ ಇದನ್ನು ಪರಿಶೀಲಿಸಿ, ಇಲ್ಲಿಯ ವಾಸ್ತು ಶಿಲ್ಪಗಳ ಮೂಲ ರೂಪವನ್ನು ಯಥಾವತ್ತಾಗಿ ಕಾಪಾಡಿಕೊಳ್ಳಲು ಬೇಕಾದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ನಮ್ಮ ನಾಡಿನ ಪ್ರಸಿದ್ಧ ಶಿಲ್ಪಕಲೆಯ ವೈಭವ ಮತ್ತು ಪ್ರಾಚೀನತೆಯನ್ನು ಮುಂದಿನ ಪೀಳಿಗೆಯ ಜನರೂ ಸಹ ನೋಡಿ ಆನಂದಿಸುವಂತಾಗಲು ಅನುವು ಮಾಡಿಕೊಡಬೇಕು, ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಅಪಾರವಾಗಿ ಗೌರವಿಸುವ ತಾವು ಅತಿ ಶೀಘ್ರದಲ್ಲಿಯೇ ಐಹೊಳೆಯ ವಾಸ್ತು ಶಿಲ್ಪಗಳ ನಡುವೆ ಕಾಣುತ್ತಿರುವ ಬಿರುಕುಗಳನ್ನು ಕೂಡಲೇ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: UP Government: ದೇಶದ್ರೋಹಿ ಪೋಸ್ಟ್ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!