Advertisement

ಈ ಜೋಡಿ ಒಟ್ಟು 36 ಸಿನಿಮಾಗಳಲ್ಲಿ ನಟಿಸಿದ್ದೇ ಕನ್ನಡ ಚಿತ್ರರಂಗದ ದಾಖಲೆ

10:53 AM May 09, 2020 | Sharanya Alva |

ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ನಟ ಸಾರ್ವಭೌಮರಾಗಿ ಕನ್ನಡಿಗರ ಮನೆಮಾತಾಗಿ ಜನಪ್ರಿಯರಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ 1960-70ರ ದಶಕದಲ್ಲಿ ಉದಯ್ ಕುಮಾರ್, ರಾಜ್ ಕುಮಾರ್ ಹಾಗೂ ಕಲ್ಯಾಣ್ ಕುಮಾರ್ ದೊಡ್ಡ ಹೆಸರು ಮಾಡಿದ್ದರು. ಅಲ್ಲದೇ ಕುಮಾರ ತ್ರಯರು ಎಂದೇ ಜನಪ್ರಿಯತೆ ಗಳಿಸಿದ್ದರು.

Advertisement

ಇವರಲ್ಲಿ ಉದಯಕುಮಾರ್ ಹೀರೋ, ವಿಲನ್, ಪೋಷಕ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಹೆಸರು ಪಡೆದಿದ್ದರು.  ಉದಯ್ ಕುಮಾರ್ ಅವರು ಬಯಸಿ ಸಿನಿಮಾ ರಂಗಕ್ಕೆ ಬಂದವರಲ್ಲ, ಆಕಸ್ಮಿಕವಾಗಿ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದವರು ಉದಯ್ ಕುಮಾರ್.

ಅದಕ್ಕೆ ಕಾರಣರಾದವರು ಸಾಹಿತ್ಯ ಬ್ರಹ್ಮ ಕಣಗಾಲ್ ಪ್ರಭಾಕರ್ ಶಾಸ್ತ್ರಿ. ಉದಯ್ ಕುಮಾರ್ ಅವರ ಗಡಸು ಧ್ವನಿ ಗುರುತಿಸಿದ್ದ ಅವರು ಸಿನಿಮಾರಂಗಕ್ಕೆ ಕರೆತಂದಿದ್ದರು. ಅವರ ನಟನೆ, ನಟನೆ ಹಾಗೂ ಗಡಸು ಧ್ವನಿ ಶಾಸ್ತ್ರಿ ಅವರನ್ನು ಪ್ರಭಾವಿಸಿದ್ದವು. ಹೀಗೆ 1956ರಲ್ಲಿ ಭಾಗ್ಯೋದಯ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿ ಜೀವನದ ಪ್ರಯಾಣ ಆರಂಭಿಸಿದ್ದರು.

ಉದಯ್ ಕುಮಾರ್ ಅವರ ನಿಜವಾದ ಹೆಸರು ಬೊಮ್ಮಸಂದ್ರ ಶ್ರೀನಿವಾಸಯ್ಯ ಸೂರ್ಯನಾರಾಯಣ ಮೂರ್ತಿ. ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಅವರು ಉದಯ್ ಕುಮಾರ್ ಎಂದು ಪುನರ್ ನಾಮಕರಣ ಮಾಡಿದ್ದರು. ಅದಕ್ಕೆ ಸ್ಫೂರ್ತಿಯಾಗಿದ್ದು ಕುಮಾರ್ ಅವರ ಮೊದಲ ಸಿನಿಮಾ ಭಾಗ್ಯೋದಯ ನಿರ್ಮಿಸಿದ್ದ ಉದಯ್ ಪ್ರೊಡಕ್ಷನ್! ಬಳಿಕ ಕುಮಾರ್ ವರದಕ್ಷಿಣೆ, ಪಂಚರತ್ನ ಸಿನಿಮಾಗಳಲ್ಲಿನ ಅದ್ಭುತ ನಟನೆಯಿಂದಾಗಿ ಜನಪ್ರಿಯರಾಗಿದ್ದರು. ಉದಯ್ ಕುಮಾರ್ ಅವರ ಸಿನಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ತಂದು ಕೊಟ್ಟ ಸಿನಿಮಾ ಮಹಿಷಮರ್ಧಿನಿ. ಇದರಲ್ಲಿ ಡಾ.ರಾಜ್ ಕುಮಾರ್ ಜೊತೆ ಉದಯ್ ಕುಮಾರ್ ನಟಿಸಿದ್ದರು.

ಬರೋಬ್ಬರಿ 36 ಸಿನಿಮಾಗಳಲ್ಲಿ ನಟಿಸಿದ್ದರು ಡಾ.ರಾಜ್ ಮತ್ತು ಉದಯ್ ಕುಮಾರ್:

Advertisement

ಮಹಿಷಮರ್ಧಿನಿ ಸಿನಿಮಾದ ಬಳಿಕ ಉದಯ್ ಕುಮಾರ್ ಮತ್ತು ಡಾ.ರಾಜ್ ಜೋಡಿ ಜನರನ್ನು ಮೋಡಿ ಮಾಡಿತ್ತು. ಅಲ್ಲದೇ ಇಬ್ಬರು ಹೀರೋಗಳು ಒಟ್ಟಾಗಿ ಬರೋಬ್ಬರಿ 36 ಸಿನಿಮಾಗಳಲ್ಲಿ ನಟಿಸಿದ್ದು ಕನ್ನಡ ಸಿನಿಮಾ ಚಿತ್ರರಂಗದಲ್ಲೊಂದು ಮಹತ್ವದ ಮೈಲಿಗಲ್ಲು. ತಂದೆಯಾಗಿ, ಅಳಿಯನಾಗಿ, ವಿಲನ್ ಆಗಿ ಹಾಗೂ ಸಹೋದರನಾಗಿ ಉದಯ್ ಕುಮಾರ್ ಡಾ.ರಾಜ್ ಜತೆ ನಟಿಸಿದ್ದರು.

ಏತನ್ಮಧ್ಯೆ ಉದಯ್ ಕುಮಾರ್ ಗೆ ತಮಿಳು ಚಿತ್ರರಂಗದಲ್ಲಿ ಬೇಡಿಕೆ ಬಂದಿತ್ತು. ಆದರೆ ಕರ್ನಾಟಕದ ಸಿನಿಪ್ರಿಯರು ಉದಯ್ ಕುಮಾರ್ ಅವರನ್ನು ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುವ ಬೇಡಿಕೆ ಇಟ್ಟಿದ್ದರು. ತದನಂತರ ಉದಯ್ ಕುಮಾರ್ ಕನ್ನಡದ ಮೇಲಿನ ಪ್ರೀತಿಯಿಂದ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಲು ಆರಂಭಿಸಿದ್ದರು.

ಸುಮಾರು 171 ಕನ್ನಡ ಸಿನಿಮಾ, 15 ತೆಲುಗು ಹಾಗೂ 8 ತಮಿಳು, ಒಂದು ಹಿಂದಿ ಸಿನಿಮಾದಲ್ಲಿ ಉದಯ್ ಕುಮಾರ್ ನಟಿಸಿದ್ದರು. ತಮಿಳಿನ 8 ಸಿನಿಮಾಗಳಲ್ಲೂ ಹೀರೋ ಆಗಿ ಅಭಿನಯಿಸಿದ್ದರು. ಕಲ್ಯಾಣ್ ಕುಮಾರ್ ಜೊತೆ 12 ಸಿನಿಮಾದಲ್ಲಿ ಜತೆಯಾಗಿ ಉದಯ್ ಕುಮಾರ್ ನಟಿಸಿದ್ದರೆ, ಕುಮಾರ ತ್ರಯರು ಒಟ್ಟಾಗಿ ನಟಿಸಿದ್ದ ಸಿನಿಮಾ ಭೂದಾನ.

ಕಲಾಕೇಸರಿ, ನಟಸಾಮ್ರಾಟ್, ಪವನಸುತಾ ಎಂದು ಬಿರುದಾಂಕಿತರಾಗಿದ್ದು ಉದಯ್ ಕುಮಾರ್ ತಮ್ಮ ಅದ್ಭುತ ಅಭಿನಯಕ್ಕಾಗಿ ಹಲವಾರು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಉದಯ್ ಕುಮಾರ್ ಗೀತರಚನೆಕಾರ, ಕಾದಂಬರಿಕಾರ, ಸಂಗೀತ ನಿರ್ದೇಶಕನಾಗಿ, ನಿರ್ಮಾಪಕ, ನಿರ್ದೇಶಕರಾಗಿಯೂ ದುಡಿದಿದ್ದರು.

2005ರಲ್ಲಿ ಕಲಾಕೇಸರಿ ಉದಯ್ ಕುಮಾರ್ ಅವರ 73ನೇ ಹುಟ್ಟುಹಬ್ಬದ ಸವಿನೆನಪಿನ ಸ್ಮರಣಾರ್ಥವಾಗಿ ಪವನಸುತ ಕೇಸರಿ ಕಲಾ ಶಾಲಾ ಚಾರಿಟೇಬಲ್ ಟ್ರಸ್ಟ್ ಅನ್ನು ಹುಟ್ಟುಹಾಕಲಾಗಿತ್ತು. ವಿಕ್ರಮ್ ಉದಯ್ ಕುಮಾರ್ ಅವರ ಮುಂದಾಳತ್ವದಲ್ಲಿ ಸ್ಥಾಪನೆಯಾಗಿದ್ದು, ಶ್ರೀಮತಿ ಕಮಲಮ್ಮ ಉದಯ್ ಕುಮಾರ್ ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಈ ಟ್ರಸ್ಟ್ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ನೆರವನ್ನು ನೀಡುತ್ತಿದೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next